More

    ಬಿಜೆಪಿಯಿಂದ ಪ್ರತಿ ಮನೆಗೆ ಬೆಳಕು

    ರಾಮದುರ್ಗ: ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ 18,700 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರಲಿಲ್ಲ. ನರೇಂದ್ರ ಮೋದಿ ಸರ್ಕಾರ 3 ವರ್ಷಗಳಲ್ಲಿ ಬಡವರ ಬಗ್ಗೆ ಕಾಳಜಿ ವಹಿಸಿ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

    ಪಟ್ಟಣದ ಮರಾಠ ಕಲ್ಯಾಣ ಮಂಟಪದಲ್ಲಿ ಭಾರತ ಸರ್ಕಾರದ ಇಂಧನ ಇಲಾಖೆ, ವಿದ್ಯುತ್ ಸಚಿವಾಲಯ, ಕರ್ನಾಟಕ ಇಂಧನ ಇಲಾಖೆ ಹಾಗೂ ಹೆಸ್ಕಾಂ ಸಂಯುಕ್ತ ಆಶ್ರಯದಲ್ಲಿ ‘ಉಜ್ವಲ ಭಾರತ ಉಜ್ವಲ ಭವಿಷ್ಯ ಇಂಧನ-2047’ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯುತ್ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ 2.1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಇಲಾಖೆ ಅಭಿವೃದ್ಧಿಗೆ ಹಣ ತೊಡಗಿಸಿದ್ದಾರೆ. ಜಿಲ್ಲೆಯಲ್ಲಿ ಸೌಭಾಗ್ಯ ಯೋಜನೆಯಡಿ 23 ಕೋಟಿ ರೂ. ವೆಚ್ಚದಲ್ಲಿ 13,291 ಫಲಾನುಭವಿಗಳಿಗೆ, ಬೆಳಕು ಯೋಜನೆಯಲ್ಲಿ 92 ಕೋಟಿ ರೂ.ವೆಚ್ಚದಲ್ಲಿ 5,475 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಶ್ರಮಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ 32,298 ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಪ್ರತಿ ರೈತರ ವಿದ್ಯುತ್ ಪಂಪ್‌ಸೆಟ್‌ಗಳಿಗೆ ವಾರ್ಷಿಕವಾಗಿ ತಗಲುವ ಸುಮಾರು 80 ಸಾವಿರ ರೂ. ಅನುದಾನವನ್ನು ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು.

    ಉಭಯ ಸರ್ಕಾರಗಳು ರೈತರ ಪ್ರಗತಿಗೆ ಸಾಕಷ್ಟು ಶ್ರಮಿಸಿವೆ. ಎಸ್.ಸಿ., ಎಸ್.ಟಿ ಸಮುದಾಯದ ಜನತೆಗೆ 75 ಯೂನಿಟ್ ಉಚಿತ ವಿದ್ಯುತ್ ಸಂಪರ್ಕದ ಹಣವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಿದೆ. ಸರ್ವರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು. ಸಂಸದೆ ಮಂಗಲ ಅಂಗಡಿ ಮಾತನಾಡಿ, ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು. ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ತಾಲೂಕಿನಲ್ಲಿ 29 ಸಾವಿರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 334 ಫಲಾನುಭವಿಗಳಿಗೆ 7.30 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

    ಹೆಸ್ಕಾಂ ಇಲಾಖೆಯ ಸಾಧನೆಗಳ ಮುನ್ನೋಟ ಹಾಗೂ ಪ್ರಗತಿ ಕುರಿತು ಕಿರುಚಿತ್ರ ಪ್ರದರ್ಶನಗೊಂಡಿತು. ಬೆಳಗಾವಿಯ ಹೆಸ್ಕಾಂ ವೃತ್ತದ ಅಧೀಕ್ಷಕ ಅಭಿಯಂತ ಗಿರಿಧರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಂಕ್ರೆಪ್ಪ ಬೆನ್ನೂರ, ಬೆಳಗಾವಿಯ ಹೆಸ್ಕಾಂ ವಲಯ ಕಚೇರಿಯ ಮುಖ್ಯ ಇಂಜಿನಿಯರ್ ಜಿ.ಪಿ.ನಾಗರಾಜ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರೇತರ ನಿರ್ದೇಶಕರಾದ ಮಹೇಶ ಭಾತೆ, ಅಣ್ಣಾಸಾಹೇಬ ದೇಸಾಯಿ, ಸ್ಥಳೀಯ ಹೆಸ್ಕಾಂ ರಾಮದುರ್ಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಕಿರಣ ಸಣ್ಣಕ್ಕಿ, ಹನುಮಂತ ತುಳಸಿಗೇರಿ ಇತರರಿದ್ದರು.

    ಬಡವರ ಬದುಕು ಹಸನಾಗಿ ಸ್ವಾಭಿಮಾನಿಗಳಾಗಿ ಬದುಕಲು ಬಿಜೆಪಿ ಸರ್ಕಾರ ಅವಕಾಶ ನೀಡಿದೆ. ಮುದ್ರಾ ಯೋಜನೆಯಲ್ಲಿ ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ 19.60 ಸಾವಿರ ಕೋಟಿ ರೂ.ಗಳನ್ನು ಅವರವರ ಬ್ಯಾಂಕ್ ಖಾತೆಗೆ ಜಮೆ ಮಾಡಿದೆ. ವಿರೋಧ ಪಕ್ಷದವರು ನಾವು ಉಚಿತವಾಗಿ ಅಕ್ಕಿ ಕೊಟ್ಟಿದ್ದೇವೆ. ಕೋಳಿ ಕೊಡುತ್ತೇವೆ ಎಂದು ವೋಟಿಗಾಗಿ ರಾಜಕಾರಣ ಮಾಡುತ್ತಾರೆ. ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ.
    | ಗೋವಿಂದ ಕಾರಜೋಳ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts