More

    ಬಿರುಕು ಬಿಟ್ಟ ಮಾವಿನತೋಪ ದೊಡ್ಡಕೆರೆ ಏರಿ

    ರಟ್ಟಿಹಳ್ಳಿ: ಈ ವರ್ಷದ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ತಾಲೂಕಿನ ಬಹುತೇಕ ಕೆರೆಗಳು ಭರ್ತಿಗೊಂಡಿದ್ದು, ರೈತರಿಗೆ ಅನುಕೂಲವಾಗಿದೆ. ಆದರೆ, ತಾಲೂಕಿನ ಮಾವಿನತೋಪ ಗ್ರಾಮದ ದೊಡ್ಡ ಕೆರೆ ಏರಿ ಬಿರುಕು ಬಿಟ್ಟಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.

    ಮಾವಿನತೋಪ ಗ್ರಾಮದ ದೊಡ್ಡ ಕೆರೆ ಸುಮಾರು 89 ಎಕರೆ ವಿಸ್ತಾರದಲ್ಲಿದೆ. ಭರ್ತಿಯಾಗಿರುವ ಕೆರೆ ಏರಿ ಕೆಲ ದಿನಗಳಿಂದ ಬಿರುಕು ಬಿಟ್ಟಿದೆ. ಇದರಿಂದ ನೀರು ಬಸಿಯುತ್ತಿದೆ. ಕೆರೆಯ ಸುತ್ತಲೂ ರೈತರ ಜಮೀನುಗಳಿವೆ. ಪ್ರಸ್ತುತ ನೀರಾವರಿಯಿಂದ ರೈತರು ಮೆಕ್ಕೆಜೋಳ, ಹತ್ತಿ ಸೇರಿ ಇತರ ಬೆಳೆ ಬೆಳೆದಿದ್ದಾರೆ. ಕೆರೆಯ ಏರಿ ಒಡೆದರೆ ಅಕ್ಕ ಪಕ್ಕದ ಸುಮಾರು 150 ಎಕರೆ ಜಮೀನಿನಲ್ಲಿನ ಬೆಳೆಗೆ ಹಾನಿಯಾಗುವ ಸಾಧ್ಯತೆಗಳಿವೆ. ಕೆರೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿ ಮಾವಿನತೋಪ ಗ್ರಾಮ ಇದ್ದು, ನೀರು ಮನೆಗಳಿಗೂ ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ಸುಮಾರು 8-10 ವರ್ಷಗಳ ಹಿಂದೆ ಕೆರೆಯ ಏರಿ ಒಡೆದ ಉದಾಹರಣೆ ಇದೆ. ಈ ಹಿಂದೆ ಕೆರೆಯ ಏರಿಗೆ ಮಣ್ಣು ಹಾಕಿ ದುರಸ್ತಿಗೊಳಿಸಲಾಗಿತ್ತು. ಕೆರೆಗಳಿಗೆ ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಕೆರೆಯ ಏರಿಗಳಲ್ಲಿ ಜಂಗಲ್ ಬೆಳೆದು ಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆಯ ಏರಿ ದುರಸ್ತಿಗೊಳಿಸಿ ಅಪಾಯ ತಪ್ಪಿಸಬೇಕಾಗಿದೆ.

    ಮಾವಿನತೋಪ ಗ್ರಾಮದ ದೊಡ್ಡ ಕೆರೆಯ ಏರಿ ಬಿರುಕು ಬಿಟ್ಟ ಸ್ಥಳ ಪರಿಶೀಲಿಸಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಮತ್ತು ತಹಸೀಲ್ದಾರ್ ಗಮನಕ್ಕೆ ತುಂದು ಕೆರೆಯ ಏರಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
    | ಸುಭಾಸ ಮಾಗನೂರು, ನೇಶ್ವಿ ಗ್ರಾಮ ಪಂಚಾಯಿತಿ ಅಧ್ಯಕ್ಷ

    ಅಪಾಯ ಸಂಭವಿಸುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಕೆರೆಯ ಏರಿ ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಬೇಕಾಗಿದೆ.
    | ಗಣೇಶ ಬನ್ನಿಕೋಡ, ಗಿರೀಶ ಓಲೇಕಾರ, ಮಾವಿನೋತಪ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts