More

    ಬುಡಕಟ್ಟು ಜನಾಂಗಕ್ಕೆ ಸೌಕರ್ಯ ಕಲ್ಪಿಸುವುದು ಅಗತ್ಯ

    ಹಾನಗಲ್ಲ: ಬುಡಕಟ್ಟು ಜನಾಂಗವು ಸರ್ಕಾರದ ಅನುಕಂಪ ನಿರೀಕ್ಷಿಸುತ್ತಿಲ್ಲ. ಗಿರಿಜನರ ಹಕ್ಕುಗಳಿಗೆ ರಕ್ಷಣೆ ನೀಡುವುದು, ಅವರ ಅಗತ್ಯ ಸೌಕರ್ಯಗಳನ್ನು ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದ ಕುಮಾರೇಶ್ವರ ಮಂಗಲಭವನದಲ್ಲಿ ಬುಧವಾರ ಆಯೋಜಿಸಿದ್ದ ಹಾವೇರಿ ಜಿಲ್ಲಾ ಮಟ್ಟದ ಗಿರಿಜನ ಸುರಕ್ಷಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ಮಾಜಿ ಪ್ರಧಾನಿ ವಾಜಪೇಯಿ ಕಾಲದಿಂದ ಮೋದಿ ಕಾಲದವರೆಗೆ ಬುಡಕಟ್ಟು ಆಯೋಗ ರಚಿಸಿ, ಅವರಿಗೆ ಹಕ್ಕುಗಳನ್ನು ನೀಡುವುದಕ್ಕಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇಂಥ ಸಮುದಾಯಗಳ ಆರ್ಥಿಕ, ಸಾಮಾಜಿಕ ದೌರ್ಬಲ್ಯ ಬಳಸಿಕೊಂಡು ನಡೆಯುತ್ತಿರುವ ಮತಾಂತರಗಳಿಂದ ಬುಡಕಟ್ಟು

    ಜನಾಂಗವನ್ನು ರಕ್ಷಿಸಬೇಕಾಗಿದೆ. ಗಿರಿಜನರ ಹಕ್ಕುಗಳು ಸುರಕ್ಷಿತಗೊಳ್ಳಬೇಕಾಗಿದೆ. ಶೈಕ್ಷಣಿಕವಾಗಿ ಇವರನ್ನು ಮುಖ್ಯವಾಹಿನಿಗೆ ಸೇರಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದ್ಯಕರ್ತವ್ಯವಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ, ಬುಡಕಟ್ಟು ಜನಾಗದ ಹೋರಾಟಗಾರ ಶಾಂತಾರಾಮ ಸಿದ್ದಿ ಮಾತನಾಡಿ, ಗಿರಿಜನರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಬೇಕು. ಬುಡಕಟ್ಟು ಜನರನ್ನು ಕಾಡಿನ ಒಂದು ಭಾಗವಾಗಿ ಪರಿಗಣಿಸಬೇಕು. ಅರಣ್ಯ ಅಭಿವೃದ್ಧಿಯಲ್ಲಿನ ಎಲ್ಲ ಸೌಲಭ್ಯಗಳು ಬುಡಕಟ್ಟು ಜನರಿಗೆ ದಕ್ಕಬೇಕು. ಆರ್ಥಿಕ, ಸಾಮಾಜಿಕವಾಗಿ ನಿರ್ಲಕ್ಷಿತ ಕಾಡು ವಾಸಿ ಜನಾಂಗ ಮತಾಂತರಕ್ಕೆ ಗುರಿಯಾಗುತ್ತಿದೆ. ಗಿರಿಜನ ಸುರಕ್ಷಾ ವೇದಿಕೆ ಮೂಲಕ ಬುಡಕಟ್ಟು ಜನಾಂಗವನ್ನು ಅಭಿವೃದ್ಧಿ ಪಥದತ್ತ ತರಬೇಕು. ಬುಡಕಟ್ಟು ಜನಾಂಗ ಮತಾಂತರಕ್ಕೆ ಒಳಗಾಗದಂತಹ ವಾತಾವರಣ ನಿರ್ವಣಗೊಳ್ಳಬೇಕು ಎಂದು ಸಿದ್ದಿ ಗಿರಿಜನ ಸುರಕ್ಷಾ ವೇದಿಕೆ ಮೂಲಕ ಆಗ್ರಹಿಸಿದರು.

    ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಸರ್ಕಾರದ ಹಲವು ಯೋಜನೆಗಳು ಜಾರಿಯಲ್ಲಿವೆ. ಅವುಗಳ ಮಾಹಿತಿ ನೀಡುವ ಹಾಗೂ ಜಾಗೃತಿ ಕೈಗೊಳ್ಳುವ ಅಗತ್ಯವಿದೆ. ಗಿರಿಜನ ಕಲ್ಯಾಣಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.

    ಸಾನ್ನಿಧ್ಯವಹಿಸಿದ್ದ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕಾಡು ವಾಸಿಗಳಿಂದ ಅರಣ್ಯ ಅತಿಕ್ರಮಣವಾಗಲಿಲ್ಲ. ಇದರ ಬದಲಾಗಿ ಕಾಂಕ್ರೀಟ್ ಕಾಡಿನಲ್ಲಿರುವ ಸ್ವಾರ್ಥಿಗಳ ಪಾಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗಿರಿಜನ ಸುರಕ್ಷಾ ವೇದಿಕೆಯ ಅಧ್ಯಕ್ಷ ಗಿರೀಶ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ, ಎಪಿಎಂಸಿ ಸದಸ್ಯ ರಾಮಣ್ಣ ಮಾದಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts