More

    ಬಿಂಕದಕಟ್ಟಿಯಲ್ಲಿ ಪಕ್ಷಿ ವೀಕ್ಷಣೆಗೆ ನಿರ್ಬಂಧ

    ಗದಗ: ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯವಾಗಿರುವ ಗದಗನ ಬಿಂಕದಕಟ್ಟಿ ಮೃಗಾಲಯದಲ್ಲಿ ಪಕ್ಷಿ ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಪ್ರಾಣಿಗಳ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗಿದೆ.

    ರಾಜ್ಯದಲ್ಲಿ ಈವರೆಗೂ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲವಾದರೂ, ಬಿಂಕದಕಟ್ಟಿಯಲ್ಲಿ ವಿದೇಶಿ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವುಗಳ ಪ್ರಾಣಕ್ಕೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಮುಂಜಾಗ್ರತೆ ವಹಿಸಲಾಗಿದೆ. ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್5ಎನ್8 ವೈರಸ್ ಮನುಷ್ಯನಿಗೆ ಹರಡುವ ಶಕ್ತಿ ಹೊಂದಿದೆ ಎನ್ನುವುದಕ್ಕೆ ಕಳೆದ 20 ದಿನಗಳ ಹಿಂದೆಯೇ ಪ್ರವಾಸಿಗರಿಗೆ ಪಕ್ಷಿ ವೀಕ್ಷಣೆಗೆ ಅವಕಾಶ ನಿರ್ಬಂಧಿಸಲಾಗಿದೆ.

    ಹುಲಿ ಹೊಂದಿರುವ ಉತ್ತರ ಕರ್ನಾಟಕದ ಏಕೈಕ ಮೃಗಾಲಯ ಎನ್ನುವ ಕಾರಣಕ್ಕೆ ಬಿಂಕದಕಟ್ಟಿ ಪ್ರಸಿದ್ಧಿ ಪಡೆದಿದೆ. 40 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಪ್ರಾಣಿ ಸಂಗ್ರಹಾಲಯದಲ್ಲಿ 90 ವಿವಿಧ ಜಾತಿಯ ಪಕ್ಷಿಗಳಿವೆ. ಈ ಪೈಕಿ 22 ಜಾತಿಯ ವಿದೇಶಿ ಪಕ್ಷಿಗಳಿವೆ. ಅದರಲ್ಲಿ ಲೇಡಿ ಅಮೆರ್ಸ್ಟ್, ರೋಸ್ ಪೆಲಿಕನ್ (ಗುಲಾಬಿ ಕೊಕ್ಕರೆ), ಕರಿ ಹಂಸ, ನೈಟ್ ಹೆರಾನ್, ಬ್ರಾಮಿನ್ ಕೈಟ್, ಲವ್ ಬರ್ಡ್ಸ್, ಕಾಕ್​ಟೇಲ್ ಬಡ್ಜ್​ರಿಗರ್(ಆಸ್ಟೇಲಿಯಾ ಮೂಲದ ಗಿಳಿ) , ಆಸ್ಟ್ರೀಚ್, ಎಮು, ರೋಸ್ ರಿಂಗ್ಡ್ ಪ್ಯಾರಾಕೀಟ್ (ಗುಲಾಬಿ ಕುತ್ತಿಗೆಯ ಗಿಳಿ), ಜಾವಾ ಸ್ಪಾರೋ (ಜಾವಾ ದೇಶದ ಗುಬ್ಬಿ), ಫಿಂಚಸ್, ರೆಡ್ ಜಂಗಲ್ ಫೌಲ್ (ಕೆಂಪು ಕಾಡು ಕೋಳಿ) ಪ್ರಮುಖ. ಪಕ್ಷಿಗಳನ್ನು ಹತ್ತಿರದಿಂದ ನೋಡಲು ಅನುಕೂಲವಾಗುವಂತೆ ಪಕ್ಷಿ ಪಂಜರ್, ಹಕ್ಕಿಕಾಪು (ಹಕ್ಕಿ ಪಂಜರೊಳಗೆ ಪ್ರವೇಶಿಸುವ ಪಾದಚಾರಿ ಸೇತುವೆ) ನಿರ್ವಿುಸಲಾಗಿದೆ. ಇಡೀ ರಾಜ್ಯದಲ್ಲಿ ಇಂಥ ಸೌಲಭ್ಯ ಇರುವುದು ಬಿಂಕದಕಟ್ಟಿ ಮೃಗಾಲಯದಲ್ಲಿ ಮಾತ್ರ. ಈ ಕಾರಣಕ್ಕಾಗಿಯೇ ಪಕ್ಷಿ ವೀಕ್ಷಣೆ ಬರುವವರ ಸಂಖ್ಯೆ ಇಲ್ಲಿ ಹೆಚ್ಚು. ನಿತ್ಯ 500ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ಕೊಡುತ್ತಾರೆ.

    ಹೀಗಿರುವಾಗ, ‘ಮಾನವ ಮತ್ತು ಪಕ್ಷಿಗಳ ದೇಹದಿಂದಲೂ ಎಚ್5ಎನ್8 ವೈಸರ್ ಹರಡುವ ಸಾಧ್ಯತೆಯುಂಟು. ಅನ್ಯ ಪಕ್ಷಿಧಾಮಕ್ಕೆ ಹೋದ ಪ್ರವಾಸಿಗರು ಅಲ್ಲಿನ ಪಕ್ಷಿಯ ಹಿಕ್ಕೆಯನ್ನು ತುಳಿದು ಬಿಂಕದಕಟ್ಟಿಗೆ ಬರಬಹುದು. ಒಂದೊಮ್ಮೆ ಅಲ್ಲಿನ ಪಕ್ಷಿಗೆ ಹಕ್ಕಿಜ್ವರ ಬಂದಿದ್ದೇ ಆದಲ್ಲಿ, ಇಲ್ಲಿರುವ ಪಕ್ಷಿಗಳಿಗೆ ವೈರಸ್ ಸುಲಭವಾಗಿ ಹರಡುತ್ತದೆ. ಇದನ್ನು ತಡೆಯಲು ಬಿಂಕದಕಟ್ಟಿ ಮೃಗಾಲಯದ ಪ್ರವೇಶ ದ್ವಾರದಲ್ಲಿ ಮ್ಯಾಟ್ ಅಳವಡಿಸಲಾಗಿದೆ. ಇದಕ್ಕೆ ಎಚ್5ಎನ್8 ವೈರಸ್ ಕೊಲ್ಲುವ ಔಷಧಿ ಸಿಂಪರಣೆ ಮಾಡಲಾಗಿದೆ. ಶೂ, ಚಪ್ಪಲಿಗೆ ಅಂಟಿಕೊಂಡಿದ್ದ ವೈರಸ್ ಸತ್ತು ಹೋಗುತ್ತದೆ. ಪರಿಣಾಮ ಇಲ್ಲಿಗೆ ಬರುವ ಪ್ರವಾಸಿಗರಿಂದ ಹಕ್ಕಿಜ್ವರ ಹೊರಡುವ ಸಾಧ್ಯತೆ ಕಮ್ಮಿ. ಹಾಗಂತ ವಲಸೆ ಪಕ್ಷಿಗಳು ಇಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೆ ಬೇರೆ ಕಡೆಯಿಂದ ಹಾರಿ ಬರುತ್ತವೆ. ಅಂತವುಗಳನ್ನು ತಡೆಯುವುದು ಕಷ್ಟ. ಹೀಗಾದಲ್ಲಿ ಇಲ್ಲಿನ ಪಕ್ಷಿಗಳಿಗೆ ವೈರಸ್ ತಗುಲಿ ಅದು ಮಾನವ ದೇಹವನ್ನೂ ಪ್ರವೇಶಿಸುವ ಸಾಧ್ಯತೆಯುಂಟು’ ಎನ್ನುತ್ತಾರೆ ಬಿಂಕದಕಟ್ಟಿ ಮೃಗಾಲಯದ ವೈದ್ಯ ಡಾ. ನಿಖಿಲ್ ಕುಲಕರ್ಣಿ.

    ಪ್ರತಿ ನಾಲ್ಕು ದಿನಕ್ಕೊಮ್ಮೆ ಮೃಗಾಲಯವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಇಲ್ಲಿರುವ ಪಕ್ಷಿಗಳ ಹಿಕ್ಕೆಯನ್ನು ಹದಿನೈದು ದಿನಕ್ಕೊಮ್ಮೆ ಸಂಗ್ರಹಿಸಿ ಬಾಗಲಕೋಟೆಯ ಪಶು ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಲಾಗುತ್ತಿದೆ. ತನ್ಮೂಲಕ ಬಿಂಕದಕಟ್ಟಿಯಲ್ಲಿರುವ ಪಕ್ಷಿಗಳಿಗೆ ಹಕ್ಕಿ ಜ್ವರ ಬಾಧಿಸದಂತೆ ನಿಗಾ ವಹಿಸಲಾಗಿದೆ.

    ಪ್ರವಾಸಿಗರಿಂದ ಇಲ್ಲಿನ ಪಕ್ಷಿಗಳಿಗೆ ಅಥವಾ ಪಕ್ಷಿಗಳಿಂದ ಪ್ರವಾಸಿಗರಿಗೆ ಹಕ್ಕಿಜ್ವರ ಹರಡದಂತೆ ತಡೆಯಲು ಪ್ರಯತ್ನಿಸಲಾಗುತ್ತಿದೆ. ಹಕ್ಕಿ ಜ್ವರ ರಾಜ್ಯಕ್ಕೆ ಸದ್ಯ ಕಾಲಿಡದಿದ್ದರೂ, ವಿದೇಶಿ ವಲಸೆ ಬಾನಾಡಿಗಳಿಂದ ಆತಂಕ ತಪ್ಪಿದ್ದಲ್ಲ. ಹೀಗಾಗಿ ಹೆಚ್ಚಿನ ಕಾಳಜಿ ವಹಿಸಲಾಗಿದೆ.
    | ಡಾ. ನಿಖಿಲ್ ಕುಲಕರ್ಣಿ, ವೈದ್ಯಾಧಿಕಾರಿ, ಬಿಂಕದಕಟ್ಟಿ ಮೃಗಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts