More

    ಬಿಇಒ ಕಚೇರಿಗೇ ಇಲ್ಲ ಸ್ವಂತ ಕಟ್ಟಡ!

    ಬೆಳಗಾವಿ: ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಆ ತಾಲೂಕಿನ ಶೈಕ್ಷಣಿಕ ವ್ಯವಸ್ಥೆಯ ಮೂಲ ಕೇಂದ್ರಬಿಂದು. ಆ ಕಾರ್ಯಾಲಯದ ಮುಖಾಂತರವೇ ವ್ಯಾಪ್ತಿಗೊಳಪಡುವ ಶಾಲೆಗಳಿಗೆ ಅಗತ್ಯ ಸೌಲಭ್ಯ-ಸೌಕರ್ಯಗಳನ್ನು ನೀಡಲಾಗುತ್ತದೆ. ಆದರೆ, ಇಂತಹ ಮೂಲ ಕಚೇರಿಯೇ ಅಗತ್ಯ ಸೌಕರ್ಯದಿಂದ ವಂಚಿತವಾಗಿದೆ.

    ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಯೇ ಅಗತ್ಯ ಸೌಲಭ್ಯ ಇಲ್ಲದೆ ಪರಿತಪಿಸುತ್ತಿದೆ. ಪ್ರಮುಖವಾಗಿ ಈ ಕಚೇರಿಗೆ ಸ್ವಂತ ಕಟ್ಟಡವೇ ಇಲ್ಲ. ನಗರದ ಚವಾಟ್ ಗಲ್ಲಿಯ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆ ಸಂಖ್ಯೆ 5ರ ಕಟ್ಟಡದಲ್ಲಿ ಈ ಕಚೇರಿ ಕಾರ್ಯನಿರ್ವಹಿಸುತ್ತಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

    ಆತಂಕದಲ್ಲೇ ಸಿಬ್ಬಂದಿ ಕೆಲಸ: ಡಿಡಿಪಿಐ ಕಚೇರಿ ಹಿಂಭಾಗದಲ್ಲಿ ಗ್ರಾಮೀಣ ಬಿಇಒ ಕಚೇರಿಗೆ ಸರ್ಕಾರ ಎರಡು ವರ್ಷದ ಹಿಂದೆಯೇ ನಿವೇಶನ ಮಂಜೂರುಗೊಳಿಸಿದೆ. ಆದರೆ, ಈವರೆಗೂ ಅನುದಾನ ಬಿಡುಗಡೆಯಾಗದ್ದರಿಂದ ಕಟ್ಟಡ ನಿರ್ಮಾಣ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಪ್ರಸ್ತುತ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿರುವ ಬಿಇಒ ಕಚೇರಿ ಕಟ್ಟಡ ಶಿಥಿಲಗೊಂಡಿದೆ. ಗೋಡೆಗಳಲ್ಲಿ ಹಲವು ಕಡೆ ಬಿರುಕು ಬಿಟ್ಟಿದೆ. ಕಟ್ಟಡದ ಅವಶೇಷಗಳು ಆಗಾಗ ಕುಸಿಯುತ್ತಿವೆ. ಇದರಿಂದಾಗಿ ಸಿಬ್ಬಂದಿ ಆತಂಕದಲ್ಲೇ ಕೆಲಸ ಮಾಡುವಂತಾಗಿದೆ.

    ಮೂಲಸೌಲಭ್ಯಕ್ಕೆ ಬರ: 8 ಕೊಠಡಿ ಹೊಂದಿರುವ ಇದೇ ಕಟ್ಟಡದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರವೂ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ಕೆಲಸಗಳ ನಿಮಿತ್ತ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು ಕಚೇರಿಗೆ ಆಗಮಿಸುತ್ತಾರೆ. ಆದರೆ, ಇಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಗೃಹ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಇಕ್ಕಟ್ಟಿನಿಂದ ಕೂಡಿರುವ ಜಾಗದಲ್ಲಿ ಕಟ್ಟಡ ಇರುವುದರಿಂದಾಗಿ ಕಚೇರಿಗೆ ಬರುವವರು ತೊಂದರೆ ಅನುಭವಿಸುವಂತಾಗಿದೆ.

    ಪಠ್ಯಪುಸ್ತಕ ದಾಸ್ತಾನಿಗೂ ಪರದಾಟ: ಪ್ರತಿವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಸರ್ಕಾರ ಸರಬರಾಜು ಮಾಡುವ ಪಠ್ಯಪುಸ್ತಕಗಳ ದಾಸ್ತಾನಿಗೆ ಕಚೇರಿಯಲ್ಲಿ ಗೋದಾಮು ಇಲ್ಲ. ಪರಿಣಾಮ, ತಾಲೂಕಿನ ಮುತಗಾ ಗ್ರಾಮದ ಸರ್ಕಾರಿ ಶಾಲಾ ಕೊಠಡಿಗಳಲ್ಲಿ ಪಠ್ಯಪುಸ್ತಕ ದಾಸ್ತಾನು ಮಾಡಲಾಗುತ್ತಿದೆ. ಅಲ್ಲಿಂದ ಬೆಳಗಾವಿ ಗ್ರಾಮೀಣ ವಲಯ ವ್ಯಾಪ್ತಿಯ 443 ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸಲಾಗುತ್ತಿದೆ.

    ಸಭೆಗಳ ಆಯೋಜನೆಗೂ ಪರದಾಟ: ಕಚೇರಿಯಲ್ಲಿ ಸಭಾಂಗಣವೇ ಇಲ್ಲದ್ದರಿಂದ ವಿವಿಧ ಸಭೆಗಳ ಆಯೋಜನೆಗೂ ಅಧಿಕಾರಿಗಳು ಪರದಾಡುವಂತಾಗಿದೆ. ಅನಿವಾರ್ಯವಾಗಿ ಮುತಗಾ, ಸುಳಗಾ, ಮಚ್ಛೆ ಮತ್ತಿತರ ಗ್ರಾಮಗಳ ಸರ್ಕಾರಿ ಶಾಲೆಗಳ ಸಭಾಂಗಣಗಳಲ್ಲೇ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮುಖ್ಯಾಧ್ಯಾಪಕರು, ವಿಷಯವಾರು ಶಿಕ್ಷಕರ ಸಭೆ ನಡೆಸಲಾಗುತ್ತಿದೆ.

    ಬೆಳಗಾವಿ ಗ್ರಾಮೀಣ ಬಿಇಒ ಕಚೇರಿಗೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಈಗಾಗಲೇ 3.5 ಗುಂಟೆ ನಿವೇಶನ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಅನುದಾನ ಮಂಜೂರಾಗುವ ನಿರೀಕ್ಷೆಯಲ್ಲಿದ್ದೇವೆ.
    | ಡಾ. ಎ.ಬಿ. ಪುಂಡಲೀಕ. ಡಿಡಿಪಿಐ, ಬೆಳಗಾವಿ

    | ಇಮಾಮಹುಸೇನ್ ಗೂಡುನವರ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts