More

    ಬೀದಿಬದಿ ವ್ಯಾಪಾರಿಗಳಿಗೆ ತರಬೇತಿ

    ಚಾಮರಾಜನಗರ: ಬೀದಿಬದಿ ವ್ಯಾಪಾರಿಗಳು ಕಾನೂನು ಬದ್ಧವಾಗಿ ವ್ಯಾಪಾರ ಮಾಡಿದರೆ ಕಾನೂನು ಸಹ ನಿಮ್ಮನ್ನು ರಕ್ಷಿಸುತ್ತದೆ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ಸಲಹೆ ನೀಡಿದರು.


    ನಗರದ ವರ್ತಕರ ಭವನದಲ್ಲಿಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಗಾರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.


    ಸರ್ಕಾರವು ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಮಗೆ ನೀಡುವ ವ್ಯಾಪಾರ ಪರವಾನಗಿಯನ್ನು ಮತ್ತೊಬ್ಬರಿಗೆ ನೀಡಿ ವ್ಯಾಪಾರ ಮಾಡಲು ಅನುವು ಮಾಡಿಕೊಡಬಾರದು. ಈ ನಿಟ್ಟಿನಲ್ಲಿ ನಿಮ್ಮ ವ್ಯಾಪಾರ ಕಾನೂನು ಬದ್ದವಗಿರಬೇಕು. ವ್ಯಾಪಾರದ ಜೊತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.


    ಮಧ್ಯಮ ವರ್ಗದ ಜನರು ಬೀದಿಬದಿ ವ್ಯಾಪಾರಿಗಳನ್ನೇ ಹೆಚ್ಚು ಅವಲಂಬಿಸಿರುತ್ತಾರೆ. ಬಹುತೇಕ ವ್ಯಾಪಾರಿಗಳು ಸಾಲಕ್ಕೆ ಸಿಲುಕಿರುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರವು ಕಡಿಮೆ ಬಡ್ಡಿದರದಲ್ಲಿ ಕಿರುಸಾಲ ಯೋಜನೆ ಸೌಲಭ್ಯಗಳನ್ನು ತಂದಿದೆ. ವ್ಯಾಪಾರಿಗಳು ಕಾರ್ಯಗಾರದಲ್ಲಿ ಕಾನೂನು, ಬ್ಯಾಂಕ್ ವ್ಯವಹಾರಗಳ ಅರಿವನ್ನು ಪಡೆದು ಸದುಪಯೋಗಪಡೆದುಕೊಳ್ಳಬೇಕು ಸಲಹೆ ನೀಡಿದರು.


    ಕೌಶಲ್ಯಾಭಿವೃದ್ಧಿ ಅಧಿಕಾರಿ ಮಹಮ್ಮದ್ ಅಕ್ಬರ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಈಗಾಗಲೇ ಮೊದಲನೇ ಹಂತದಲ್ಲಿ 10 ಸಾವಿರ ರೂ. ಗಳನ್ನು ಕಿರುಸಾಲ ಸೌಲಭ್ಯ ಯೋಜನೆಯಡಿ ನೀಡಲಾಗಿದೆ. ಅದನ್ನು ಮರುಪಾವತಿ ಮಾಡಿದವರು ಎರಡನೇ ಹಂತದಲ್ಲಿ 20 ಸಾವಿರ ರೂ.ಗಳನ್ನು ಪಡೆಯಬಹುದು. ವ್ಯಾಪಾರಿಗಳು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಮತ್ತಷ್ಟು ಸಾಲ ಪಡೆಯಲು ಅರ್ಹರಾಗಿ ಎಂದರು.


    ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಸುರೇಶ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವಲ್ಲಿ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ಸ್ವ ಸಹಾಯ ಸಂಘಗಳಿಗೆ ಸಾಲ ಒದಗಿಸುವುದರಲ್ಲಿಯೂ ಮೂರನೇ ಸ್ಥಾನದಲ್ಲಿದೆ. ಆರ್ಥಿಕ ನೆರವು ನೀಡುವಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಮತ್ತಷ್ಟು ಶ್ರಮ ವಹಿಸಿ ಮೊದಲನೇ ಸ್ಥಾನ ಪಡೆಯಲು ಮುಂದಾಗಲಿವೆ ಎಂದು ಹೇಳಿದರು.


    ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ ವಕೀಲ ಎಸ್. ಮಂಜುನಾಥ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ಕಲ್ಪಿಸಿರುವ ವಿವಿಧ ಯೋಜನೆ ಸೌಲಭ್ಯ ಪಡೆಯಲು ಮಧ್ಯವರ್ತಿಗಳ ಮೊರೆ ಹೋಗಬಾರದು. ನೇರವಾಗಿ ಅಧಿಕಾರಿಗಳನ್ನೇ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬೇಕು. ಮಧ್ಯವರ್ತಿಗಳ ಮೊರೆ ಹೋಗಿ ಹಣ ಕಳೆದುಕೊಳ್ಳಬೇಡಿ ಎಂದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖಾ, ನಗರಸಭೆ ಪೌರಾಯುಕ್ತರಾದ ಸಿ.ಎಂ. ನಟರಾಜು, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ್, ಕೌಶಲ್ಯಾಭಿವೃದ್ದಿ ಇಲಾಖೆ ವ್ಯವಸ್ಥಾಪಕರು ಹಮ್ಜತ್ ಪಾಷ, ಪುಟ್ಟಸ್ವಾಮಿ, ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts