More

    ಬಿಜೆಪಿ ನಾಯಕರು ಮುಳುಗಡೆ ನಾಯಕರಲ್ಲ; ಮುಳುಗಿಸಲೆಂದೇ ಇರುವ ನಾಯಕರು: ಮಾಜಿ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ

    ಆಯನೂರು: ಬಿಜೆಪಿಯ ಸರ್ಕಾರ ರೈತರನ್ನು ಮುಳುಗಡೆ ಮಾಡಲೆಂದೇ ಇರುವ ಸರ್ಕಾರ. ಬಿಜೆಪಿ ನಾಯಕರು ಮುಳುಗಡೆ ನಾಯಕರಲ್ಲ. ಮುಳುಗಿಸಲೆಂದು ಇರುವ ನಾಯಕರು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ, ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.
    ಭಾನುವಾರ ಕುಂಸಿ ವೀರಭದ್ರೇಶ್ವರ ಸಭಾ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತ ಸಮಿತಿ ಹಾಗೂ ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಸಮಿತಿ ಹಮ್ಮಿಕೊಂಡಿದ್ದ ಶರಾವತಿ ಮುಳುಗಡೆ ಸಂತ್ರಸ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕಮಿಷನ್ ಸರ್ಕಾರವನ್ನು ಜನರು ಕಿತ್ತೊಗೆಯುತ್ತಾರೆ ಎಂದರು.
    ಸಮಸ್ಯೆ ಪರಿಹಾರಕ್ಕಾಗಿ ಒಗ್ಗಟ್ಟಾಗಿ ನಾವೆಲ್ಲರೂ ಹೋರಾಡ ಮಾಡೋಣ. ಆಯನೂರಿನಿಂದ ಹೊರಡುವ ಪಾದಯಾತ್ರೆಗೆ ಕುಟುಂಬ ಸಮೇತರಾಗಿ ಬಂದು ಬೆಂಬಲ ನೀಡಿ. ಬಿಜೆಪಿ ಸರ್ಕಾರ ಅರಣ್ಯ ಜಮೀನನಲ್ಲಿ ಸಾಗುವಳಿ ಮಾಡುವ ರೈತರ ಹಕ್ಕುಪತ್ರ ಕಸಿದುಕೊಂಡಿದೆ. ಇದಕ್ಕಾಗಿಯೇ ಕಾಗೋಡು ತಿಮ್ಮಪ್ಪ ಇಳಿ ವಯಸ್ಸಲ್ಲೂ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ. ಈ ಹೋರಾಟದ ಉದ್ದೇಶ ನಿಮಗೆ ನ್ಯಾಯ ಕೊಡಿಸುವುದಾಗಿದೆ ಎಂದು ಹೇಳಿದರು.
    ಉಳುವವನೆ ಒಡೆಯ ಎಂದು ಹೇಳಿದ ಕಾಂಗ್ರೆಸ್ ಸರ್ಕಾರ 94ಸಿ , 94ಸಿಸಿ ಕಾಯ್ದೆ ಜಾರಿಗೆ ತಂದಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಾವಿರಾರು ಜನರಿಗೆ ಹಕ್ಕುಪತ್ರ ನೀಡಲಾಗಿತ್ತು. ಬಿಜೆಪಿ ಸರ್ಕಾರ ಅದನ್ನು ಕಿತ್ತುಕೊಂಡಿದೆ. ಜನರನ್ನು ಮುಳುಗಿಸುವ ಪ್ರಯತ್ನ ಮಾಡುತ್ತಿದ್ದು ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ನಮಗೆ ಅಧಿಕಾರ ನೀಡಿದರೆ ನಿಮ್ಮ ಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ನ.28ರಂದು ಆಯನೂರಿನಿಂದ ಪಾದಯಾತ್ರೆಯನ್ನು ಆಯೋಜಿಸಲಾಗಿದ್ದು ಶಿವಮೊಗ್ಗದಲ್ಲಿ ಸಂಜೆ ಕಾರ್ಯಕ್ರಮವಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸುರ್ಜೆವಾಲಾ ಇತರರು ಭಾಗವಹಿಸಲಿದ್ದು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
    ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತ ಸಮಿತಿಯ ಸಂಚಾಲಕ ಆರ್.ಪ್ರಸನ್ನಕುಮಾರ್ ಮಾತನಾಡಿ, ಶರಾವತಿ ಸಂತ್ರಸ್ತರ ಹಾಗೂ ಮಲೆನಾಡು ಭಾಗದ ಜನರ ಸಮಸ್ಯೆಗಳ ಬಗ್ಗೆ ಮಲೆನಾಡು ಜನಾಕ್ರೋಶ ಎಂಬ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts