More

    ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಿದೆ

    ಚಿತ್ರದುರ್ಗ: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂಭಾಗ ಭಾನುವಾರ ವಿಜಯೋತ್ಸವ ಆಚರಿಸಲಾಯಿತು.

    ಮಾಜಿ ಸಚಿವ ಎಚ್.ಆಂಜನೇಯ ತಮಟೆ ಬಾರಿಸಿ, ಸಿಹಿ ವಿತರಿಸಿ, ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದರು. ಮಹಿಳಾ ಕಾರ್ಯಕರ್ತೆಯರು ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು.

    ಎಚ್.ಆಂಜನೇಯ ಮಾತನಾಡಿ, ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಿದೆ. ಈ ಭಾಗದ ಜನರು ಆ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂಬುದಕ್ಕೆ ತೆಲಂಗಾಣ ಫಲಿತಾಂಶ ಉತ್ತಮ ನಿದರ್ಶನ ಎಂದರು.

    ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ನಂತರ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿದ್ದ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ದೊಡ್ಡ ಪೆಟ್ಟು ನೀಡಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್‌ನ ಗ್ಯಾರಂಟಿ ಕರ್ನಾಟಕವನ್ನು ಆರ್ಥಿಕ ದುಸ್ಥಿತಿಗೆ ತಳ್ಳಲಿದೆ ಎನ್ನುತ್ತಿದ್ದ ಬಿಜೆಪಿಯವರು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ್ ಮೂರು ಕಡೆ ಗೆಲ್ಲಲು ಗ್ಯಾರಂಟಿಗಳನ್ನೇಕೆ ಘೋಷಣೆ ಮಾಡಿದರು. ನಮ್ಮ ಪಕ್ಷದ ಯೋಜನೆಗಳನ್ನೇಕೆ ಅನುಸರಿಸಿದರು. ಚುನಾವಣೆಯಲ್ಲಿ ಜಯಗಳಿಸಲು ಏನು ಬೇಕಾದರೂ ಮಾಡುತ್ತಾರೆ. ವಾಮ ಮಾರ್ಗದಲ್ಲಾದರೂ ಅಧಿಕಾರ ಪಡೆಯುತ್ತಾರೆ ಎಂದು ಕಿಡಿಕಾರಿದರು.

    ತೆಲಂಗಾಣದಲ್ಲಿ ನೀಡಿರುವ ಗ್ಯಾರಂಟಿಗಳನ್ನು ಖಂಡಿತ ಕಾಂಗ್ರೆಸ್ ಈಡೇರಿಸಲಿದೆ. ಸೋತಿರುವ ರಾಜ್ಯಗಳಲ್ಲಿ ವಿರೋಧ ಪಕ್ಷವಾಗಿ ಜನರ ಹಿತ ಕಾಯಲು ಶ್ರಮಿಸಲಿದ್ದೇವೆ. ನುಡಿದಂತೆ ನಡೆಯುವುದು ನಮ್ಮ ಪಕ್ಷದ ಸಿದ್ಧಾಂತ. ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡಲು ಪಕ್ಷದ ಪ್ರತಿಯೊಬ್ಬರು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಗ್ಯಾರಂಟಿ ಯೋಜನೆ ಮನೆ-ಮನೆ ತಲುಪಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

    ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪದಾಧಿಕಾರಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಅಂಜಿನಪ್ಪ, ಎನ್.ಡಿ.ಕುಮಾರ್, ಸಾಧಿಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts