More

    ಬಾಳು ಮುಳುಗಿಸಿದ ಗುಂಡಬಾಳ

    ಹೊನ್ನಾವರ: ಕಳೆದೊಂದು ವಾರದಿಂದ ಎಡೆಬಿಡದೇ ಮಳೆ ಸುರಿದ ಪರಿಣಾಮ ಗುಂಡಬಾಳ, ಭಾಸ್ಕೇರಿ ಮತ್ತು ಬಡಗಣಿ ನದಿಗಳ ನೀರಿನ ಮಟ್ಟ ಅಪಾಯದ ಹಂತ ತಲುಪಿದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಸಾವಿರಾರು ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

    ಗುಂಡಬಾಳ ನದಿ ತೀರದ ಗುಂಡಬಾಳ, ಗುಂಡಿಬೈಲ್, ಚಿಕ್ಕನಕೋಡ, ಹಾಡಗೇರಿ, ಹುಡಗೋಡ, ಕಡಗೇರಿ, ನಾಥಗೇರಿ, ಹಡಿನಬಾಳ, ಕಾವೂರು, ಕೂಡ್ಲ ಮುಂತಾದ ಕಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಯಾಗಿದೆ. ಪಕ್ಕದ ಸಿದ್ದಾಪುರ ತಾಲೂಕಿನಲ್ಲಿ ಬೀಳುವ ಮಳೆಯ ನೀರು ಗುಂಡಬಾಳ ನದಿಗೆ ಹರಿದು ಬರುವುದರಿಂದ ನೀರಿನ ಮಟ್ಟ ಹೆಚ್ಚಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಸ್ಥಳದಲ್ಲಿ ಬೀಡುಬಿಟ್ಟಿದ್ದು ನದಿಯಲ್ಲಿನ ನೀರಿನ ಮಟ್ಟ ಹೆಚ್ಚಳದ ಸ್ಥಿತಿಗತಿಯನ್ನು ಅವಲೋಕಿಸುತ್ತಿದ್ದಾರೆ.

    ಕಾಳಜಿ ಕೇಂದ್ರ: ಚಿಕ್ಕನಕೋಡದಲ್ಲಿ 49 ಜನರು ಮತ್ತು ಗುಂಡಿಬೈಲ್1 ಶಾಲೆಯಲ್ಲಿ 49 ಜನರು, ಗುಂಡಿಬೈಲ್ 2 ಶಾಲೆಯಲ್ಲಿ 74 ಜನರು, ಕೆಂಚಗಾರ ಶಾಲೆಯಲ್ಲಿ 8 ಜನರು, ಹಡಿನಬಾಳ ಪ್ರಾಥಮಿಕ ಶಾಲೆಯಲ್ಲಿ 55 ಜನರು, ಪ್ರೌಢಶಾಲೆಯಲ್ಲಿ 41, ಹುಡಗೋಡದಲ್ಲಿ 42, ಹಾಡಗೇರಿಯಲ್ಲಿ 70 ಜನರು, ನಾಥಗೇರಿಯಲ್ಲಿ 7 ಜನರು, ಕೂಡ್ಲದಲ್ಲಿ 7 ಜನರು, ತಾಲೂಕಿನ ಭಾಸ್ಕೇರಿಯಲ್ಲಿ 71 ಜನರು, ಹೊಸಾಕುಳಿ ಗುಡ್ಡೇಬಾಳದಲ್ಲಿ 168, ಮುಗ್ವಾದಲ್ಲಿ 171, ಮಾಡಗೇರಿಯಲ್ಲಿ 52 ಜನರು, ಕಡತೋಕಾದಲ್ಲಿ 150, ಕೆಕ್ಕಾರದಲ್ಲಿ 180 ಮತ್ತು 25 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಪ್ರತಿ ಬಾರಿ ನೆರೆ ಬಂದಾಗಲೂ ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಆದರೆ, ಈ ಬಾರಿ ಕರೊನಾ ರೋಗದ ಬಗ್ಗೆ ಭಯಭೀತರಾಗಿರುವ ಹಳ್ಳಿಯ ಜನರು ಕಾಳಜಿ ಕೇಂದ್ರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಈಗ ನೀರು ಅಪಾಯದ ಮಟ್ಟದಲ್ಲಿ ನುಗ್ಗುತ್ತಿರುವುದರಿಂದ ಅನಿವಾರ್ಯವಾಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಲು ಮುಂದಾಗುತ್ತಿದ್ದಾರೆ.

    ನೆರೆಯ ಸೆರೆಗೆ ಜಿಲ್ಲೆ
    ಕಾರವಾರ:
    ಎರಡು ದಿನದಿಂದ ಬಿಡುವು ನೀಡಿದ್ದ ಮಳೆ ಭಾನುವಾರ ರಾತ್ರಿಯಿಂದ ಚುರುಕುಗೊಂಡಿದ್ದು, ಜಿಲ್ಲೆಯನ್ನು ಮತ್ತೆ ನೆರೆಯ ಸೆರೆಗೆ ಸಿಲುಕಿಸಿದೆ. ಹೊನ್ನಾವರ ಹಾಗೂ ಕುಮಟಾ ತಾಲೂಕುಗಳು ಪ್ರವಾಹದಿಂದ ತತ್ತರಿಸಿವೆ. ಉಳಿದ ತಾಲೂಕುಗಳಲ್ಲೂ ನಿರಂತರ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ಹೊನ್ನಾವರದ 12 ಗ್ರಾಮಗಳು ಜಲಾವೃತವಾಗಿದ್ದು, 9 ಕಾಳಜಿ ಕೇಂದ್ರ ತೆರೆದು ಅಲ್ಲಿ ಸಾವಿರಾರು ಜನರನ್ನು ಇರಿಸಲಾಗಿದೆ. 240 ಎಕರೆ ಕೃಷಿ ಜಮೀನಿಗೆ ಹಾನಿಯಾಗಿದೆ.

    ಕುಮಟಾದಲ್ಲಿ 2 ಗ್ರಾಮಗಳಲ್ಲಿ ನೀರು ತುಂಬಿದ್ದು, 2 ಕಾಳಜಿ ಕೇಂದ್ರ ತೆರೆಯಲಾಗಿದೆ. 47 ಜನ ಆಶ್ರಯ ಪಡೆದಿದ್ದಾರೆ. ಭಟ್ಕಳದಲ್ಲಿ 2, ಶಿರಸಿಯಲ್ಲಿ 1 ರಸ್ತೆ ಸಂಪರ್ಕ ಕಡಿದುಕೊಂಡಿವೆ. ಕಾರವಾರ, ಅಂಕೋಲಾದಲ್ಲಿ ತಲಾ 1, ಕುಮಟಾ, ಹೊನ್ನಾವರದಲ್ಲಿ ತಲಾ 4, ಶಿರಸಿ, ಸಿದ್ದಾಪುರದಲ್ಲಿ ತಲಾ 2, ಭಟ್ಕಳದಲ್ಲಿ 3, ಹಳಿಯಾಳದಲ್ಲಿ 8 ಸೇರಿ ಒಟ್ಟು 27 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜುಲೈ 1 ರಿಂದ ಇದುವರೆಗೆ ಜಿಲ್ಲೆಯಲ್ಲಿ 265 ಮನೆಗಳಿಗೆ ಹಾನಿಯಾಗಿದೆ. ಕಾರವಾರದಲ್ಲಿ ಇಡೀ ದಿನ ಎಡೆಬಿಡದೇ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಣೆಕಟ್ಟೆಗಳ ಗೇಟ್ ಬಂದ್ ಮಾಡಲಾಗಿದ್ದು ಒಳಹರಿವು ಇಳಿಮುಖವಾಗಿದೆ.

    ಕುಮಟಾ ವರದಿ: ಕುಮಟಾ ತಾಲೂಕಿನ ಬಡಗಣಿ ಹಳ್ಳಕ್ಕೆ ನೆರೆ ಬಂದಿದ್ದರಿಂದ ಕೋನಳ್ಳಿ ಹಿರೇಕಟ್ಟು, ಕೆಳಗಿನಕೇರಿ, ಗುಡ್ನಕಟ್ಟು ಭಾಗದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮಸ್ಥರನ್ನು ದೋಣಿಗಳ ಮೂಲಕ ರಕ್ಷಿಸಲಾಗಿದೆ. ಚಂಡಿಕಾ ಹೊಳೆ ಉಕ್ಕಿದ್ದರಿಂದ ಕತಗಾಲ ಬಳಿ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತಿದ್ದು, ಶಿರಸಿ-ಕುಮಟಾ ನಡುವಿನ ವಾಹನ ಸಂಚಾರ ಕೆಲಕಾಲ ಬಂದಾಗಿತ್ತು. ನೂರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ನಾಟಿ ಮಾಡಿದ ಭತ್ತದ ಸಸಿಗಳು ತೇಲಿ ಹೋಗಿವೆ. ಕುಮಟಾ ಹರಕಡೆಯ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರ ಬಂದಾಗಿದೆ.

    ಅಘನಾಶಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹೆಗಡೆ, ದೀವಗಿ, ತಂಡ್ರಕುಳಿ, ಅಘನಾಶಿನಿ ಮುಂತಾದ ಗ್ರಾಮಗಳಿಗೆ ನೆರೆಯ ಆತಂಕವಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಂಡ್ರಕುಳಿ ಸಮೀಪ ಮತ್ತೆ ಗುಡ್ಡ ಕುಸಿತವಾಗಿದೆ. ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶಾಸಕ ದಿನಕರ ಶೆಟ್ಟಿ ಹಾಗೂ ತಹಸೀಲ್ದಾರ್ ಮೇಘರಾಜ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts