More

    ಬಿಸಿಲಾದರೇನು, ಮಳೆಯಾದರೇನು, ಮತದಾನ ಕೆಲಸ ನಮಗಿಲ್ಲವೇನು..

    ದಾವಣಗೆರೆ: ಶಿವಶಿವಾ.. ಎಂಥ ಬಿಸಿಲಪ್ಪಾ, ಈ ಬಿಸಿಲಲ್ಲಿ ನಾಳೆ ಅದ್ಹೆಂಗೆ ಕೆಲಸ ಮಾಡೋದಪ್ಪಾ ದೇವ್ರೇ.. ಈ ಬಿಸ್ಲಿಗೆ ಊಟಾನೇ ಸೇರ‌್ತಿಲ್ಲ, ಸದ್ಯಕ್ಕೆ ಮಜ್ಜಿಗೆ ಇದೆಯಲ್ಲ ಮಾರಾಯ, ಬದುಕಿದೆ..
    ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಹೀಗೆಲ್ಲ ಅಂದುಕೊಳ್ಳುತ್ತಿದ್ದ ಮತದಾನ ಸಿಬ್ಬಂದಿ ಮಧ್ಯಾಹ್ನ 3ರ ಹೊತ್ತಿಗೆ ತಂತಮ್ಮ ಮತಗಟ್ಟೆಗೆ ತಲುಪುವ ಹೊತ್ತಿಗೆ ಮಳೆಯ ಸಿಂಚನವಾಯಿತು. ಎಲ್ಲರ ಮೊಗದಲ್ಲೂ ಮಂದಹಾಸ ಅರಳಿತು.
    ಬೆಳಗ್ಗೆ ಬಿಸಿಲಿನಿಂದಾಗಿ ಕೆಲವರು ಶಾಮಿಯಾನದ ಕೆಳಗಿನ ಕುರ್ಚಿಗಳಿಗೆ ಒರಗಿದರು. ಇತರರು ಕಟ್ಟೆ ಮೇಲೆಯೇ ಕೂತರು. ಡಯಟ್ ಕಾಲೇಜು ಆವರಣದಲ್ಲಿ ಊಟ ಮಾಡುತ್ತಿದ್ದವರ ನಡುವೆಯೂ ಬಿಸಿಲಿನದ್ದೇ ಬಿಸಿ ಬಿಸಿ ಚರ್ಚೆ ನಡೆದಿತ್ತು.
    ಮಧ್ಯಾಹ್ನದ ಬಳಿಕ ಮತಗಟ್ಟೆ ಅಧಿಕಾರಿ-ಸಿಬ್ಬಂದಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ಹೊತ್ತು ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಭದ್ರತಾ ಸಿಬ್ಬಂದಿ ಸಹಿತ ಬಸ್‌ಗಳಲ್ಲಿ ತೆರಳಿದರು.
    ಇಂಕ್ ಪಾಟ್, ದುರ್ಬೀನು, ಲಕೋಟೆ, ಪತ್ರಗಳು, ನಮೂನೆಗಳುಳ್ಳ ಪುಸ್ತಕ, ಮತಗಟ್ಟೆಯಲ್ಲಿ ಅನುಸರಿಸುವ ಮತ್ತು ಮಾಡಬಾರದ ಪ್ರಕ್ರಿಯೆಗಳ ಕುರಿತಾದ ಮಾಹಿತಿ ಕರಪತ್ರಗಳುಳ್ಳ ಕಪ್ಪು ಕೈಚೀಲ, ಕೆಂಬಾವುಟ, ಮತದಾನಕ್ಕೆ ಬಳಸುವ ರಟ್ಟಿನ ಮಾದರಿ ಇತ್ಯಾದಿಗಳೂ ಮತಗಟ್ಟೆ ಸೇರಿದವು.
    ಧ್ವನಿವರ್ಧಕಗಳಲ್ಲಿ ಅಧಿಕಾರಿಗಳು ಸೂಚನೆ ನೀಡುತ್ತಿದ್ದರು. ‘… ಮತಗಟ್ಟೆ ಸಂಖ್ಯೆ ಸಿಬ್ಬಂದಿ ಇದುವರೆಗೂ ಬಂದಿಲ್ಲ. ನಿಮ್ಮ ಸೆಕ್ಟರ್ ಅಧಿಕಾರಿಗಳನ್ನು ಸಂಪರ್ಕ ಮಾಡಿ’ ‘ಬೇರೆ ಮತಕ್ಷೇತ್ರಗಳಿಂದ ಮಹಿಳಾ ಸಿಬ್ಬಂದಿಗಳಿದ್ದರೆ ಅವರಿಗೆ ವಿನಾಯ್ತಿ ಇದೆ’ ಎಂಬುದಾಗಿ ಹೇಳಲಾಗುತ್ತಿತ್ತು.
    ಮೈಕ್ರೋ ಆಬ್ಸರ್‌ವರ್‌ಗಳಿಗೆ ಮಾದರಿ ಚೆಕ್‌ಲೀಸ್ಟ್ ಹಾಗೂ ಗುರುತಿನ ಪತ್ರ ನೀಡಲಾಗುತ್ತಿತ್ತು. ಒಂದೆಡೆ ಅಧಿಕಾರಿ- ಸಿಬ್ಬಂದಿ ಅಂಚೆ ಮತದಾನ ಮಾಡಿದರು. ದೈಹಿಕ ಊನತೆಯಿದ್ದವರು ಚುನಾವಣಾ ಕರ್ತವ್ಯದಿಂದ ಕೈಬಿಡುವಂತೆ ಅರ್ಜಿ ಬರೆಯುತ್ತಿದ್ದರೆ, ಕೆಲವು ಶಕ್ತರು ತಪ್ಪಿಸಿಕೊಳ್ಳಲು ಶಿಫಾರಸು ಮಾಡಿಸುತ್ತಿದ್ದುದು ಕಂಡುಬಂತು.
    ಸಿಬ್ಬಂದಿಗೆ ಕೇಸರಿಬಾತ್, ಅನ್ನ-ಸಾರು ವ್ಯವಸ್ಥೆಯಿತ್ತು. ಎಣ್ಣೆಯಲ್ಲಿ ಹಪ್ಪಳ ಕರಿಯುತ್ತಿದ್ದ ಮತದಾನ ಸಿಬ್ಬಂದಿ ಪ್ರಕಾಶ್, ‘ಅಡುಗೆ ಮಾಡುವವರು ಕಡಿಮೆ ಇದ್ದಾರೆ, ಅದಕ್ಕೆ ನಾವು ಹೆಲ್ಪ್ ಮಾಡುತ್ತಿದ್ದೇವೆ’ ಎಂದರು.
    ಸಖಿ ಮತಗಟ್ಟೆ ಮಹಿಳಾ ಸಿಬ್ಬಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ವಾಸಂತಿ ಉಪ್ಪಾರ್ ಗುಲಾಬಿ ಬಣ್ಣದ ಸೀರೆಗಳನ್ನು ಉಚಿತವಾಗಿ ವಿತರಿಸಿದರು.
    ವಿವಿಧ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಡಾ.ಕೆ. ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಚುನಾವಣಾಧಿಕಾರಿ ಎನ್.ರೇಣುಕಾ, ದುರ್ಗಾಶ್ರೀ, ಕೆ.ಆರ್.ಶ್ರೀನಿವಾಸ್ ಇತರರಿದ್ದರು.
    ಜಿಲ್ಲೆಯಲ್ಲಿ ಒಟ್ಟು 1685 ಮತಗಟ್ಟೆಗಳಿದ್ದು 8104 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲೆಯ ಎಲ್ಲ ಮಸ್ಟರಿಂಗ್‌ಕೇಂದ್ರಗಳಿಂದ ನಿಗದಿಪಡಿಸಿದ ವಾಹನಗಳಲ್ಲಿ ಮತಗಟ್ಟೆ ತಲುಪಿದರು. ಮತಗಟ್ಟೆಗಳ ಬಳಿ ಬಂದೋಬಸ್ತ್‌ಗಾಗಿ ಡಿಎಆರ್ ಸಿಬ್ಬಂದಿ, ಸಿಎಪಿಎಫ್, ಕೆಎಸ್‌ಆರ್‌ಪಿ ಹಾಗೂ ಗೃಹರಕ್ಷಕ ಸಿಬ್ಬಂದಿ ನೇಮಿಸಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts