More

    ಬಿಜೆಪಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ, ಸಚಿವ ಎಂಟಿಬಿ ನಾಗರಾಜ್ ಅಭಿಮತ, ಕಟ್ಟಿಗೇನಹಳ್ಳಿಯಲ್ಲಿ ದಿನಸಿ ಕಿಟ್ ವಿತರಣೆ

    ಬೆಂಗಳೂರು ಗ್ರಾಮಾಂತರ: ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶದ ಸರ್ವಾಂಗೀಣ ಪ್ರಗತಿ ಪಥದಲ್ಲಿ ಮುನ್ನುಗ್ಗುತ್ತಿರುವ ಬಿಜೆಪಿಯಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೂ ಸೂಕ್ತ ಸ್ಥಾನಮಾನ ದೊರಕಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಹೊಸಕೋಟೆ ತಾಲೂಕು ಕಟ್ಟಿಗೇನಹಳ್ಳಿಯಲ್ಲಿ ಸೋಮವಾರ ಬಡವರಿಗೆ ದಿನಸಿಕಿಟ್ ವಿತರಿಸಿ ಮಾತನಾಡಿದರು, ವಿಪಕ್ಷಗಳು ಬಿಜೆಪಿಗೆ ಅಲ್ಪಸಂಖ್ಯಾತ ವಿರೋಧಿಗಳೆಂಬ ಹಣೆಪಟ್ಟಿ ಕಟ್ಟಿವೆ, ಇದು ಸತ್ಯಕ್ಕೆ ಹಾಗೂ ವಾಸ್ತವಕ್ಕೆ ಬಹಳ ದೂರವಾಗಿದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಲವಾರು ಜನಪರ ಯೋಜನೆಗಳು ರೂಪುಗೊಳ್ಳುತ್ತಿದ್ದು, ಎಲ್ಲ ಸಮುದಾಯಕ್ಕೂ ಜಾತಿ ಜನಾಂಗಕ್ಕೂ ಸಮಾನವಾದ ಅವಕಾಶ ದೊರಕಿಸಿಕೊಟ್ಟಿದೆ ಎಂದರು.

    ಕೇವಲ ಓಟ್‌ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡಿಕೊಂಡು ಬಂದಿರುವ ವಿಪಕ್ಷಗಳು ಕಾಲಹರಣ ಮಾಡಿವೆ ಹೊರತು ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಆರೋಪಿಸಿದರು.
    ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಐತಿಹಾಸಿಕ ತೀರ್ಮಾನದ ಮೂಲಕ ಅಲ್ಪಸಂಖ್ಯಾತ ಮಹಿಳೆಯರ ಮೇಲಿನ ಕಾಳಜಿ ತೋರಿಸಿಕೊಟ್ಟಿದೆ ಎಂದರು. ಪ್ರತಿ ಕ್ಷೇತ್ರದಲ್ಲೂ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಬಿಜೆಪಿ ಅವಿರತ ಶ್ರಮಿಸುತ್ತಿದೆ ಈ ಹಿನ್ನೆಲೆಯಲ್ಲಿ ಎಲ್ಲ ಕಡೆಗಳಲ್ಲೂ ಬಿಜೆಪಿ ಪರ ಅಲೆ ಬೀಸುತ್ತಿದೆ ಎಂದರು.
    ಸವಲತ್ತು ತಲುಪಿಸುವುದೇ ಗುರಿ:
    ಸರ್ಕಾರ ಹಲವು ಯೋಜನೆಗಳು ಜಾರಿಗೊಳಿಸುತ್ತಿದೆ ಅವುಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಅರ್ಹರಿಗೆ ಅವುಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.

    ನಾನು ಶಾಸಕನಾಗಿದ್ದ ಅವಧಿಯಲ್ಲಿ ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯ ಕಲ್ಪಿಸಲು ಸಾಕಷ್ಟು ಶ್ರಮಿಸಿದ್ದೆ, ಇತ್ತೀಚಿಗೆ ವಯಕ್ತಿಯ ಹಣದಲ್ಲಿ ಈ ಭಾಗದಲ್ಲಿ ಬೊರ್‌ವೆಲ್ ಕೊರೆಸಿದ್ದು ಉತ್ತಮ ನೀರು ಲಭ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಎರಡು ಬಾರಿ ಲಸಿಕೆ: ಕಟ್ಟಿಗೇನಹಳ್ಳಿಯಲ್ಲಿ ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಕುಟುಂಬಗಳಿದ್ದು, ಹಲವು ಬಾರಿ ಕರೊನಾ ಲಸಿಕಾ ಶಿಬಿರ ಹಮ್ಮಿಕೊಂಡಿದ್ದು, 2 ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ ಕೊಡಿಸಲಾಗಿದೆ, ಈ ಭಾಗದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

    ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ್ ಮಾತನಾಡಿ, ಈ ಹಿಂದೆ ಎಂಟಿಬಿ ಅವರು ಶಾಸಕರಾಗಿದ್ದಾಗ ಗ್ರಾಮಕ್ಕೆ ಅನೇಕ ಸವಲತ್ತುಗಳನ್ನು ಕಲ್ಪಿಸಿಕೊಟ್ಟಿದ್ದರು, ಮರುಚುನಾವಣೆಯಲ್ಲಿ ಸೋತರು ಅವರ ಜನಪರ ಕಾರ್ಯಗಳನ್ನು ನಿಲ್ಲಿಸಲಿಲ್ಲ, ನಮ್ಮ ಗ್ರಾಮದ ಅಭಿವೃದ್ಧಿ ಬಗ್ಗೆ ಸದಾ ಚಿಂತನೆ ನಡೆಸುವ ಎಂಟಿಬಿ ಅವರಿಗೆ ಮುಂದಿನ ಬಾರಿ ಎಲ್ಲ ಅಲ್ಪಸಂಖ್ಯಾತರು ಕೈಹಿಡಿಯುವುದರಲ್ಲಿ ಸಂದೇಹವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts