More

    ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು ಖರೀದಿ

    ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2020- 21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಂದ ಹೆಸರುಕಾಳು ಹಾಗೂ ಉದ್ದಿನಕಾಳನ್ನು ಖರೀದಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸೆ. 21ರಿಂದ ರೈತರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಟಾಸ್ಕ್​ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಎಫ್​ಎಕ್ಯೂ ಗುಣಮಟ್ಟದ ಹೆಸರು ಕಾಳನ್ನು ಪ್ರತಿ ಕ್ವಿಂಟಾಲ್​ಗೆ 7,196 ರೂ.ಗಳಂತೆ ಪ್ರತಿ ರೈತರಿಂದ ಗರಿಷ್ಠ 4 ಕ್ವಿಂಟಾಲ್ ಖರೀದಿಸಲಾಗುವುದು. ಎಫ್​ಎಕ್ಯೂ ಗುಣಮಟ್ಟದ ಉದ್ದಿನ ಕಾಳನ್ನು ಪ್ರತಿ ಕ್ವಿಂಟಾಲ್​ಗೆ 6,000 ರೂ.ಗಳಂತೆ ಪ್ರತಿ ರೈತರಿಂದ ಎಕರೆಗೆ 3 ಕ್ವಿಂಟಾಲ್​ನಿಂದ ಗರಿಷ್ಠ 6 ಕ್ವಿಂಟಾಲ್ ಖರೀದಿಸಲು ಸರ್ಕಾರ ಸೂಚಿಸಿದೆ. ಜಿಲ್ಲಾ ಟಾಸ್ಕ್​ಫೋರ್ಸ್ ಸಮಿತಿಯು ನಾಫೆಡ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೃಷಿ, ತೋಟಗಾರಿಕೆ, ರೇಷ್ಮೆ, ಸಹಕಾರ ಇಲಾಖೆಗಳು ಹಾಗೂ ಸಂಬಂಧಿಸಿದ ಖರೀದಿ ಏಜೆನ್ಸಿಗಳೊಂದಿಗೆ ಸಮನ್ವಯ ಸಭೆ ನಡೆಸಿ, ಗ್ರೇಡರ್​ಗಳ ನಿಯೋಜನೆ, ತಂತ್ರಾಂಶ ಅಭಿವೃದ್ಧಿ ಮತ್ತಿತರ ವಿಷಯಗಳ ಕುರಿತು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾರ್ಗದರ್ಶನ ನೀಡಿ ಗೊಂದಲಗಳಾಗದಂತೆ ರೈತರಿಗೆ ಅಗತ್ಯವಿರುವ ಕಡೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಕಾಳಿನ ಗುಣಮಟ್ಟ, ನೋಂದಣಿ, ಖರೀದಿ ಪ್ರಕ್ರಿಯೆ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು.

    ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ಡಾ. ಪ್ರಭಾಕರ ಅಂಗಡಿ ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದ ನಂತರ ಎನ್​ಐಸಿ ತಂತ್ರಾಂಶದಿಂದ ನಾಫೆಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿ ಒದಗಿಸಲಾಗುವುದು. ನಾಫೆಡ್ ಸಂಸ್ಥೆಯು ತಮ್ಮ ತಂತ್ರಾಂಶದಲ್ಲಿ ಈ ಮಾಹಿತಿಯನ್ನು ಬಳಸಿ ರೈತರಿಂದ ಹೆಸರು ಹಾಗೂ ಉದ್ದಿನ ಕಾಳನ್ನು ಖರೀದಿ ಕೇಂದ್ರಗಳ ಮೂಲಕ ಖರೀದಿಸಲಿದೆ. ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಉತ್ಪನ್ನದ ಮೌಲ್ಯವು ನೇರ ವರ್ಗಾವಣೆ ಮೂಲಕ ಜಮಾ ಆಗಲಿದೆ ಎಂದರು.

    ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ತೋಟಗಾರಿಕೆ ಉಪ ನಿರ್ದೇಶಕ ಕಾಶಿನಾಥ ಸೇರಿದಂತೆ ಸಹಕಾರ ಇಲಾಖೆ, ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳು ಸಭೆಯಲ್ಲಿದ್ದರು.

    ಬೆಳೆ ವಿವರ ದಾಖಲಿಸಲು 23 ಕೊನೇ ದಿನ
    ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೊಬೈಲ್ ಆಪ್ ಮೂಲಕ ರೈತರು ತಾವು ಬೆಳೆದ ಬೆಳೆಯ ವಿವರ ದಾಖಲಿಸುವ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯ 2,98,750 ಪ್ಲಾಟ್​ಗಳಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿದೆ. ಆದರೆ, ಈವರೆಗೆ 1,21,938 ಪ್ಲಾಟ್​ಗಳಲ್ಲಿ ಮಾತ್ರ ಸಮೀಕ್ಷೆ ಕೈಗೊಂಡು ರೈತರು ಆಪ್ ಮೂಲಕ ಬೆಳೆಯ ವಿವರ ಸಲ್ಲಿಸಿದ್ದಾರೆ. ಈವರೆಗೆ ಶೇ. 40.81ರಷ್ಟು ಪ್ರಗತಿಯಾಗಿದ್ದು, ಇನ್ನೂ 1,76,812 ಪ್ಲಾಟ್​ಗಳಲ್ಲಿ ಬೆಳೆ ಸಮೀಕ್ಷೆ ಬಾಕಿ ಇದೆ. ಅದಕ್ಕಾಗಿ ಸೆ. 23ರವರೆಗೆ ಬೆಳೆ ಸಮೀಕ್ಷೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ರೈತರು ತಾವು ಬೆಳೆದಿರುವ ಬೆಳೆ ವಿವರಗಳನ್ನು ಸರ್ವೆ ನಂಬರ್​ವಾರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ಕಡ್ಡಾಯವಾಗಿ ದಾಖಲಿಸಬೇಕು. ಬೆಳೆ ಸಮೀಕ್ಷೆ ಆಪ್ ಮೂಲಕ ಬೆಳೆಯ ವಿವರಗಳನ್ನು ದಾಖಲಿಸದಿದ್ದರೆ ತಾಂತ್ರಿಕ ಕಾರಣಗಳಿಂದಾಗಿ ರೈತರು ಬೆಳೆಸಾಲ, ಬೆಳೆವಿಮೆ, ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಇತರ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಬೆಳೆ ಸಮೀಕ್ಷೆಗೆ ರೈತರ ಸಹಭಾಗಿತ್ವ ಮತ್ತು ಸಹಕಾರ ಅಗತ್ಯವಾಗಿದ್ದು, ಜಿಲ್ಲೆಯ ಎಲ್ಲ ಪ್ಲಾಟ್​ಗಳನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ. ಬಿಜಾಪುರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts