More

    ಬಿರುಗಾಳಿಗೆ ಮರ ಬಿದ್ದು ವ್ಯಕ್ತಿ ಸಾವು

    ಕಲಬುರಗಿ: ಬೀಸಿದ ಬಿರುಗಾಳಿಯಿಂದಾಗಿ ಮರ ಬಿದ್ದು ಶೌಚ ಗೃಹಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಹೊರ ವಲಯದಲ್ಲಿರುವ ಸೆಂಟ್ರಲ್ ಜೈಲ್ ಸಿಬ್ಬಂದಿ ವಸತಿ ಗೃಹದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಬಿರುಗಾಳಿ ಕಾಣಿಸಿಕೊಂಡಿತ್ತು.
    ಗೋವಿಂದ ಚವ್ಹಾಣ (41)ಮೃತಪಟ್ಟವರು. ಅವರ ಪತ್ನಿ ಪಾರಿಬಾಯಿ ಕೇಂದ್ರ ಕಾರಾಗೃಹದಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಏವೂರ ತಾಂಡಾದವರು. ಪತ್ನಿ ಜೈಲಿನಲ್ಲಿ ನೌಕರಿ ಮಾಡುತ್ತಿದ್ದರಿಂದ ಅವರಿಗೆ ಜೈಲ್ ಕಾಲನಿಯಲ್ಲಿ ಹಂಚಿಕೆಯಾಗಿರುವ ಸಿಬ್ಬಂದಿ ಕ್ವಾಟರ್ಸ್​ನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು. ಗೋವಿಂದ ಕೂಲಿ ಕೆಲಸ ಮಾಡುತ್ತಿದ್ದರು.
    ಬುಧವಾರ ಬೆಳಗ್ಗೆ 5.30ಕ್ಕೆ ಮನೆಯ ಹಿಂಭಾಗದಲ್ಲಿರುವ ಶೌಚಗೃಹಕ್ಕೆ ಹೋಗುತ್ತಿದ್ದರು. ಈ ವೇಳೆಯಲ್ಲಿ ಗಾಳಿ ಬೀಸಿದ್ದರಿಂದ ಮನೆಗೆ ಹೊಂದಿಕೊಂಡಿದ್ದ ಬೃಹತ್ ಮರ ಉರುಳಿ ಆತನ ಮೇಲೆ ಬಿದ್ದಿದೆ. ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
    ಮರ ಬಿದ್ದ ಸಪ್ಪಳ ಕೇಳುತ್ತಲೇ ಮನೆಯೊಳಗಿನವರು, ಅಕ್ಕ-ಪಕ್ಕದವರು ದೌಡಾಯಿಸಿ ರಕ್ಷಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಮರದ ರೆಂಬೆಗೆ ಬಡಿದು ಗಾಯಗೊಂಡಿದ್ದರಿಂದ ಕೊನೆಯುಸಿರೆಳೆದರು. ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು. ಇನ್ಸ್ಪೆಕ್ಟರ್ ಎಂ.ಬಿ. ಚಿಕ್ಕಣ್ಣನವರ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿದರು. ನಂದಿಕೂರ ಗ್ರಾಪಂ ಮಾಜಿ ಅಧ್ಯಕ್ಷ ಪವನಕುಮಾರ ವಳಕೇರಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಫರತಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts