More

    ಬೀದಿ ನಾಟಕ ಮೂಲಕ ಮತ ಜಾಗೃತಿ 

    ದಾವಣಗೆರೆ: ಇವತ್ತು ಮತದಾನದ ದಿನ ಅಂತ ಗೊತ್ತಿಲ್ವ ಅಜ್ಜಿ. ನೀನಿನ್ನೂ ಮತ ಹಾಕಿಲ್ವ. ಮತ ಹಾಕಿ ಬಂದರೆ ಮಾತ್ರಾನೆ ನಿನ್ನ ಬಳಿ ತರಕಾರಿ ತಗೋತೀನಿ..
    ಮಗಳೇ.. ಕಳೆದ ಬಾರಿ ನಮ್ಮ ಜತೆ ಬರುವುದಾಗಿ ಹಠ ಮಾಡಿದ್ದೆ, ಈ ಬಾರಿ ಮತದಾರರ ಚೀಟಿ ಕೊಡುಗೆಯಾಗಿ ನೀಡಿದ್ದೇವೆ. ನೀನೂ ಬಂದು ಮತದಾನ ಮಾಡು..
    -ಸ್ವೀಪ್ ಅಭಿಯಾನದಡಿ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಗಾಂಧಿನಗರ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರದರ್ಶಿಸಿದ 40 ನಿಮಿಷ ಅವಧಿಯ ಕಿರು ಬೀದಿನಾಟಕದ ತುಣುಕುಗಳಿವು.
    ‘ಚುನಾವಣೆ ಸಂತೆ ಅಲ್ಲ, ಮತ ಮಾರಾಟಕ್ಕಿಲ್ಲ..’ ಶೀರ್ಷಿಕೆಯಡಿ ಕಾರ್ಯಕರ್ತೆಯರೇ ರಚಿಸಿ, ನಿರ್ದೇಶನ ಮಾಡಿದ ನಾಟಕವನ್ನು ಅಭಿನಯಿಸುವ ಮೂಲಕ ನೋಡುಗರ ಗಮನ ಸೆಳೆದರು.
    ಯುವ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ಜವಾಬ್ದಾರಿ ಪ್ರದರ್ಶಿಸಬೇಕು. ವ್ಯಾಪಾರಸ್ಥರು, ತರಕಾರಿ ಮಾರುವವರು ಕೂಡ ಸಬೂಬು ಹೇಳದೆ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಆಮಿಷಕ್ಕೆ ಮರುಳಾಗಿ ಮತದಾನ ಮಾಡದೆ ಸಿ ವಿಜಿಲ್ ಆ್ಯಪ್ ಮೂಲಕ ಆಮಿಷ ಒಡ್ಡುವವರನ್ನು ಹಿಡಿದುಕೊಡಬೇಕು ಎಂಬ ಸಂದೇಶಗಳನ್ನು ನಾಟಕ ಬಿತ್ತರಿಸಿತು.
    ಮೇ 10 ರಂದು ತಪ್ಪದೇ ಮತದಾನ ಮಾಡಿ, ನಮ್ಮ ಮತ ದೇಶಕ್ಕೆ ಹಿತ, ಮತದಾನ ನಮ್ಮ ಹಕ್ಕು. ನಮ್ಮ ಮತ ಮಾರಾಟಕ್ಕಲ್ಲ ಎಂಬ ಘೋಷಣೆಗಳು ಮೊಳಗಿದವು. ಮತ ಹಾಕು ತರುಣಿ.. ಮೊದಲಾದ ಮತ ಜಾಗೃತಿ ಗೀತೆಗಳು ಹೆಣ್ಣುಮಕ್ಕಳನ್ನು ಸೆಳೆದವು.
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಕವಿತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts