More

    ಬಾವಲಿ ಚೆಕ್‌ಪೋಸ್ಟ್‌ನಲ್ಲಿ ತೀವ್ರ ಕಟ್ಟೆಚ್ಚರ

    ಎಚ್.ಡಿ.ಕೋಟೆ: ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಭಾಗವಾದ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಗುರುವಾರ ತಹಸೀಲ್ದಾರ್ ಸಣ್ಣರಾಮಪ್ಪ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಟಿ.ರವಿಕುಮಾರ್ ನೇತೃತ್ವದ ತಂಡ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿತು.

    ಡಾ.ಟಿ.ರವಿಕುಮಾರ್ ಮಾತನಾಡಿ, 2018ರಲ್ಲಿ ಕೇರಳದಲ್ಲಿ 14 ಖಚಿತ ನಿಫಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 11 ಜನರು ಸೋಂಕಿಗೆ ಬಲಿಯಾಗಿದ್ದರು. 2021ರಲ್ಲಿ ಕೇರಳದಲ್ಲಿ ಒಂದು ನಿಫಾ ಪ್ರಕರಣ ವರದಿಯಾಗಿತ್ತು. ಇದೀಗ 2023ರಲ್ಲಿ 4 ಸಂಶಯಾಸ್ಪದ ನಿಫಾ ವೈರಸ್ ಪ್ರಕರಣಗಳು ಕಂಡುಬಂದಿವೆ ಎಂದು ಹೇಳಿದರು.

    ಜ್ವರ, ತಲೆನೋವು, ವಾಂತಿ, ತಲೆ ಸುತ್ತುವಿಕೆ, ಪ್ರಜ್ಞಾಹೀನತೆಗೆ ಒಳಗಾಗುವುದು, ಅತಿಯಾದ ಜ್ವರ ಮಿದುಳಿಗೆ ವ್ಯಾಪಿಸುವುದು, ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ನಿಫಾ ಲಕ್ಷಣಗಳಾಗಿವೆ. ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು. ಸೋಂಕಿಗೆ ತುತ್ತಾದ ದಿನದಿಂದ 4 ರಿಂದ 18 ದಿನಗಳಲ್ಲಿ ನಿಫಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ವಿವರಿಸಿದರು.

    ನಿಫಾ ವೈರಸ್ ಜ್ವರ ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸಿದರೆ ಇತರ ಪ್ರಾಣಿಗಳಿಗೆ ಹರಡುತ್ತದೆ. ಸೋಂಕಿತ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೆ ಮಲ-ಮೂತ್ರ, ಜೊಲ್ಲು ಮತ್ತು ರಕ್ತದ ನೇರ ಸಂಪರ್ಕದಿಂದ ಹರಡುತ್ತದೆ. ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಮನುಷ್ಯನ ಮಲ, ಮೂತ್ರ, ಜೊಲ್ಲು ಮತ್ತು ರಕ್ತದ ನೇರ ಸಂಪರ್ಕದಿಂದ ಆರೋಗ್ಯವಂತ ಮನುಷ್ಯರಿಗೆ ಹರಡುತ್ತದೆ. ಹೀಗಾಗಿ, ಕೇರಳದಲ್ಲಿ ಈ ಸೋಂಕು ಹರಡಿದ್ದು, ನಮ್ಮ ರಾಜ್ಯದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಆರೋಗ್ಯ ಇಲಾಖೆಯಿಂದ 2 ತಂಡವನ್ನು ರಚಿಸಿದ್ದು, ಒಂದು ತಂಡ ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆವರೆಗೆ, ಇನ್ನೊಂದು ತಂಡ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆ ತನಕ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಲಿದೆ. ಈ ತಂಡ ಕೇರಳದಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಿದೆ. ಜ್ವರ, ತಲೆನೋವು, ಮೈ-ಕೈ ನೋವು, ಸುಸ್ತು, ವಾಂತಿ, ನಡುಕ ಲಕ್ಷಣ ಕಂಡುಬಂದ ಪ್ರಯಾಣಿಕರ ಹೆಸರನ್ನು ಒಂದು ಪುಸ್ತಕದಲ್ಲಿ ನೋಂದಾಯಿಸಿ, ಪ್ರತಿದಿನ ಜಿಲ್ಲಾ ಸರ್ವೇಕ್ಷಣಾ ಕಚೇರಿ ಮೈಸೂರು ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.

    ಉಪ ತಹಸೀಲ್ದಾರ್ ತನುರಾಜ್, ವೈದ್ಯ ಡಾ.ವರ್ಷ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರು, ರವಿರಾಜ್, ಅಶೋಕ್, ಕೃಷ್ಣ, ಆರ್‌ಐ ಗೋವಿಂದರಾಜು, ವಿ.ಎ. ಮಹಮದ್‌ಗೌಸ್ ಮೋದಿನ್, ನಾಗರಾಜು, ಪೊಲೀಸ್ ಇಲಾಖೆಯ ಸಿಬ್ಬಂದಿ ಸೋಮೇಶ್, ಅರಣ್ಯ ಇಲಾಖೆಯ ಪ್ರಕಾಶ್ ಜಾಧವ್, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts