More

    ಬಿಜೆಪಿ ಕೊಡುಗೆ ಹೈಜಾಕ್ ಮಾಡಿದ್ದೇ ಕೆಎಂಶಿ ಸಾಧನೆ : ಎನ್.ಆರ್.ಸಂತೋಷ್ ಲೇವಡಿ



    ಹಾಸನ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕೊಡುಗೆಗಳನ್ನು ಹೈಜಾಕ್ ಮಾಡುತ್ತಿರುವುದೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಸಾಧನೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಲೇವಡಿ ಮಾಡಿದರು.


    ಅರಸೀಕೆರೆ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹಿಳೆಯರಿಗೆ ಮಡಿಲು ತುಂಬುವ ಶಾಸ್ತ್ರದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.


    ನಗರ ಹಾಗೂ ಗ್ರಾಮೀಣ ಭಾಗದ ಜನರ ಜಲದಾಹ ನೀಗಿಸಲು ಉಭಯ ಸರ್ಕಾರಗಳು ನಿರಂತರವಾಗಿ ಶ್ರಮಿಸುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಹೆಸರಿನಲ್ಲಿ ನೀರು ಒದಗಿಸಲು 220 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡುವ ಮೂಲಕ ಫ್ಲೋರೈಡ್ ಪೀಡಿತರ ನೆರವಿಗೆ ಧಾವಿಸಿದೆ ಎಂದರು.


    ಗ್ರಾಮೀಣ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ ಇಲಾಖೆ, ಜಿಲ್ಲಾ ಪಂಚಾಯಿತಿ ಸೇರಿ ಕೆಲ ಇಲಾಖೆಗಳ ಅಧಿಕಾರಿಗಳು ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಅಣತಿಯಂತೆ ನಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರ ಬಳಸದೆ ಸರ್ಕಾರದ ಕೊಡುಗೆ ಮರೆಮಾಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.


    ಗ್ರಾಮ ಪಂಚಾಯಿತಿ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ನನ್ನದೇ ಎಂದು ಬಿಂಬಿಸಿಕೊಳ್ಳಲು ಹಾರೆ, ಗುದ್ದಲಿ, ಪಿಕಾಸಿ ಹಿಡಿದು ಪೂಜೆ ನಡೆಯುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಜನಪರ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಹೈಜಾಕ್ ಮಾಡಲು ಬಿಡುವುದಿಲ್ಲ. ಬರಪೀಡಿತ ತಾಲೂಕಿಗೆ ಯಗಚಿ, ಹೇಮಾವತಿ ಶುದ್ಧ ಕುಡಿಯುವ ನೀರು ಹರಿಸಿದ ಸರ್ಕಾರ ಯಾವುದು ಎನ್ನುವ ನಾಗರಿಕರ ಪ್ರಶ್ನೆಗೆ ಉತ್ತರ ನೀಡಿ ಎಂದು ತಿರುಗೇಟು ನೀಡಿದರು.


    ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳಿಗೆ ಕಾಂಕ್ರೀಟ್ ಹಾಕುವುದಲ್ಲ ಎಂಬುದನ್ನು ಶಾಸಕರು ಇನ್ನಾದರೂ ಮನಗಾಣಬೇಕಿದೆ. ಶಿಕ್ಷಣ, ಆರೋಗ್ಯ ಸೇವೆ, ಯುವಕರಿಗೆ ಉದ್ಯೋಗ ನೀಡುವುದು ಸೇರಿ ಜನರ ಆದಾಯ ಹೆಚ್ಚಿಸುವ ಕೆಲಸ ಇದೂವರೆಗೂ ಮಾಡದಿರುವುದು ದುರದೃಷ್ಟಕರ. ಜಲ್ಲಿ, ಸಿಮೆಂಟ್ ಕೆಲಸದಿಂದ ಬೇನಾಮಿ ಗುತ್ತಿಗೆದಾರರ ಜೇಬು ತುಂಬಿದೆಯೇ ವಿನಹ ಯಾರೊಬ್ಬರಿಗೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.


    ಕಾಂಕ್ರೀಟ್ ರಸ್ತೆ ಎತ್ತರವಾಗಿದ್ದು, ಮನೆಗಳಿಗೆ ನೀರು ನುಗ್ಗಲು ಪ್ರಮುಖ ಕಾರಣವಾಗಿದೆ. ಕ್ಷೇತ್ರದಲ್ಲಿ ಇದೀಗ ಸತತ 14 ವರ್ಷಗಳ ಬರ ನೀಗಿದ್ದು ಕೆರೆ, ಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ. ಅನ್ನದಾತನ ಬದುಕು ಉತ್ತಮಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಹಣ್ಣೆಲೆ ಉದುರಿ, ಚಿಗುರೆಲೆಗೆ ಅವಕಾಶ ದೊರೆಯಲಿ ಎಂದರು.
    ಹಿರಿಯೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಶೀಘ್ರವೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.


    ಶೋಷಿತ ಸಮುದಾಯಕ್ಕೆ ಮೀಸಲು ಹೆಚ್ಚಳ : ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಗ್ರಂಥದ ಮೌಲ್ಯಗಳನ್ನು ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಚಯಿಸುವ ಅಗತ್ಯವಿದೆ. ದುಷ್ಟರಿಗೆ ಶಿಕ್ಷೆ, ಶಿಷ್ಟರ ಪರಿಪಾಲನೆ ಎಂಬುದು ಭಾರತೀಯ ಮಹಾನ್ ಗ್ರಂಥವೆಂದು ಬಿಂಬಿತವಾಗಿರವ ರಾಮಾಯಣದಿಂದ ತಿಳಿದು ಬರುತ್ತದೆ. ಇಂತಹ ಮಹಾಪುರುಷನ ಜಯಂತಿಯಂದು ಸರ್ಕಾರ ಶೋಷಿತ ಸಮುದಾಯದ ಮೀಸಲು ಹೆಚ್ಚಳಕ್ಕೆ ಮುನ್ನುಡಿ ಬರೆದಿದೆ ಎಂದು ಬಣ್ಣಿಸಿದರು.


    ಬಿಜೆಪಿ ಒಬಿಸಿ ಮುಖಂಡ ಚಂದ್ರಣ್ಣ ಮಾತನಾಡಿ, ಕ್ಷೇತ್ರದಲ್ಲಿ ಜಾತಿ, ಜಾತಿಗಳ ನಡುವೆ ಸಂಘರ್ಷ ಹುಟ್ಟು ಹಾಕುವ ಮನಸ್ಥಿತಿಯ ವ್ಯಕ್ತಿಯ ದುರಾಡಳಿತಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ ಎಂದರು. ಮುಖಂಡರಾದ ಉಮಾಶಂಕರ್, ವೈ.ಕೆ.ದೇವರಾಜ್, ಪಂಡಿತ್ ಬಸವರಾಜು, ಡಾ.ರವಿ, ಉಮೇಶ್ ಭೋವಿ, ಭೋಜಾನಾಯ್ಕ, ಶೈಲಾ ತ್ರಯಂಬಕಣ್ಣ, ಸಿದ್ದಪ್ಪ ಸೇರಿ ಹಲವರು ಮಾತನಾಡಿದರು. ಕುರುಬರಹಳ್ಳಿ ಗುರುಮೂರ್ತಿ, ಲಚ್ಚಾನಾಯಕ್, ಬೆಟ್ಟದಪುರ ಸತ್ಯಣ್ಣ, ಗಂಗಾಧರ್, ಮಲ್ಲಿಕಾರ್ಜುನ್, ಪ್ರಕಾಶ್ ಇದ್ದರು. ಬಳಿಕ ಎನ್.ಆರ್.ಸಂತೋಷ್ ಪತ್ನಿ ಜಾಹ್ನವಿ ಹಾಗೂ ಕುಟುಂಬ ಸದಸ್ಯರೊಂದಿಗೆ ಸಹಸ್ರಾರು ಮಹಿಳೆಯರಿಗೆ ಮಡಿಲಕ್ಕಿ ಉಡಿ ತುಂಬಿ, ಬಳೆ, ಸೀರೆ, ಕಣ ವಿತರಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts