More

    ಬಿತ್ತನೆಗೆ ಭೂಮಿ ಹದಗೊಳಿಸಿದ ಅನ್ನದಾತ

    ಸವಣೂರ: ತಾಲೂಕಿನಲ್ಲಿ ವಾಡಿಕೆಯಂತೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಜಮೀನನ್ನು ಹದಗೊಳಿಸಿ, ಬೀಜ ಬಿತ್ತನೆಗೆ ಮುಂದಾಗಿದ್ದಾರೆ. ಆದರೆ, ಲಾಕ್​ಡೌನ್ ಘೊಷಣೆ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಿ ದಾಸ್ತಾನು ಮಾಡಲು ರೈತರು ಪರದಾಡುವಂತಾಗಿದೆ.

    ವಾರ್ಷಿಕ ವಾಡಿಕೆ ಮಳೆ 703 ಮೀ.ಮೀ ಇದ್ದು, ಈವರೆಗೆ 155.06 ಮೀ.ಮೀ. ಮಳೆಯಾಗಿದೆ. ಮೇನಲ್ಲಿ ವಾಡಿಕೆಯ 83 ಮೀ.ಮೀ. ಮಳೆ ಪೈಕಿ ಈವರೆಗೆ 53.76 ಮೀ.ಮೀ. ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕೃಷಿ ಭೂಮಿಯನ್ನು ಹದಗೊಳಿಸಿ ಈಗಾಗಲೇ ಹೆಸರು ಬೀಜ ಬಿತ್ತನೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಒಟ್ಟು 43,281 ಹೆಕ್ಟೇರ್ ಕೃಷಿ ಬಿತ್ತನೆ ಭೂಮಿ ಇದೆ. ಅದರಲ್ಲಿ ಏಕದಳ ಧಾನ್ಯ 14,376 ಹೆ., ದ್ವಿದಳ ಧಾನ್ಯ 1,690 ಹೆ., ಎಣ್ಣೆ ಬೆಳೆ ಕಾಳು 11,765 ಹೆ., ವಾಣಿಜ್ಯಬೆಳೆ 15,450 ಹೆ. ಬಿತ್ತನೆ ಗುರಿ ಹೊಂದಲಾಗಿದೆ.

    ಕೃಷಿ ಇಲಾಖೆ ಹಾಗೂ ಮಾರಾಟಗಾರರು ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಉಪಕರಣ, ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಂಗ್ರಹಿಸಿದ್ದಾರೆ. ಮುಂಗಾರು ಹಂಗಾಮಿಗಾಗಿ ತಾಲೂಕಿನ ಸವಣೂರ, ತವರಮೆಳ್ಳಿಹಳ್ಳಿ, ಹುರಳೀಕುಪ್ಪಿ, ಹತ್ತಿಮತ್ತೂರ, ಯಲವಿಗಿ ಹಾಗೂ ಕಡಕೋಳ, ಚಿಕ್ಕಮರಳಿಹಳ್ಳಿ ಗ್ರಾಮಗಳ ರೈತ ಸಂರ್ಪಕ ಕೇಂದ್ರದಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ.

    ತಾಲೂಕಿನ 35 ಖಾಸಗಿ ಮಾರಾಟಗಾರರು, 18 ಸ್ವ-ಸಹಾಯ ಸಂಘಗಳು, 1 ತಾಲೂಕು ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಸೇರಿ ಒಟ್ಟು 54 ಮಾರಾಟ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ರೈತರು ಗುರುತಿನ ಚೀಟಿಯೊಂದಿಗೆ ಹೆಬ್ಬೆರಳಿನ ಗುರುತು ನೀಡಿ ಎಂಆರ್​ಪಿ ದರದಲ್ಲಿ ರಸಗೊಬ್ಬರ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ರೈತರು ಅನಧಿಕೃತ ಖಾಸಗಿ ವ್ಯಕ್ತಿಗಳಿಂದ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಖರೀದಿ ಮಾಡಬಾರದು. ಅಂತಹ ಪ್ರಕರಣಗಳು ಕಂಡು ಬಂದರೆ ಕೂಡಲೇ ಕೃಷಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.

    ಬಿತ್ತನೆಗೆ ಅವಶ್ಯವಿರುವ ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಪೂರ್ವ ಸಿದ್ಧತೆ ಕೈಗೊಳ್ಳಬೇಕು. ಈಗಾಗಲೇ ಕೃಷಿ ಜಮೀನಿನಲ್ಲಿರುವ ಮಣ್ಣು ಪರೀಕ್ಷೆ ಕೈಗೊಂಡು, ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗುತ್ತಿದೆ. ಅವಶ್ಯಕತೆಗೆ ಅನುಗುಣವಾಗಿ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ. ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಸವಣೂರ

    ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪುವಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ಬಿತ್ತನೆಗೆ ಮುನ್ನ ರೈತರಿಗೆ ಅವಶ್ಯವಿರುವ ಮಾರ್ಗದರ್ಶನ ನೀಡಬೇಕು. ರೈತರು ಬೆಳೆದ ಬೆಳೆಗೆ ರೈತರೇ ಬೆಲೆಯನ್ನು ನಿಗದಿಪಡಿಸುವಂತಾಗಬೇಕು. | ಪಾಂಡುರಂಗ ಬಳ್ಳಾರಿ, ಸ್ಥಳೀಯ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts