More

    ಬಿಸಿಯೂಟ ತಯಾರಕರಿಗೆ ಉಪವಾಸವೇ ಗತಿ!

    ರಾಜೇಂದ್ರ ಶಿಂಗನಮನೆ ಶಿರಸಿ

    ಅಕ್ಷರ ದಾಸೋಹ ಯೋಜನೆಯಡಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 4003 ಸಿಬ್ಬಂದಿಗೆ ಮೂರು ತಿಂಗಳಾದರೂ ವೇತನ ಬಿಡುಗಡೆ ಆಗಿಲ್ಲ. ಹೀಗಾಗಿ, ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದ ಸಿಬ್ಬಂದಿ ಒಪ್ಪತ್ತಿನ ಊಟಕ್ಕಾಗಿ ಪರಿತಪಿಸುವಂತಾಗಿದೆ.

    ಬಿಸಿಯೂಟ ನೌಕರರಿಗೆ ಸರ್ಕಾರ ಮೂರು ತಿಂಗಳಿಗೊಮ್ಮೆ ವೇತನ ನೀಡುತ್ತದೆ. ಪ್ರಸ್ತುತ ಜೂನ್ 1ಕ್ಕೆ ಮೂರು ತಿಂಗಳು ಪೂರ್ಣವಾಗಿದೆ. ಆದರೆ, ಇನ್ನೂ ಸಂಬಳ ನೀಡಿಲ್ಲ. ಲಾಕ್​ಡೌನ್ ಕಾರಣ ಆರ್ಥಿಕ ಸಂಕಷ್ಟದಲ್ಲಿ ಇರುವವರಿಗೆ ಸರ್ಕಾರ ಪ್ಯಾಕೇಜ್ ಘೊಷಿಸಿದೆ. ಆದರೆ, ಈ ನೌಕರರಿಗೆ ನೀಡಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗವಿಕಲರು, ವಿಧವೆಯರು, ಪತಿಯಿಂದ ದೂರವಾಗಿರುವವರು, ವೃದ್ಧೆಯರು ಹೀಗೆ ಆರ್ಥಿಕವಾಗಿ ಹಿಂದುಳಿದವರೇ ಬಿಸಿಯೂಟ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯ ಅಡುಗೆ ಸಿಬ್ಬಂದಿಯು 2,700 ರೂ., ಅಡುಗೆ ಸಹಾಯಕರು 2,600 ರೂ. ಮಾಸಿಕ ವೇತನ ಪಡೆಯುತ್ತಿದ್ದರು. ಈ ಎಲ್ಲ ಸಿಬ್ಬಂದಿಯಿಂದ ಜಿಲ್ಲೆಗೆ ಅಂದಾಜು 1.06 ಕೋಟಿ ರೂ.ಗಳಷ್ಟು ಅನುದಾನ ಬಿಡುಗಡೆಯಾಗಬೇಕಿದೆ.

    ಕೆಲಸದ ಅಭದ್ರತೆ: ಕಡಿಮೆ ವೇತನಕ್ಕೆ ದುಡಿಯುತ್ತಿರುವ ಅಕ್ಷರ ದಾಸೋಹ ನೌಕರರು ಕರೊನಾ ಪರಿಣಾಮ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೆಲಸವನ್ನೇ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಪ್ರಸಕ್ತ ವರ್ಷ ಶಾಲೆಗಳು ಆರಂಭವಾಗುವುದು ಅನಿಶ್ಚಿತವಾಗಿದೆ. ಆರಂಭವಾದರೂ ಶಾಲೆಯಲ್ಲಿ ಬಿಸಿಯೂಟ ನೀಡುವುದು ಬೇಡ ಎಂಬ ಆಗ್ರಹ ಪೋಷಕರಿಂದ ಬಲವಾಗಿ ಕೇಳಿಬರುತ್ತಿದೆ. ಹೀಗಾಗಿ, ಕೆಲಸದ ಅಭದ್ರತೆ ನೌಕರರನ್ನು ತೀವ್ರವಾಗಿ ಕಾಡುತ್ತಿದೆ. ಲಾಕ್​ಡೌನ್ ವೇಳೆ ಅಕ್ಷರ ದಾಸೋಹ ಸಿಬ್ಬಂದಿ ಮಕ್ಕಳಿಗೆ ಬೇಳೆ, ಅಕ್ಕಿ ತಲುಪಿಸುವ ಕೆಲಸ ಮಾಡಿದ್ದಾರೆ. ಆದರೂ ಜೂನ್ ತಿಂಗಳಿಂದ ಅಕ್ಷರ ದಾಸೋಹ ನೌಕರರ ಆನ್​ಲೈನ್ ಹಾಜರಾತಿಯನ್ನು ಇಲಾಖೆ ಪಡೆದಿಲ್ಲ. ಇದು ನೌಕರರಲ್ಲಿ ಆತಂಕ ಹೆಚ್ಚಿಸಿದೆ. ಲಾಕ್​ಡೌನ್ ಪರಿಣಾಮ ಮೂರು ತಿಂಗಳಿಂದ ಬೇರೆ ಕೆಲಸವೂ ಇಲ್ಲ, ವೇತನವೂ ಇಲ್ಲದಂತಾಗಿದೆ.

    ಹೊಸ ಆತಂಕ ಶುರು: ಇಷ್ಟುದಿನ ವೇತನ ಹೆಚ್ಚಳ ಮಾಡಬೇಕು, ಡಿ ಗ್ರೂಪ್ ನೌಕರರು ಎಂದು ಪರಿಗಣಿಸಬೇಕು ಮುಂತಾದ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಮಾಡುತ್ತಿದ್ದ ಅಡುಗೆ ಸಿಬ್ಬಂದಿಗೆ ಈಗ ಹೊಸ ಆತಂಕ ಶುರುವಾಗಿದೆ. ಈ ವರ್ಷ ಶಾಲೆಗಳು ಆರಂಭವಾದರೂ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ ಬೇಡ. ಮನೆಯಿಂದಲೇ ಊಟ ಕಳುಹಿಸುತ್ತೇವೆ ಎಂದು ಹಲವು ಪೋಷಕರು ಇತ್ತೀಚೆಗೆ ಶಾಲೆಗಳಲ್ಲಿ ನಡೆದ ಸಭೆಗಳಲ್ಲಿ ಹೇಳಿದ್ದಾರೆ. ಪಾಲಕರ ಈ ನಿರ್ಣಯ ಮುಂದುವರಿದರೆ ಬಿಸಿಯೂಟ ಸಿಬ್ಬಂದಿ ಇನ್ನಷ್ಟು ಸಮಸ್ಯೆಗೆ ಒಳಗಾಗುವುದು ನಿಶ್ಚಿತವಾಗಿದೆ.

    ಅಕ್ಷರ ದಾಸೋಹ ನೌಕರರು ಅಡುಗೆ ಜತೆಗೆ ಶಾಲೆಗೆ ಸಂಬಂಧಿಸಿದ ಬೇರೆ ಕೆಲಸವನ್ನೂ ಮಾಡಬೇಕು. ಕೆಲ ಶಾಲೆಗಳಲ್ಲಿ ಶೌಚಗೃಹ ಸ್ವಚ್ಛತೆ, ಶಾಲಾ ಕಾಂಪೌಂಡ್, ಆವರಣ ಸ್ವಚ್ಛತೆ ಕೆಲಸನ್ನೂ ಮಾಡುತ್ತೇವೆ. ಜತೆಗೆ ಬೆಲ್ ಹೊಡೆಯುವುದು ಸೇರಿ ಕ್ಲರ್ಕ್ ಕೆಲಸವನ್ನೂ ನಿರ್ವಹಿಸುತ್ತೇವೆ. ಈ ಕೆಲಸಗಳೆಲ್ಲ ನಮಗೆ ಭಾರವಾಗುವುದಿಲ್ಲ. ಆದರೆ, ಕೆಲಸಕ್ಕೆ ತಕ್ಕಂತೆ ವೇತನ, ಕೆಲಸದ ಭದ್ರತೆ ನೀಡಬೇಕು. ಬೇರೆಲ್ಲ ಕಾರ್ವಿುಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡಿದೆ. ಆದರೆ, ನಮಗೆ ಮಾತ್ರ ಯಾವ ಪ್ಯಾಕೇಜ್ ನೀಡಿಲ್ಲ. ವಿಶೇಷ ಭತ್ಯೆ ಬೇಡ, ನಮ್ಮ ಸಂಬಳ ನಮಗೆ ನೀಡಿದರೆ ಸಾಕು.
    | ಹೆಸರು ಹೇಳಲಿಚ್ಛಿಸದ ಅಕ್ಷರ ದಾಸೋಹ ಸಿಬ್ಬಂದಿ

    ಅಕ್ಷರ ದಾಸೋಹ ಸಿಬ್ಬಂದಿಗೆ ಮೂರು ತಿಂಗಳಿಗೊಮ್ಮೆ ವೇತನ ಬಿಡುಗಡೆ ಆಗುತ್ತದೆ. ಈ ಬಾರಿ ಶೈಕ್ಷಣಿಕ ವರ್ಷಕ್ಕೆ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ, ಸಂಬಳ ನೀಡುವಲ್ಲಿ ವಿಳಂಬವಾಗಿದೆ. ಹಣ ಬಿಡುಗಡೆಯಾದ ಕೂಡಲೆ ಅವರ ಖಾತೆಗೆ ಹಣ ವರ್ಗಾಯಿಸಲಾಗುವುದು. ಇನ್ನೂ ಶಾಲೆಗಳು ಆರಂಭವಾಗದ ಕಾರಣ ಸಿಬ್ಬಂದಿಯ ಆನ್​ಲೈನ್ ಹಾಜರಾತಿ ತೆಗೆದುಕೊಳ್ಳುತ್ತಿಲ್ಲ. ಶಾಲೆ ಆರಂಭವಾದ ಕೂಡಲೆ ಹಾಜರಾತಿ ತೆಗೆದುಕೊಳ್ಳಲಾಗುವುದು. ಕೆಲಸ ಕಳೆದುಕೊಳ್ಳುವ ಆತಂಕ ಯಾವ ಸಿಬ್ಬಂದಿಗೂ ಬೇಡ.
    | ವಿನೋದ ನಾಯಕ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts