More

    ಬಿಜೆಪಿಗರ ಸುಳ್ಳಿನ ಭರವಸೆಗೆ ಮರುಳಾಗಬೇಡಿ

    ವಾಡಿ (ಕಲಬುರಗಿ): ಇದೀಗ ಚುನಾವಣೆ ಸಮಯ, ಹೀಗಾಗಿ ಬಿಜೆಪಿಯವರು ತುಂಬಾ ಸಕ್ರಿಯವಾಗಿದ್ದಾರೆ. ಸುಳ್ಳು ಭರವಸೆ ಕೊಟ್ಟು, ಜನರನ್ನು ಮರಳು ಮಾಡುವುದೇ ಕೇಸರಿ ಪಡೆ ನಾಯಕರ ಕೆಲಸವಾಗಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಪ್ರಿಯಾಂಕ್ ಖರ್ಗೆ ದೂರಿದರು.

    ಕೊಲ್ಲೂರು ಗ್ರಾಮದಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಪಶು ಆಸ್ಪತ್ರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ಕೋಣೆ ಹಾಗೂ ಸರ್ಕಾರಿ ಪ್ರೌಢಶಾಲೆಯ 2 ಕೋಠಡಿಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ಬಿಜೆಪಿಯ ಗುರಿಯಾಗಿದೆ. ಆದರೆ ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ, ಯಾರು ಏನೇ ಮಾಡಿದರೂ ಮತದಾರರು ಕೈಬಿಡಲ್ಲ ಎಂದು ತಿಳಿಸಿದರು.

    ಶೇ.40 ಕಮಿಷನ್ ಸರ್ಕಾರ ರಾಜ್ಯದಲ್ಲಿದೆ. ಮಂತ್ರಿಗಳಿಗೆ ಹಾಗೂ ಶಾಸಕರಿಗೆ ದುಡ್ಡು ಕೊಟ್ಟರೆ ಮಾತ್ರ ಕೆಲಸಗಳಾಗುವ ಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಬಗ್ಗೆ ಮುಕ್ತ ಹಾಗೂ ಮುಖಾಮುಖಿ ಸಂವಾದ ಮಾಡುವ ತಾಕತ್ತು ಬಿಜೆಪಿ ನಾಯಕರಿಗಿಲ್ಲ. ನಾವೇ ವೇದಿಕೆ ಕಲ್ಪಿಸುತ್ತೇವೆ, ಚರ್ಚೆ ಮಾಡಲು ಬರ್ತಾರಾ? ಕಲಬುರಗಿಗೆ ಬಿಜೆಪಿ ಸರ್ಕಾರ ನೀಡಿದ 3 ಜನಪರ ಯೋಜನೆಗಳನ್ನು ತಿಳಿಸಲಿ ಎಂದು ಸವಾಲು ಹಾಕಿದರು.

    ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಗ್ರಾಪಂ ಅಧ್ಯಕ್ಷೆ ಸಾಬಮ್ಮ ಕನಗನಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪ್ರಮುಖರಾದ ಶ್ರೀನಿವಾಸ ಸಗರ, ಹಣಮಂತ ಚವ್ಹಾಣ್, ರಮೇಶ ಹಡಪದ, ಅಜೀಜ್ ಸೇಠ್, ಟೋಪಣ್ಣ ಕೋಮಟೆ, ಶರಣು ಸಾಹು ಬಿರಾಳ, ಭಾಗಪ್ಪ ಕೊಲ್ಲೂರ, ಶ್ರೀಶೈಲ ನಾಟೇಕರ್, ಗುಂಡುಗೌಡ ಪಾಟೀಲ್, ಕೃಷ್ಣಾರೆಡ್ಡಿ ಐರೆಡ್ಡಿ ಇತರರಿದ್ದರು.

    ನನ್ನನ್ನು ಬಂಜಾರ ವಿರೋಧಿ ಎನ್ನುವವರು, ನನ್ನ ಅವಧಿಯಲ್ಲಿ ತಾಂಡಾಗಳಿಗೆ ಎಷ್ಟು ಹಣ ನೀಡಿದ್ದೇನೆ ಎಂಬುದನ್ನು ದಾಖಲೆ ತೆಗೆದು ನೋಡಲಿ. ರಾಜ್ಯದ ವಿವಿಧೆಡೆ 400 ಸೇವಾಲಾಲ್ ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಲು ಅನುದಾನ ನೀಡಿದ್ದೇನೆ. ಸೇವಾಲಾಲ್ ಜನ್ಮಸ್ಥಳ ಸೋರಗೊಂಡನಕೊಪ್ಪ ಅಭಿವೃದ್ಧಿಗೆ 1.70 ಕೋಟಿ ರೂ. ಯೋಜನೆ ರೂಪಿಸಿ, 70 ಲಕ್ಷ ರೂ. ಬಿಡುಗಡೆಮಾಡಿದ್ದೇನೆ.

    | ಪ್ರಿಯಾಂಕ್ ಖರ್ಗೆ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts