More

    ಬಿತ್ತನೆಗೆ ಸಜ್ಜಾದ ಅನ್ನದಾತ

    ಲಕ್ಷೆ್ಮೕಶ್ವರ: ತಾಲೂಕಿನಾದ್ಯಂತ ಅಲ್ಪಸ್ವಲ್ಪ ಸುರಿದ ಮಳೆಯಿಂದಾಗಿ ಕೃಷಿ ಚಟುವಟಿಕೆ ಗರಿಗೆದರಿವೆ. ಬಿಡುವಿಲ್ಲದ ಕೃಷಿ ಕಾರ್ಯದಲ್ಲಿ ಅನ್ನದಾತರು ತೊಡಗಿದ್ದಾರೆ. ಬಹುತೇಕ ರೈತರು ಜಮೀನನ್ನು ಬಿತ್ತನೆಗಾಗಿ ಹದ ಮಾಡಿದ್ದಾರೆ. ಅಲ್ಲದೆ, ಬೀಜ- ಗೊಬ್ಬರಗಳ ದಾಸ್ತಾನಿಟ್ಟುಕೊಂಡು ಬಿತ್ತನೆಗಾಗಿ ತುದಿಗಾಲಲ್ಲಿ ನಿಂತಿದ್ದಾರೆ.

    ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು, ಶೇಂಗಾ, ಉಳ್ಳಾಗಡ್ಡಿ, ಮೆಣಸಿನಕಾಯಿ, ಬಿಟಿ ಹತ್ತಿ, ಗೋವಿನಜೋಳ ಬೆಳೆಯಲಾಗುತ್ತದೆ. ಬಿತ್ತನೆ ಬೀಜ, ಗೊಬ್ಬರಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರ ಮತ್ತು ಖಾಸಗಿ ಕೃಷಿ ಕೇಂದ್ರಗಳತ್ತ ಚಿತ್ತ ನೆಟ್ಟಿದ್ದಾರೆ. ತಾಲೂಕಿನಲ್ಲಿ 2600 ಹೆಕ್ಟೇರ್ ನೀರಾವರಿ ಜಮೀನು, 29,300 ಹೆಕ್ಟೇರ್ ಖುಷ್ಕಿ ಜಮೀನು ಸೇರಿ ಒಟ್ಟು 31,900 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರಿನ ಬಿತ್ತನೆ ಯಾಗಲಿದೆ. ಪ್ರಮುಖವಾಗಿ 10500 ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿ, 10000 ಹೆಕ್ಟೇರ್​ನಲ್ಲಿ ಶೇಂಗಾ, 2200 ಹೆಕ್ಟೇರ್​ನಲ್ಲಿ ಹೆಸರು ಬೀಜ ಬಿತ್ತನೆಯಾಗಲಿದೆ.

    ಟ್ರ್ಯಾಕ್ಟರ್ ಬಿತ್ತನೆಗೆ ಡಿಮಾಂಡ್: ಈ ವರ್ಷ ಕೋವಿಡ್​ನಿಂದ ಜಾನುವಾರುಗಳ ಸಂತೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ರೈತರು ಮುಂಗಾರು ಪೂರ್ವದಲ್ಲಿ ಎತ್ತುಗಳನ್ನು ಖರೀದಿಸಲು ಆಗಲಿಲ್ಲ. ಆದ್ದರಿಂದ ಬಹುತೇಕ ರೈತರು ಈ ವರ್ಷ ಟ್ರ್ಯಾಕ್ಟರ್ ಮೂಲಕ ಬಿತ್ತನೆಗೆ ಮುಂದಾಗಿದ್ದಾರೆ. ಇದರಿಂದಾಗಿ ಟ್ರ್ಯಾಕ್ಟರ್​ಗಳಿಗೆ ಬೇಡಿಕೆ ಹೆಚ್ಚಿದ್ದು, ಬೀಜ ಬಿತ್ತನೆ ಮಾಡಲು ಪ್ರತಿ ಎಕರೆಗೆ 800 ರೂ. ಕೊಡಬೇಕಾಗಿದೆ.

    ಮಳೆಯತ್ತ ಚಿತ್ತ: ಮೇ 3ನೇ ವಾರದಿಂದಲೇ ಹೆಸರು, ಶೇಂಗಾ, ಬಿಟಿ ಹತ್ತಿ ಬಿತ್ತನೆ ಪ್ರಾರಂಭಗೊಂಡಿದೆ. ಈಗಾಗಲೇ ಬಿತ್ತನೆಯಾಗಿ ಮೊಳಕೆಯೊಡೆದಿರುವ ಸಸಿಗೆ ಮಳೆಯ ಅಗತ್ಯವಿದೆ. ಮೇ 25ರಂದು ರೋಹಿಣಿ ಮಳೆ ಕೂಡಿದೆ. ಆದರೆ, ಈವರಗೆ ತಾಲೂಕಿನಲ್ಲಿ

    ರೋಹಿಣಿ ಮಳೆಯಾಗಿಲ್ಲ. ಇದರಿಂದಾಗಿ ಈಗಾಗಲೇ ಬಿತ್ತನೆ ಮಾಡಿರುವ ರೈತರು ಮುಗಿಲಿನತ್ತ ಚಿತ್ತ ನೆಟ್ಟಿದ್ದಾರೆ. ಆದರೆ, ಮುಂಗಾರಿನ ಕೃಷಿ ಚಟುವಟಿಕೆ ಪೂರ್ಣಗೊಳ್ಳದ ರೈತರು ಇನ್ನಷ್ಟು ದಿನ ಮಳೆಯಾಗದಿದ್ದರೂ ಪರವಾಗಿಲ್ಲ ಎನ್ನುತ್ತಿದ್ದಾರೆ.

    ಅಲ್ಪಸ್ವಲ್ಪ ಸುರಿದ ಮಳೆಯಿಂದಾಗಿ ಈಗಾಗಲೇ ಶೇಂಗಾ, ಹೆಸರು, ಬಿಟಿ ಹತ್ತಿ ಬಿತ್ತನೆ ಮಾಡಿದ್ದೇವೆ. ಇದೀಗ ಬಿತ್ತನೆ ಬೀಜಗಳು ಮೊಳಕೆಯೊಡೆದು ತೇವಾಂಶದ ಕೊರತೆಯಿಂದ ನಲುಗುತ್ತಿವೆ. ಬಿತ್ತಿದ ಬೀಜಗಳಿಗೆ ಇಲಿಗಳ ಕಾಟ ಹೆಚ್ಚಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಉತ್ತಮ ಮಳೆಯಾದರೆ ಒಳ್ಳೆಯದು, ಇಲ್ಲದಿದ್ದರೆ ಮೊಳಕೆಯೊಡೆದ ಬೀಜ, ಸಸಿಗಳೆಲ್ಲ ತೇವಾಂಶ ಕೊರತೆಯಿಂದ ಕಮರಲಿವೆ. ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಡಿ ಬೀಜದಂಗಡಿಗಳಲ್ಲಿ ಅವಶ್ಯಕ ಗೊಬ್ಬರ ಸಿಗುವಂತಾಗಬೇಕು.

    | ವಿರೂಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ ರೈತರು

    ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು, ಗೋವಿನಜೋಳ, ತೊಗರಿ ಬೀಜಗಳು ದಾಸ್ತಾನಿವೆ. ರೈತರು ಸಂಬಂಧಿತ ಪ್ರಮಾಣಪತ್ರಗಳನ್ನು ನೀಡಿ ಸಹಾಯಧನದಡಿ ಬೀಜ ಪಡೆಯಬಹುದಾಗಿದೆ. ಅಲ್ಲದೆ, ಖಾಸಗಿ ಮಾರಾಟ ಕೇಂದ್ರದಲ್ಲಿ ಡಿಎಪಿ ಸೇರಿ ಇತರ ಗೊಬ್ಬರವೂ ಲಭ್ಯವಿದ್ದು, ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ನಿಗಾ ವಹಿಸಲಾಗಿದೆ. ಬೀಜ ಖರೀದಿಸಿದ ಬಗ್ಗೆ ಅಧಿಕೃತ ರಸೀದಿ ಪಡೆದು ಕಾಯ್ದಿಟ್ಟುಕೊಳ್ಳಬೇಕು. ರೈತರು ಕಳೆ ನಾಶಕ, ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿಯತ್ತ ಚಿತ್ತ ಹರಿಸಬೇಕು.

    | ಚಂದ್ರಶೇಖರ ನರಸಮ್ಮನವರ

    ಕೃಷಿ ಅಧಿಕಾರಿ ಲಕ್ಷೆ್ಮೕಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts