More

    ಬುದ್ಧ, ಬಸವ, ಅಂಬೇಡ್ಕರ್ ಸಮಾಜಕ್ಕೆ ಮಾರ್ಗದಾತರು: ವಿ.ಶ್ರೀನಿವಾಸಪ್ರಸಾದ್ ಬಣ್ಣನೆ

    ಮೈಸೂರು: ಬುದ್ಧ, ಬಸವ, ಅಂಬೇಡ್ಕರ್ ಅವರು ಮಹಾನ್ ಮಾನವತವಾದಿಗಳಾಗಿದ್ದು, ಸಮಾಜಕ್ಕೆ ಮಾರ್ಗದಾತರು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಬಣ್ಣಿಸಿದರು.
    ಡಾ.ಬಿ.ಆರ್.ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್, ಸಮಾನತೆ, ಸ್ವಾಭಿಮಾನ, ಸ್ವಾಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನದಿಂದ ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
    ಬಡಜನರ ಕಲ್ಯಾಣ ಬಯಸಿ ತಮ್ಮದೇ ಚಿಂತನೆಗಳ ಮೂಲಕ ಜಗತ್ತಿನ ಗಮನ ಸೆಳೆದವರು. ಬೌದ್ಧ ಧರ್ಮ ಭಾರತದಲ್ಲೇ ಹುಟ್ಟಿದರೂ ಅದು ಹೆಚ್ಚು ಪ್ರವಧರ್ಮಾನಕ್ಕೆ ಬಂದದ್ದು ಮಾತ್ರ ಚೀನಾ, ಜಪಾನ್, ಕೊರಿಯಾದಂತಹ ರಾಷ್ಟ್ರಗಳಲ್ಲಿ ಎಂದು ಬೇಸರ ವ್ಯಕ್ತಪಡಿಸಿದರು.
    ಬುದ್ಧನ ಭಾರತದಲ್ಲಿ ಜಾತಿರಹಿತ ಸಮಾಜದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇತ್ತು. ಆತ ಜಗತ್ತಿನ ಎಲ್ಲ ವಿಷಯಗಳನ್ನು ತಿಳಿಸಿದ ಸರ್ವಶ್ರೇಷ್ಠ ಚಿಂತಕನಾಗಿದ್ದ. ಬುದ್ಧ ಕೇವಲ ಏಷ್ಯಾದ ಬೆಳಕಲ್ಲ. ಇಡೀ ಪ್ರಪಂಚದ ಬೆಳಕಾಗಿದ್ದು, ಮೋಕ್ಷದಾತ ಎನ್ನುವುದಕ್ಕಿಂತ ಆತ ಮಾರ್ಗದಾತ ಆಗಿದ್ದ ಎಂದು ಹೇಳಿದರು.
    ವೈದಿಕ ಕುಲದಲ್ಲಿ ಹುಟ್ಟಿದ ಬಸವಣ್ಣ 12ನೇ ಶತಮಾನದಲ್ಲೇ ಜಾತಿ ಮತ್ತು ಲಿಂಗ ಬೇಧಗಳ ವಿರುದ್ಧ ಸಿಡಿದವರು. ವೈದಿಕ ಚಿಂತನೆಗಳನ್ನು ತಿರಸ್ಕರಿಸಿ ಸಮಾನತೆ ಸಾರುವ ವಚನಗಳ ತಳಹದಿಯ ಮೇಲೆ ಲಿಂಗಾಯತ ಎಂಬ ಧರ್ಮ ಹುಟ್ಟು ಹಾಕಿದರು. ವಚನಗಳಲ್ಲಿ ಮಾನವೀಯತೆ ಸ್ಪಂದಿಸುವ ಗುಣವಿದೆ. ಕಾಯಕವೇ ಕೈಲಾಸ, ಪ್ರತಿಯೊಂದು ಜಾತಿಯೂ ಶ್ರೇಷ್ಠ. ಹುಟ್ಟಿನಿಂದ ಯಾರೂ ಶ್ರೇಷ್ಠ ಮತ್ತು ಕನಿಷ್ಠ ಅಲ್ಲ ಎಂದು ಹೇಳಿದ ಮಹಾನ್ ತತ್ವಜ್ಞಾನಿ ಎಂದು ಹೇಳಿದರು.
    ಸ್ವತಃ ತಾವೇ ಅಸ್ಪಶ್ಯತೆ ನೋವುಂಡಿದ್ದ ಅಂಬೇಡ್ಕರ್ ಇಂತಹ ಕಳಂಕದ ವಿರುದ್ಧ ದೊಡ್ಡ ಹೋರಾಟ ಮಾಡಿದರು. ಅಸ್ಪಶ್ಯತೆ ನಾಶ ಮಾಡುವುದು ನನ್ನ ಜನ್ಮಸಿದ್ದ ಹಕ್ಕು ಎಂದರು. ಅವರು ಸಾಮಾಜಿಕ ನೋವು ಅನುಭವಿಸಿದ್ದ ಕಾರಣ ಸಂವಿಧಾನ ಕರಡು ಸಮಿತಿಯಲ್ಲಿ ಸಮಾನತೆಗೆ ಆಗ್ರಹಿಸಿದರು. ದೇಶದ ಮೂಲ ಸಮಸ್ಯೆಗಳಿಗೆ ಅದ್ಭುತ ನೀಲನಕ್ಷೆ ತಯಾರಿಸಿದರು. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ್ದಾರೆ ಎಂದು ಹೇಳಿದರು.
    ವಿಶ್ವಮೈತ್ರಿ ಬುದ್ಧವಿಹಾರದ ಕಲ್ಯಾಣಸಿರಿ ಭಂತೇಜಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಈ ಮೂವರು ಮಾನವ ಜಗತ್ತು ಕಂಡ ಮಹಾಜ್ಞಾನಿಗಳು. ಬುದ್ಧಗುರು ಎಲ್ಲ ಕಾಲಕ್ಕೂ ನಿಲ್ಲುವ ಮಹಾನ್ ಶ್ರೇಷ್ಠಚಿಂತಕ. ಅವರ ದಮ್ಮ ಮಾನವ ದಮ್ಮವಾಗಿದೆ. ಜಗತ್ತಿನ ಉಗಮದ ಬಗ್ಗೆ ಅನೇಕ ಕಾಲ್ಪನಿಕ ವಿಚಾರಗಳಿವೆ. ಆದರೆ, ಬುದ್ಧ ಜಗತ್ತು ಸ್ವಯಂಚಾಲಿತವಾಗಿದೆ ಎಂದು ಸತ್ಯಾನ್ವೇಷಣೆಯಿಂದ ಕಂಡುಕೊಂಡರು. ಇಂತಹ ಸತ್ಯವನ್ನು ಜಗತ್ತಿನ ಐದು ನಿಯಮದಲ್ಲಿ ತೋರಿಸಿದ್ದಾರೆ ಎಂದರು.
    ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಸ್.ಶಿವರಾಜಪ್ಪ, ಪ್ರೊ.ನೀಲಗಿರಿ ತಳವಾರ, ಪ್ರೊ.ಡಿ.ಆನಂದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts