More

    ಬಿಸಿಯೂಟ ಉಣ್ಣಲು ತಯಾರಾಗಿ ಮಕ್ಕಳೇ..

    ಡಿ.ಎಂ.ಮಹೇಶ್, ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರದಿಂದ ಮತ್ತೆ ಶಾಲೆಗಳಲ್ಲಿ ಘಂಟೆ ಬಾರಿಸಲಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಮತ್ತೆ ಚಾಲನೆ ಸಿಗಲಿದೆ. ಇದಕ್ಕಾಗಿ ಎಲ್ಲೆಡೆ ಸಿದ್ಧತೆಗೆ ಇನ್ನಷ್ಟೆ ತಾಲೀಮು ನಡೆಯಬೇಕಿದೆ.
    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60:40ರ ಅನುಪಾತದಡಿ ಜಿಲ್ಲೆಯ ಅಕ್ಷರದಾಸೋಹಕ್ಕೆಂದೇ ವಾರ್ಷಿಕವಾಗಿ 65 ಕೋಟಿ ರೂ.ಗಳ ಅನುದಾನವನ್ನು ವ್ಯಯಿಸಲಾಗುತ್ತಿದೆ. ಕಳೆದ ವರ್ಷ, ಒಂದರಿಂದ ಎಸ್ಸೆಸ್ಸೆಲ್ಸಿವರೆಗಿನ ಸರ್ಕಾರಿ ಮತ್ತು ಅನುದಾನಿತ ಸೇರಿ ಜಿಲ್ಲೆಯ 1519 ಶಾಲೆಗಳಲ್ಲಿ 1,54,213 ಮಕ್ಕಳ ನೋಂದಣಿ ಇತ್ತು. ಇದರಲ್ಲಿ 1,42,191 ಫಲಾನುಭವಿಗಳು ಅನ್ನದಾಸೋಹದ ಸವಿ ಅನುಭವಿಸಿದ್ದರು.
    ಇದೇ ಸಂಖ್ಯೆ ಆಧರಿಸಿ ಸದ್ಯಕ್ಕೆ ಬಿಸಿಯೂಟಕ್ಕೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿಗಳ ಕಚೇರಿ ಕೂಡ ಸಿದ್ಧತೆ ನಡೆಸುತ್ತಿದೆ. ಇಲಾಖೆ ಆದೇಶದಂತೆ ಅಡುಗೆ ಕೋಣೆಗಳಲ್ಲಿ ಶನಿವಾರ ಇಡೀದಿನ ಸ್ವಚ್ಛತಾ ಆಂದೋಲನ ನಡೆಯಲಿದೆ. ಪಾತ್ರೆ ಸರಂಜಾಮು ಕೂಡ ಝಳಝಳ ಆಗಲಿವೆ.
    ಎರಡು ತಿಂಗಳ (53 ದಿನ) ಬೇಡಿಕೆಯ ಅಕ್ಕಿ, ಹಾಲಿನಪುಡಿ ಸರಬರಾಜಾಗಿದ್ದು ಕೆಎಸ್‌ಎಫ್‌ಸಿ ಗೋದಾಮಿನಲ್ಲಿವೆ. ಇತರೆ ಆಹಾರಧಾನ್ಯ ನಿರೀಕ್ಷೆಯಲ್ಲಿದೆ.ಆಯಾ ತರಗತಿ ಮಕ್ಕಳಿಗೆ ಇಲಾಖೆ ನಿಗದಿಪಡಿಸಿದ ಮಾಪನದಂತೆ ತಿಂಗಳೊಂದಕ್ಕೆ 4277 ಕ್ವಿಂ. ಅಕ್ಕಿ, 818 ಕ್ವಿಂ. ಬೇಳೆ, 578 ಕ್ವಿಂ. ಗೋಧಿ, 62456 ಕೆಜಿ ಹಾಲಿನಪುಡಿ, 26888 ಲೀ. ಎಣ್ಣೆ ಬಳಕೆಯಾಗುವ ಅಂದಾಜಿದೆ. ಕೆಎಸ್‌ಎಫ್‌ಸಿಯಿಂದಲೇ ನೇರ ಖರೀದಿಯಾಗಿ ಹಂಚಿಕೆಯಾಗಲಿವೆ.
    ತರಕಾರಿ-ಸೊಪ್ಪು ಇತ್ಯಾದಿಯನ್ನು ಸ್ಥಳೀಯ ಸಂಪನ್ಮೂಲದಿಂದ ಪಡೆಯಬೇಕಿದೆ. ಜಿಲ್ಲೆಯ ಸುಮಾರು 350 ಶಾಲೆಗಳ (1ರಿಂದ 8ನೇ ತರಗತಿ) ಆವರಣದಲ್ಲಿ ಪೌಷ್ಟಿಕ ವನ ನಿರ್ವಹಣೆ ಮಾಡುತ್ತಿರುವುದರಿಂದ ತರಕಾರಿ- ಸೊಪ್ಪು ಖರೀದಿಸುವ ಪ್ರಮೇಯ ಇಲ್ಲ. ಈ ವರ್ಷದಲ್ಲಿ ಇನ್ನಷ್ಟು ಶಾಲೆಗಳಲ್ಲಿ ಈ ಇಂತಹ ಕೈತೋಟ ಅಭಿವೃದ್ಧಿಪಡಿಸುವ ಆಲೋಚನೆ ಅಕ್ಷರದಾಸೋಹ ವಿಭಾಗಕ್ಕಿದೆ.
    ಜಿಲ್ಲೆಯಲ್ಲಿ 601 ಅಡುಗೆ ಕೋಣೆಗಳ ದುರಸ್ತಿ ಅಗತ್ಯವಿದ್ದು, ಅಕ್ಷರದಾಸೋಹ ಉಳಿಕ ಅನುದಾನವನ್ನು ಬಳಸಲು ಇಲಾಖೆ ನಿರ್ದೇಶನ ಪಾಲಿಸಲಾಗುತ್ತಿದೆ. ಅಲ್ಲದೆ ಅಡುಗೆ ಮಾಡಲು ಅಗತ್ಯವಾದ ಸ್ಟೌ, ಪಾತ್ರೆ ಇತರ ಪರಿಕರಗಳನ್ನು ಖರೀದಿಸಲು ಮತ್ತು ಅಡುಗೆ ಕೋಣೆಗೆ ಸುಣ್ಣ-ಬಣಣ ಹೊಡೆಸಲೂ ಅವಕಾಶವಿದೆ ಎನ್ನುತ್ತಾರೆ ಅಧಿಕಾರಿಗಳು.
    * ಕೋಳಿಮೊಟ್ಟೆ ಸುದ್ದಿ ಇಲ್ಲ!
    ಕಳೆದ ವರ್ಷ ಜುಲೈ ಕೊನೆಯ ವಾರದಿಂದ ಫೆಬ್ರವರಿ ಅಂತ್ಯದವರೆಗೆ ವಾರಕ್ಕೆರಡರಂತೆ 46 ದಿನಗಳ ಕಾಲ ಮಕ್ಕಳಿಗೆ ಕೋಳಿಮೊಟ್ಟೆಯನ್ನು ನೀಡಲಾಗಿತ್ತು. ಈ ಬಾರಿ ಸರ್ಕಾರದಿಂದ ಇದುವರೆಗೆ ಯಾವುದೇ ಆದೇಶ ಬಂದಿಲ್ಲ. ಹೊಸ ಸರ್ಕಾರ ರಚನೆಯಾದರೂ ಹಳೆಯ ಮೆನು ಮುಂದುವರಿದಿದೆ. ಬಾಳೆಹಣ್ಣನ್ನು ಸಹ ನೀಡಲಾಗುತ್ತದೆ ಎನ್ನುತ್ತವೆ ಮೂಲಗಳು.
    * ಮೊದಲ ದಿನ ಸಿಹಿಯೂಟ
    ಶೈಕ್ಷಣಿಕ ವರ್ಷಾರಂಭದ ಮೊದಲ ದಿನವಾದ ಮೇ. 29ರಂದು ನಿಗದಿಪಡಿಸಿದ ಶಾಲೆಗಳಲ್ಲಿ ಬಿಸಿಯೂಟಕ್ಕೆ ಪಾಯಸ ಇತರೆ ಸಸಿಹಿಯೂಟ ಇರಲಿದೆ. ಜಿಲ್ಲೆಯಲ್ಲಿ ಮುಖ್ಯ ಅಡುಗೆಯವರು, ಸಹಾಯಕ ಅಡುಗೆಯವರು ಸೇರಿ 3437 ಅಡುಗೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ಶಿಕ್ಷಕರೊಂದಿಗೆ ಊಟ ಬಡಿಸಲಿದ್ದಾರೆ.
    * ಜಂಟಿ ಖಾತೆ ಕ್ಯಾತೆ
    ಮುಖ್ಯ ಅಡುಗೆಯವರು ಹಾಗೂ ಮುಖ್ಯ ಶಿಕ್ಷಕರ ಜಂಟಿ ಖಾತೆಯಡಿ ಬಿಸಿಯೂಟ ಯೋಜನೆ ನಿರ್ವಹಿಸಲಾಗುತ್ತಿತ್ತು. ಇತ್ತೀಚೆಗೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಹೆಸರಿನಲ್ಲಿ ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ನಿರ್ವಹಿಸಲು ಆಯುಕ್ತರು ಆದೇಶಿಸಿ ದ್ದಾರೆ. ಮುಖ್ಯ ಅಡುಗೆಯವರನ್ನು ಕೈಬಿಟ್ಟಿರುವ ಬಗ್ಗೆ ಅಸಮಾಧಾನವಿದೆ. ಅಕ್ಷರದಾಸೋಹ ಫೆಡರೇಷನ್ ಹೋರಾಟದ ರೂಪುರೇಷೆ ಹಾದಿಯಲ್ಲಿದೆ.

    * ಕೋಟ್
    ಈಗಾಗಲೆ ತಾಲೂಕು ಸಹಾಯಕ ನಿರ್ದೇಶಕರಿಗೆ ಸಭೆ ನಡೆಸಿ, ಸೋಮವಾರದಿಂದ ಅಕ್ಷರದಾಸೋಹ ಕಾರ್ಯಕ್ರಮ ಆರಂಭಿಸಲು ಮತ್ತು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಡುಗೆ ಸಿಬ್ಬಂದಿ, ಅಡುಗೆ ಕೇಂದ್ರಗಳಲ್ಲಿ ಶನಿವಾರ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ.
    ಡಿ.ದುರುಗಪ್ಪ
    ಪಿಎಂ ಪೋಷಣ್ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts