More

    ಬಿಟಿ ಹತ್ತಿಗೆ ಕಾಂಡ ಕೊರಕ ಕೀಟಬಾಧೆ

    ಹಾವೇರಿ: ಜಿಲ್ಲೆಯ ರೈತರಿಗೆ ಅದ್ಯಾವ ಶಾಪವೋ ಏನೋ ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದರು. ಈ ಬಾರಿ ಕಳಪೆ ಸೋಯಾಬೀನ್ ಬಿತ್ತಿ ನಷ್ಟ ಅನುಭವಿಸಿದರು. ಇದೀಗ ಬಿಟಿಹತ್ತಿಗೂ ಹುಟ್ಟುತ್ತಲೇ ಕಾಂಡ ಕೊರಕದ ಕೀಟಬಾಧೆ ಆರಂಭಗೊಂಡಿದೆ.

    ಜಿಲ್ಲೆಯಲ್ಲಿ ಬಿಟಿಹತ್ತಿಯ ಬದಲು ಸೋಯಾಬೀನ್ ಬೆಳೆದರಾಯಿತು ಎಂದು ರೈತರು ಅತಿಹೆಚ್ಚು ಪ್ರಮಾಣದಲ್ಲಿ ಅದರತ್ತ ವಾಲಿದ್ದರು. ಆದರೆ, ಸೋಯಾಬೀನ್ ಬೀಜಗಳಲ್ಲಿ ಮೊಳಕೆ ಪ್ರಮಾಣವೇ ಕಡಿಮೆಯಾಗಿದ್ದರಿಂದ ಕೃಷಿ ಸಚಿವರೇ ಸೋಯಾಬೀನ್ ಬಿತ್ತಬೇಡಿ ಎಂದು ಸಲಹೆ ನೀಡಿದರು. ಹೀಗಾಗಿ ಅನೇಕ ರೈತರು ಬಿಟಿಹತ್ತಿ ಬಿತ್ತನೆ ಮಾಡಿದ್ದರು. ಆದರೆ, ಇದೀಗ ಬಿಟಿಹತ್ತಿಗೆ ಹುಟ್ಟುತ್ತಲೇ ಕೀಟಬಾಧೆ ಆರಂಭಗೊಂಡಿದ್ದು, ಸಾವಿರಾರು ರೂ. ವೆಚ್ಚ ಮಾಡಿ ಕ್ರಿಮಿನಾಶಕ ಸಿಂಪಡಿಸುವಂತಾಗಿದೆ.

    ರೈತರು ಬಿಟಿಹತ್ತಿ ಬಿತ್ತನೆ ಮಾಡಿದ 20ರಿಂದ 25 ದಿನಗಳಾಗಿದ್ದು, ಗಿಡಗಳು ನಾಲ್ಕೈದು ಇಂಚು ಸಹ ಬೆಳೆದಿಲ್ಲ. ಆಗಲೇ ಗಿಡದ ಚೆಂಡಿ ಮುರಿದು ಬೀಳುತ್ತಿದೆ. ರೈತರು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕೀಟಗಳು ಕಂಡುಬಂದಿವೆ. ಇಷ್ಟು ಸಣ್ಣ ಪ್ರಮಾಣದಲ್ಲಿರುವ ಗಿಡಗಳಿಗೆ ಕ್ರಿಮಿನಾಶಕ ಸಿಂಪಡಣೆಗೆ ರೈತರು ಅನಿವಾರ್ಯವಾಗಿ ಮುಂದಾಗುವಂತಾಗಿದೆ. ಹಾಗೆಯೆ ಬಿಟ್ಟರೆ ಗಿಡದ ಚೆಂಡಿಯ ಜೊತೆಗೆ ಸಂಪೂರ್ಣ ಗಿಡವೂ ನಾಶವಾಗುವ ಭೀತಿ ಆವರಿಸಿದೆ. ಹೀಗಾಗಿ ರೈತರು ಅವರಿವರು ಕೊಡುವ ಸಲಹೆ, ಅಕ್ಕಪಕ್ಕದ ಜಮೀನುಗಳ ರೈತರು ಈಗಾಗಲೇ ಸಿಂಪಡಣೆ ಮಾಡಿರುವ ಕ್ರಿಮಿನಾಶಕವನ್ನು ದುಬಾರಿ ಬೆಲೆ ತೆತ್ತು ತರುತ್ತಿದ್ದಾರೆ.

    ಜಿಲ್ಲೆಯಲ್ಲಿ ಬಿಟಿಹತ್ತಿಗೆ ಸದ್ಯ ಕಾಂಡ ಕೊರೆಯುವ ಮೂತಿಹುಳದ ಕಂಡುಬಂದಿದೆ. ಇದು ಹೆಚ್ಚಾಗಿ ಮಲೆನಾಡು, ಅರೆಮಲೆನಾಡು ಪ್ರದೇಶದಲ್ಲಿ ಕಂಡುಬರುತ್ತದೆ. ಈ ಕೀಟದ ಮರಿಗಳು ಕಾಂಡದೊಳಗೆ ಇದ್ದು, ತಿರುಳನ್ನು ತಿನ್ನುವುದರಿಂದ ಗಿಡಗಳು ಟೊಳ್ಳಾಗಿ ಭೌತಿಕ ಒತ್ತಡದಿಂದ ಮುರಿದು ಬೀಳುತ್ತಿವೆ. ಅಲ್ಲದೆ, ಎಲೆಗಳು ಹಳದಿ ವರ್ಣಕ್ಕೆ ತಿರುಗಿ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ ಎನ್ನುತ್ತಾರೆ ಹನುಮನಮಟ್ಟಿ ಕೆವಿಕೆಯ ಹಿರಿಯ ವಿಜ್ಞಾನಿ ಡಾ. ಅಶೋಕ ಪಿ.

    ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದೆವು. ಅದಕ್ಕೆ ಇನ್ನೂ ಸರಿಯಾಗಿ ಪರಿಹಾರ ಬಂದಿಲ್ಲ. ಈ ಬಾರಿ ಸಾಲ ಮಾಡಿ ಬಿಟಿಹತ್ತಿ ಬಿತ್ತನೆ ಮಾಡಿದ್ದೆವು. ಈಗ ಅದು ಹುಟ್ಟುತ್ತಲೇ ಕೀಟಬಾಧೆ ಆವರಿಸಿದ್ದು, ಬೆಳೆ ಬರುತ್ತದೆಯೋ ಇಲ್ಲವೋ ಎಂಬ ಆತಂಕ ಮೂಡಿದೆ. ಸದ್ಯ ಕರೊನಾ ಹಾವಳಿಯಿಂದ ನಮಗೆ ಯಾರೂ ಸಾಲವನ್ನು ಕೊಡುತ್ತಿಲ್ಲ. ಸರ್ಕಾರ ಕ್ರಿಮಿನಾಶಕಗಳನ್ನಾದರೂ ಉಚಿತವಾಗಿ ಪೂರೈಸಿದರೆ ಅನುಕೂಲವಾಗುತ್ತದೆ.

    | ಚನ್ನಬಸಪ್ಪ ಸೂರದ, ವರದಾಹಳ್ಳಿ ರೈತ

    ಜಿಲ್ಲೆಯಲ್ಲಿ ಬಿಟಿಹತ್ತಿಗೆ ಕಾಂಡಕೊರೆಯುವ ಮೂತಿಹುಳದ ಬಾಧೆಯ ಮಾಹಿತಿ ಬಂದಿದೆ. ಈಗಾಗಲೇ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ರೈತರು ಮೂತಿಹುಳದ ಬಾಧೆ ನಿಯಂತ್ರಿಸಲು ಬಿಟಿಹತ್ತಿಯ ಪ್ರತಿ 25 ಸಾಲಿಗೆ ಬಲೆ ಸಾಲಿನಂತೆ ಬೆಂಡಿಯನ್ನು ಬಿತ್ತಬೇಕಿತ್ತು. ಬೆಳಗಿನ ಸಮಯದಲ್ಲಿ ಈ ಹುಳುಗಳು ಬೆಂಡಿ ಗಿಡಗಳ ಮೇಲೆ ಕುಳಿತುಕೊಳ್ಳುತ್ತಿದ್ದವು. ಅವುಗಳನ್ನು ಆಯ್ದು ನಾಶಪಡಿಸಬಹುದಿತ್ತು. ಈಗ ಕೀಟಬಾಧೆ ಅಧಿಕ ಪ್ರಮಾಣದಲ್ಲಿದ್ದರೆ ರೈತರು 2.0 ಮಿ.ಲೀ, ಪ್ರೊಫೆನೊಪಾಸ್ ಡಿಡಿವಿಪಿ 70 ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯು 25ರಿಂದ 50 ದಿವಸಗಳಿದ್ದಾಗ ಅವಶ್ಯಕತೆಗೆ ತಕ್ಕಂತೆ ಸಿಂಪಡಣೆ ಮಾಡಬೇಕು.

    | ಡಾ. ಅಶೋಕ ಪಿ., ಹಿರಿಯ ವಿಜ್ಞಾನಿ ಕೆವಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts