More

    ಬಿಸಿಲಿಗೆ ಬೆದರಿದ ಬೀದರ್ ಜನ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಅಬ್ಬಾ, ಯಾನ್ ಬಿಸುಲ್ರಿ. ಭೆಂಕಿ ಭೆಂಕಿ ಆಗ್ಯಾದ್ ! ಸದ್ಯ ಬೀದರ್ ಜಿಲ್ಲೆ ಜನರಿಂದ ಕೇಳಿಬರುತ್ತಿರುವ ಸಾಮಾನ್ಯ ಉದ್ಗಾರವಿದು. ಎರಡು ವಾರಗಳಿಂದ ತೀವ್ರವಾಗಿರುವ ಬಿಸಿಲಿನ ತಾಪಕ್ಕೆ ಜನ ಅಕ್ಷರಶಃ ಬೆದರಿದ್ದಾರೆ.

    ಜಿಲ್ಲೆಯಲ್ಲಿ ದಿನೇದಿನೆ ಬಿಸಿಲು ಹೆಚ್ಚುತ್ತಿದೆ. ಕೆಲ ದಿನಗಳಿಂದ ಉಷ್ಣಾಂಶದ ಪ್ರಕೋಪ ಗಣನೀಯ ವೃದ್ಧಿಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಜಿಲ್ಲೆಯ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್​ಗೆ ಏರಿದೆ. ತೀವ್ರ ಸೆಕೆ, ಝಳ, ಬಿಸಿ ಗಾಳಿಯಿಂದ ಜನರು ಕಂಗಾಲಾಗಿದ್ದಾರೆ.

    ಬಿಸಿಲ ತಾಪದಿಂದ ಅನೇಕರು ಮಧ್ಯಾಹ್ನ ಮನೆ ಹೊರಗೆ ಬರಲೂ ಹೆದರುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನ 1ರಿಂದ ಸಂಜೆ 4ರವರೆಗೆ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ಕಡಿಮೆ ಕಾಣುತ್ತಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಮಾರ್ಕೆಟ್​ಗಳಲ್ಲಿ ವ್ಯಾಪಾರ ಸಹ ಥಂಡಿ ಹೊಡೆದಿದೆ. ಬಿಸಿಲ ಝಳ ಹೆಚ್ಚಿದ್ದರಿಂದ ಮನೆಗಳಲ್ಲಿನ ಫ್ಯಾನ್, ಕೂಲರ್ ಸಹ ಬಿಸಿ ಗಾಳಿಯೇ ಸೂಸುತ್ತಿವೆ. ಇನ್ನು ಆಗಾಗ್ಗೆ ವಿದ್ಯುತ್ ಕೈಕೊಟ್ಟಾಗ ತಾಪ ಹೇಳತೀರದಾಗಿದೆ.

    ಬಿಸಿಲಾಘಾತದಿಂದ ಮಕ್ಕಳನ್ನು ಸಂರಕ್ಷಿಸಬೇಕಿದೆ. ಹೆಚ್ಚುತ್ತಿರುವ ಬಿಸಿಲಿನ ಪ್ರತಿಕೂಲ ಪರಿಣಾಮ 12 ವರ್ಷದೊಳಗಿನ ಮಕ್ಕಳ ಮೇಲಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ರಜೆ ಮಜೆಗಾಗಿ ಅತ್ತಿತ್ತ ಸುತ್ತಾಡುತ್ತಿರುವ ಮಕ್ಕಳು ಬಿಸಿಲಿನ ಹೊಡೆತಕ್ಕೆ ಸಿಲುಕದಂತೆ ಎಚ್ಚರ ವಹಿಸಬೇಕಿದೆ. ದೊಡ್ಡವರಿಗೆ ಹೋಲಿಸಿದರೆ ಮಕ್ಕಳಲ್ಲಿ ರೆಸಿಸ್ಟೆನ್ಸ್ ಪವರ್ (ರೋಗ ನಿರೋಧಕ ಶಕ್ತಿ) ಕಮ್ಮಿ. ಹೀಗಾಗಿ ಪ್ರಖರ ಬಿಸಿಲು ಇವರಿಗೆ ಸಂಕಷ್ಟ ತರಬಲ್ಲದು. ಬಿಸಿಲಿನಿಂದ ಬಾಯಾರಿಕೆ ಜಾಸ್ತಿಯಾಗುತ್ತದೆ. ತಂಪು ಬೇಕೆನಿಸುತ್ತದೆ. ಇಂಥ ಸಂದರ್ಭದಲ್ಲಿ ಮಕ್ಕಳು ಐಸ್ಕ್ರೀಮ್, ಐಸ್ ಹಾಕಿದ ಜ್ಯೂಸ್, ಫ್ರಿಜ್​ನಲ್ಲಿನ ತಂಪು ನೀರು ಬಯಸುತ್ತಾರೆ. ಇದರ ಸೇವನೆಯಿಂದ ಗಂಟಲಿನ ಇನ್ಫೆಕ್ಶನ್ ಆಗುತ್ತದೆ. ಶೀತ, ಕೆಮ್ಮು, ಜ್ವರ ಸಹ ಕಾಣಿಸಿಕೊಳ್ಳುತ್ತದೆ. ಕ್ಲಿನಿಕ್​ಗಳಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳೇ ಹೆಚ್ಚು ಬರುತ್ತಿರುವುದು ಬಿಸಿಲಿನ ಪ್ರಭಾವಕ್ಕೆ ಸಾಕ್ಷಿ ಎನಿಸಿದೆ.

    ಬೇಸಿಗೆಯಲ್ಲಿ ಹಿತ-ಮಿತ ಊಟೋಪಹಾರ ಅಗತ್ಯ. ಮಕ್ಕಳು ಸೇರಿ ಎಲ್ಲ ವಯೋಮಾನದವರಿಗೆ ಕಲ್ಲಂಗಡಿ, ಕರ್ಬೂಜ್, ಸೇಬು, ಸಂತ್ರಾ, ದಾಳಿಂಬೆ, ಮಾವು, ಕಬ್ಬಿನ ರಸ, ನಿಂಬೂ ಶರ್ಬತ್, ಪಾನಕ, ಮಜ್ಜಿಗೆ, ಎಳೆನೀರು ಬೆಸ್ಟ್. ತಾಜಾ ಹಣ್ಣಿನ ಜ್ಯೂಸ್ ಕುಡಿಯುವುದಿದ್ದರೆ ಐಸ್ ಹಾಕದ ಶುದ್ಧ ನೀರು ಬಳಕೆ ಉತ್ತಮ. ಈ ಕ್ರಮಗಳು ಸಂಭಾವ್ಯ ಸಂಕಟದಿಂದ ಪಾರು ಮಾಡಬಹುದು.

    ಇನ್ನಷ್ಟು ಬಿಸಿ ತಟ್ಟಲಿದೆ !: ಬರುವ ದಿನಗಳಲ್ಲಿ ಬಿಸಿಲಿನ ಪ್ರಕೋಪ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ಗೂ ಅಧಿಕ ಉಷ್ಣಾಂಶ ಏರುವ ಸಾಧ್ಯತೆಗಳಿವೆ. ಖಡಕ್ ಬಿಸಿಲಿನ ಪ್ರತಿಕೂಲ ಪರಿಣಾಮ 2-12 ವರ್ಷದೊಳಗಿನ ಮಕ್ಕಳ ಮೇಲಾಗುವ ಅಪಾಯ ಹೆಚ್ಚು. ಬಿಸಿಲಿನಲ್ಲಿ ಬೇಕಾಬಿಟ್ಟಿ ತಿರುಗಿದರೆ ಡಿ-ಹೈಡ್ರೇಶನ್, ಸನ್ಸ್ಟ್ರೋಕ್, ಜ್ವರ, ಮೂಗಿನಿಂದ ರಕ್ತ ಸೋರುವಿಕೆ ಮತ್ತಿತರ ಸಮಸ್ಯೆಗಳಿಗೆ ತುತ್ತಾಗಬಹುದು. ಹೀಗಾಗಿ ಪಾಲಕರು ಹೆಚ್ಚಿನ ಮುತುವರ್ಜಿ ವಹಿಸುವ ಅಗತ್ಯವಿದೆ.

    ಫ್ರಿಜ್​ನಲ್ಲಿ ತಂಪು ನೀರು, ಐಸ್, ಐಸ್ಕ್ರೀಮ್ ಸೇರಿ ಥಂಡಾ ಸೇವನೆ ಸರಿಯಲ್ಲ. ಇದು ಮಕ್ಕಳ ಹೈ ಟೆಂಪರೇಚರ್ಗೆ ಕಾರಣವಾಗುತ್ತದೆ. ಅತಿಸಾರ, ಭೇದಿಯಿಂದ ಮಗು ನಿಶಕ್ತವಾಗಬಹುದು. ಒಮ್ಮೊಮ್ಮೆ ಜ್ವರ ದಿಢೀರ್ ಹೆಚ್ಚಾಗಬಹುದು. ಬಿಸಿಲಾಘಾತದಿಂದ ಪಾರಾಗಲು ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಮಕ್ಕಳನ್ನು ಮನೆ ಹೊರಗೆ ಬಿಡದಿರುವುದೇ ಉತ್ತಮ. ನಿಯಮಿತ ಶುದ್ಧ ಆಹಾರ, ಜಾಸ್ತಿ ನೀರು ಸೇವನೆ ಎಲ್ಲರನ್ನು ಬಿಸಿಲಿನ ಹಲವು ಸಮಸ್ಯೆಗಳಿಂದ ದೂರವಿಡಬಹುದು.
    | ಡಾ.ರಾಜೇಶ್ ಕಾಮತಿಕರ್, ಅಸೋಸಿಯೇಟ್ ಪ್ರೊಫೆಸರ್ ಬ್ರಿಮ್ಸ್

    ತಾಪಮಾನ ಅಧಿಕ ಇರುವ ಹಿನ್ನೆಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದ ಎರಡು ತಿಂಗಳು ಸಮಯ ಬದಲಾವಣೆ ಮಾಡಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಸರ್ಕಾರ ಸಮಯ ಬದಲಾವಣೆ ಮಾಡಿಲ್ಲ. ಬಿಸಿಲಿನ ಪ್ರಖರ ಹೆಚ್ಚುತ್ತಿದೆ. ತಕ್ಷಣ ಸರ್ಕಾರ ಕಚೇರಿ ಸಮಯ ಬದಲಾಯಿಸಬೇಕು.
    | ರಾಜೇಂದ್ರಕುಮಾರ ಗಂದಗೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts