More

    ಬೂದನೂರು ಗ್ರಾಮದಲ್ಲಿ ಸಲಗ ದಾಂಧಲೆ

    ಎಚ್.ಡಿ.ಕೋಟೆ: ತಾಲೂಕಿನ ಬೂದನೂರು ಗ್ರಾಮಕ್ಕೆ ಸೋಮವಾರ ಬಂದ ಸಲಗವೊಂದು ಗ್ರಾಮದಲ್ಲೆಲ್ಲ ಓಡಾಡಿದೆ.


    ವೀರನಹೊಸಹಳ್ಳಿ ಅರಣ್ಯದಿಂದ ಬೆಳ್ಳಂಬೆಳಗ್ಗೆ ಬೂದನೂರು ಗ್ರಾಮದೊಳಗೆ ಬಂದ ಕಾಡಾನೆ ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮದೊಳಗೆ ದಾಂಧಲೆ ನಡೆಸಿದೆ. ಗ್ರಾಮದ ಹೆಬ್ಬಲಗುಪ್ಪೆ ಪ್ರಕಾಶ್, ಮಾಂತದೇವರ ಮಗ ರಾಜೇಶ, ಮಹಾದೇವಪ್ಪ ಅವರ ಮಗ ನಾಗರಾಜು ಎಂಬುವರ ಮನೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದೆ. ಮನೆಗಳ ಮುಂದೆ ಕಟ್ಟಿ ಹಾಕಿದ ಜಾನುವಾರುಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಕೆಲ ಜಾನುವಾರುಗಳು ಕಾಲು ಮುರಿತಕ್ಕೆ ಒಳಗಾಗಿವೆ.


    ಕಾಡಾನೆ ಗ್ರಾಮದೊಳಗೆ ಪ್ರವೇಶ ಮಾಡಿದ್ದನ್ನು ಕಂಡು ದಿಗ್ಬ್ರಮೆಗೊಂಡ ಗ್ರಾಮಸ್ಥರು ಕೆಲಕಾಲ ಆತಂಕಕ್ಕೀಡಾಗಿದ್ದರು. ನಂತರ ಎಲ್ಲರೂ ಸೇರಿ ಅರ್ಧಗಂಟೆಗೂ ಹೆಚ್ಚು ಕಾಲ ಚೀರಾಟ ಕಿರುಚಾಟ ನಡೆಸಿ, ಕಲ್ಲು ತೂರಿ ಗ್ರಾಮದಿಂದ ಹೊರಗೆ ಆನೆಯನ್ನು ಓಡಿಸಿದರು. ನಂತರ ತೆಂಗಿನ ತೋಟಕ್ಕೆ ನುಗ್ಗಿದ ಕಾಡಾನೆ ತೆಂಗಿನ ಗಿಡ, ಬಾಳೆ ಗಿಡ, ಕೋಸು ಬೆಳೆಯನ್ನು ನಾಶಪಡಿಸಿದೆ. ಬೆಳಗ್ಗೆ 9 ಗಂಟೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಿಂದ ಸಲಗವನ್ನು ಅರಣ್ಯಕ್ಕೆ ಓಡಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾದರು.


    ಬೂದನೂರು ಗ್ರಾಮಕ್ಕೆ ಕಾಡಾನೆ ನುಗ್ಗಿ ದಾಂಧಲೆ ನಡೆಸುತ್ತಿರುವ ವಿಚಾರವನ್ನು ಅರಣ್ಯ ಇಲಾಖೆ ಗಮನಕ್ಕೆ ದೂರವಾಣಿ ಮೂಲಕ ತಿಳಿಸಿಒಂದು ಗಂಟೆಯಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


    ಕಾಡಾನೆ ಹಾವಳಿ ತಡೆಗಟ್ಟಲು ಈ ಹಿಂದೆ ಚಕ್ಕೋಡನಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಹಿಸದೆ ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮದ ಮುಖಂಡ ಉಡ ನಾಗರಾಜು ಆರೋಪಿಸಿದರು.

    ದಸರಾ ಮುಗಿದ ಬಳಿಕ ಆನೆ ಸೆರೆ: ಕಾಡಾನೆ ಗ್ರಾಮದ ಬಳಿ ಬಂದಿರುವ ವಿಚಾರ ತಿಳಿದ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಲಾಯಿತು. ಆನೆ ಕಾಡಂಚಿನ ಜಮೀನಿನಿಂದ ಗ್ರಾಮದೊಳಗೆ ನುಗ್ಗಿ ದಾಂಧಲೆ ನಡೆಸಿದೆ. ನಂತರ ಗ್ರಾಮಸ್ಥರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗೆ ಓಡಿಸಲಾಯಿತು. ಕಳೆದ ಎರಡು ತಿಂಗಳಿಂದ ಇದೇ ಆನೆ ಕಾಡಂಚಿನ ಜಮೀನಿನಲ್ಲಿ ಬೆಳೆ ನಷ್ಟ ಉಂಟುಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದರು. ಆದರೆ ಸೋಮವಾರ ಗ್ರಾಮದೊಳಗೆ ಬಂದು ದಾಂಧಲೆ ನಡೆಸಿದೆ. ದಸರಾ ಮುಗಿದ ನಂತರ ಆನೆಯನ್ನು ಸೆರೆ ಹಿಡಿಯಲು ಕ್ರಮವಹಿಸಲಾಗುವುದು. ಅಲ್ಲಿಯವರೆಗೆ ಕಾಡಾನೆ ನಾಡಿಗೆ ಬಾರದಂತೆ ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದು ವೀರನಹೊಸಹಳ್ಳಿ ಅರಣ್ಯ ವಲಯ ಆರ್‌ಎಫ್‌ಒ ನಮನಾ ನಾಯಕ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts