More

    ಶಿವಶಿವಾ ಇಡೀ ರಾಜ್ಯ ಬೆಂಕಿ ಹವಾ!

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ರಾಜ್ಯದಲ್ಲಿ ರಾಜಸ್ಥಾನ ಮಾದರಿ ಉರಿ ಬಿಸಿಲು ಕಾಣಿಸಿಕೊಂಡಿದೆ. ಸೋಮವಾರ 23 ಜಿಲ್ಲೆಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ ತಾಪಮಾನ 38.5 ಡಿಗ್ರಿಗೆ ಏರಿಕೆ ಕಂಡಿದೆ. ಈ ನಡುವೆ, ಮೇ 2ರವರೆಗೆ ರಾಜ್ಯದಲ್ಲಿ ಬಿಸಿಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ.

    ರಾಯಚೂರಿನಲ್ಲಿ ಸೋಮವಾರ 46.1 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಪ್ರಸಕ್ತ ವರ್ಷದ ಅತಿ ಹೆಚ್ಚು ತಾಪಮಾನ ಇದಾಗಿದೆ. ಯಾದಗಿರಿ 45.1, ಕಲಬುರಗಿ 45.1, ಬಳ್ಳಾರಿ 44.8, ವಿಜಯಪುರ 44.6, ಬಾಗಲಕೋಟೆ 44.6, ಗದಗ 43.6, ಬೆಳಗಾವಿ 44.4, ಕೊಪ್ಪಳ 44.1, ಬೀದರ್ 44.4, ಚಿತ್ರದುರ್ಗ 43.2, ಚಿಕ್ಕಮಗಳೂರು 42.9, ಹಾವೇರಿ 42.5, ಮಂಡ್ಯ 42.5, ತುಮಕೂರು 42.3, ದಾವಣಗೆರೆ 42.4, ರಾಮನಗರ 42.4, ಚಾಮರಾಜನಗರ 42, ಧಾರವಾಡ 42, ಶಿವಮೊಗ್ಗ 41.6, ಮೈಸೂರು 40.9, ಹಾಸನ 40.5, ಕೋಲಾರ 40.3 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಬಿಸಿ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ ಐದುವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ ಹಾಗೂ ರಾಯಚೂರಿನಲ್ಲಿ ಬಿಸಿ ವಾತಾವರಣ ಇರಲಿದೆ.

    2-3 ದಿನಗಳ ಹಿಂದೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ 40-41 ಡಿಗ್ರಿ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿತ್ತು.ಆದರೆ, ಸೋಮವಾರ ವಾಡಿಕೆಗಿಂತ 4-6 ಡಿಗ್ರಿ ಹೆಚ್ಚು ಉಷ್ಣಾಂಶ ಕಂಡುಬಂದಿದೆ. ದಕ್ಷಿಣ ಕರ್ನಾಟಕ ಭಾಗದ ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ರಾಮನಗರ, ಕೋಲಾರ, ತುಮಕೂರು, ಚಿಕ್ಕಮಗಳೂರಿನಲ್ಲಿ ವಾಡಿಕೆಗಿಂತ 7-8 ಡಿಗ್ರಿ ಹೆಚ್ಚು ಉಷ್ಣಾಂಶ ವರದಿಯಾಗಿದೆ. ಇಡೀ ಕರುನಾಡು ಕೆಂಡವಾಗಿದೆ. ಜನರು, ಜಾನುವಾರು, ಕೃಷಿ, ಪ್ರಾಣಿ ಸಂಕುಲ ಮೇಲೆ ಗಂಭೀರ ಪರಿಣಾಮ ಬೀರಿದೆ.

    ಜನರೇ ಎಚ್ಚರ: ದೀರ್ಘಾವಧಿವರೆಗೆ ಬಿಸಿಲಿನಲ್ಲಿ ಕೆಲಸ ಮಾಡುವವರು ಉಷ್ಣ ಗಾಳಿಯಿಂದ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ. ಬಿಸಿಲಿನ ಪ್ರಖರತೆ ಇರುವಾಗ ರೈತರು, ಕೃಷಿ ಕಾರ್ವಿುಕರು, ಕ್ರೀಡಾಪಟುಗಳು ಶ್ರಮದಾಯಕ ಚಟುವಟಿಕೆ ತಪ್ಪಿಸಬೇಕು. ಚಿಕ್ಕ ಮಕ್ಕಳು, ವೃದ್ಧರು, ಗಂಭೀರ ಕಾಯಿಲೆಗಳಿಂದ ಒಳಲುತ್ತಿರುವ ರೋಗಿಗಳು ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರಯಾಣದ ಜತೆಗೆ ಕುಡಿಯವ ನೀರನ್ನು ಒಯ್ಯಬೇಕು. ಮಧ್ಯಾಹ್ನ 1 ರಿಂದ 3 ಗಂಟೆ ಅವಧಿಯಲ್ಲಿ ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು. ತೆಳು-ಹಗುರ ಉಡುಪು ಧರಿಸುವುದು ಸೂಕ್ತ ಎಂದು ತಜ್ಞರು ಸೂಚನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ 38 ಡಿಗ್ರಿ ಸೆಲ್ಶಿಯಸ್: ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಪ್ರಖರತೆ ಇನ್ನಷ್ಟು ಹೆಚ್ಚಿದೆ. ಸೋಮವಾರ 38.5 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ವಾಡಿಕೆಗಿಂತ 4.4 ಡಿಗ್ರಿ ಹೆಚ್ಚು ಉಷ್ಣಾಂಶ ವರದಿಯಾಗಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 40ರ ಗಡಿ ಮುಟ್ಟುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಎರಡು ದಿನಗಳಿಂದ 38ರ ಆಸುಪಾಸಿನಲ್ಲಿ ಉಷ್ಣಾಂಶ ಕಂಡುಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ 2019ರಲ್ಲಿ 39.9 ಉಷ್ಣಾಂಶ ದಾಖಲಾಗಿದ್ದು, ಈವರೆಗೆ ದಾಖಲಾದ ಅತ್ಯಧಿಕ ಉಷ್ಣಾಂಶ ಇದಾಗಿದೆ. ತೇವಾಂಶ ಭರಿತ ಮೋಡಗಳ ಸೆಳೆತ, ಗಾಳಿ ವೇಗ ಇಲ್ಲದಿರುವುದು, ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆ ಸೇರಿ ಇತರೆ ಕಾರಣಗಳಿಂದ ತಾಪಮಾನ ಹೆಚ್ಚಳವಾಗಿದೆ. ಈ ಬಾರಿ ನಗರದಲ್ಲಿ 4 ತಿಂಗಳು ಬೇಸಿಗೆ ಇದೆ. ಮೇವರೆಗೆ ಬಿಸಿಲಿನ ಪ್ರಖರತೆ ಕಾಣಿಸಿಕೊಳ್ಳಲಿದೆ. ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಗಿದ್ದು, ಫೆಬ್ರವರಿಯಿಂದಲೇ ಸುಡು ಬಿಸಿಲು ಕಾಣಿಸಿಕೊಂಡಿತ್ತು. ಏಪ್ರಿಲ್​ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್​ನಲ್ಲೇ ಅಧಿಕವಾಗಿತ್ತು. ಕನಿಷ್ಠ ತಾಪಮಾನದಲ್ಲಿಯೂ ಏರಿಕೆಯಾಗುತ್ತಿದೆ. ಜನರಿಗೆ ನಿರ್ಜಲೀಕರಣ ಸೇರಿ ಇತರ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ.

    ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ

    ಬೆಂಗಳೂರು: ಬೇಸಿಗೆಯ ಸುಡು ಬಿಸಿಲಿಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆಯೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಸರ್ಕಾರವೇ ನಿಗದಿಪಡಿಸಿರುವಂತೆ ದಿನದ 7 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ರೈತರಿಗೆ ಸಿಗುತ್ತಿಲ್ಲ. ಪರಿಣಾಮ ರೈತರು ಪಂಪ್​ಸೆಟ್ ನೀರಾವರಿ ಮಾಡಿಕೊಂಡಿದ್ದ ಬೆಳೆಯೂ ಒಣಗುತ್ತಿದೆ. ತೆಂಗಿನ ತೋಟಗಳಲ್ಲಿ ಹಾಕಿರುವ ಅಡಕೆ, ಹೆಚ್ಚುವರಿ ಆದಾಯ ನಿರೀಕ್ಷಿಸಿ ತೋಟ ಮತ್ತು ಹೊಲಗಳಲ್ಲಿ ಹಾಕಿದ ಶುಂಠಿ ಒಣಗುತ್ತಿದೆ. ಹಗಲಿನಲ್ಲಿ ಸಿಂಗಲ್ ಫೇಸ್, ರಾತ್ರಿ ಹೊತ್ತು ತ್ರೀಫೇಸ್ ವಿದ್ಯುತ್ ನೀಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ. ಕೆರೆ ಕಟ್ಟೆಗಳು ನೀರಿಲ್ಲದೆ ಒಣಗಿದ್ದರಿಂದ ಜನರು ಬೋರ್​ವೆಲ್ ನೀರು ಅವಲಂಬಿಸಿದ್ದರು. ಬೇಸಿಗೆಯ ಬಿಸಿಗೆ ಬಹುತೇಕ ಬೋರ್​ವೆಲ್​ಗಳಲ್ಲಿ ನೀರು ಬತ್ತಿ ಹೋಗಿದ್ದರಿಂದ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗುವಷ್ಟು ಸಮಸ್ಯೆಯಾಗಿದೆ. ಗ್ರಾಮಗಳಲ್ಲಿ ಅಲ್ಲೊಂದು ಇಲ್ಲೊಂದು ಬೋರ್​ವೆಲ್ ಓಡುತ್ತಿದ್ದು, ಕುಡಿಯುವ ನೀರಿಗೂ ಅದನ್ನೆ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.

    ಮೇ 2ರವರೆಗೆ ಬಿಸಿಗಾಳಿ: ಬೇಸಿಗೆಯ ತಾಪಮಾನ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದ್ದು, ಮೇ 2ರವರೆಗೆ ಕರಾವಳಿಯಲ್ಲಿ ಬಿಸಿ ಗಾಳಿ (ಉಷ್ಣ ಮಾರುತ) ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ. ಮೇ 2ರವರೆಗೆ ದ.ಕ, ಉಡುಪಿ, ಉತ್ತರ ಕನ್ನಡ ಸೇರಿ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

    ತಾಪಮಾನ ಹೆಚ್ಚಳಕ್ಕೆ ಕಾರಣ

    . ಬರಗಾಲದಿಂದ ಮಣ್ಣಿನಲ್ಲಿ ತೇವಾಂಶ ಕೊರತೆ,

    . ಕೆರೆ ಕುಂಟೆಗಳಲ್ಲಿ ನೀರು ಬರಿದಾಗಿರುವುದು

    . ತೇವಾಂಶ ಭರಿತ ಮೋಡ ಇಲ್ಲದಿರುವುದು

    . ಅರಣ್ಯ ನಾಶ

    . ಪಳೆಯುಳಿಕೆ ಇಂಧನ ಸುಡುವುದು

    . ತಗ್ಗದ ಎಲ್-ನಿನೋ ಪ್ರಭಾವ

    . ಮಳೆ ಕುಂಠಿತ

    . ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ, ಅರೆ ಶುಷ್ಕ ಸ್ಥಿತಿ

    ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು: ಪ್ರಾಣಾಪಾಯದಿಂದ ಪಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts