More

    ದಾನಿಗಳು ವಿರಳ ಜೀವರಕ್ಷಕ ರಕ್ತಕ್ಕೂ ಬರಗಾಲ!

    | ನವೀನ್ ಬಿಲ್ಗುಣಿ ಶಿವಮೊಗ್ಗ

    ಒಂದೆಡೆ ಬಿಸಿಲಿನ ತಾಪಕ್ಕೆ ಅತಿಸಾರ ಸೇರಿ ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತಿವೆ. ಈ ನಡುವೆ ಕರುನಾಡಲ್ಲಿ ಮನುಷ್ಯನ ಜೀವ ಉಳಿಸುವ ರಕ್ತಕ್ಕೂ ‘ಬರ’ ಆವರಿಸಿದೆ. ಬಿಸಿಲಿನ ತಾಪ ಸೇರಿ ಅನೇಕ ಕಾರಣಗಳಿಂದ ಪ್ರತಿನಿತ್ಯ ಸಾವಿರಾರು ಯೂನಿಟ್ ರಕ್ತದ ಅಭಾವ ಕಾಡುತ್ತಿದೆ. 43 ಸರ್ಕಾರಿ ಮತ್ತು 200ಕ್ಕೂ ಅಧಿಕ ಸರ್ಕಾರೇತರ ರಕ್ತನಿಧಿ ಕೇಂದ್ರಗಳು ರಾಜ್ಯದಲ್ಲಿವೆ. ಒಂದು ತಿಂಗಳಿಂದ ದಾನಿಗಳ ಸಂಖ್ಯೆ ವಿರಳಾತಿ ವಿರಳವಾಗಿದೆ. ಇದು ರಕ್ತನಿಧಿಗಳ ಮೇಲೆ ಸಾಕಷ್ಟು ಒತ್ತಡ ಉಂಟುಮಾಡಿದ್ದು, ತುರ್ತು ಸಂದರ್ಭ ಹೊರತುಪಡಿಸಿ ರಕ್ತ ಸಂಗ್ರಹ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಲೋಕಸಭಾ ಚುನಾವಣೆ ಘೊಷಣೆ ಆದ ಬಳಿಕ ರಕ್ತ ಕೊರತೆ ಹೆಚ್ಚಾಗುತ್ತಲೇ ಇದೆ. ಶಿವಮೊಗ್ಗ ಜಿಲ್ಲೆಯಲ್ಲೇ ಪ್ರತಿನಿತ್ಯ 250 ಯೂನಿಟ್ ರಕ್ತ ಅಗತ್ಯವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಆ ಪ್ರಮಾಣ ದುಪ್ಪಟ್ಟಾಗಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 100 ಯೂನಿಟ್​ನಷ್ಟು ರಕ್ತದ ಕೊರತೆ ಎದುರಾಗುತ್ತಿದೆ. ರಾಜ್ಯಾದ್ಯಂತ ಪ್ರತಿದಿನ 3 ಸಾವಿರಕ್ಕೂ ಅಧಿಕ ಯೂನಿಟ್ ರಕ್ತದ ಅಭಾವ ಕಂಡುಬರುತ್ತಿರುವುದು ಆತಂಕ ಸೃಷ್ಟಿಸಿದೆ.

    ಬಿಸಿಲಿನ ತಾಪ ಹೆಚ್ಚಿರುವ ಕಾರಣ ದಾನಿಗಳು ರಕ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ. ರಕ್ತ ನೀಡಿದರೆ ಸುಸ್ತು, ನಿಶ್ಯಕ್ತಿ ಸೇರಿ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗಬಹುದೆಂಬ ಆತಂಕದಿಂದ ರಕ್ತದಾನದಿಂದ ದೂರವೇ ಉಳಿಯುತ್ತಿದ್ದಾರೆ.

    ಕಾಲೇಜುಗಳಲ್ಲಿ ಪರೀಕ್ಷೆ, ರಜೆ: ಕಾಲೇಜುಗಳಿಗೆ ಕಳೆದೊಂದು ತಿಂಗಳಿಂದ ರಜೆ. ಮತ್ತೆ ಕೆಲವರಿಗೆ ಪರೀಕ್ಷೆ ನಡೆಯುತ್ತಿವೆ. ಆ ಕಾರಣಕ್ಕೂ ರಕ್ತದಾನಿಗಳ ಸಂಖ್ಯೆ ತಗ್ಗಿದೆ.100 ಯೂನಿಟ್ ಬೇಕಿರುವ ಕಡೆಗಳಲ್ಲಿ 40 ಯೂನಿಟ್ ರಕ್ತವೂ ಸಿಗುತ್ತಿಲ್ಲ. ತುರ್ತು ಪರಿಸ್ಥಿತಿಗಳಲ್ಲಿ ದಾನಿಗಳಿಗೆ ದೂರವಾಣಿ ಮೂಲಕ ಸಂರ್ಪಸಿ ಕರೆಸಿಕೊಳ್ಳುವಂತಾಗಿದೆ. ಕೆಲವೆಡೆ ಕಾಲೇಜು ಆರಂಭಗೊಂಡಿದ್ದು, ತರಗತಿಗೆ ಬರುವವರ ಸಂಖ್ಯೆಯೂ ಕಡಿಮೆ ಇದೆ.

    ಬಿಸಿಲಿನ ಝುಳ ಹೆಚ್ಚಿದೆ. ಜತೆಗೆ ವಿದ್ಯಾರ್ಥಿ ಗಳಿಗೆ ಪರೀಕ್ಷೆ ಮತ್ತು ರಜೆ ಇರುವ ಕಾರಣದಿಂದ ಸ್ವಲ್ಪ ಮಟ್ಟಿಗೆ ರಕ್ತದ ಕೊರತೆ ಕಂಡು ಬರುತ್ತಿದೆ. ತುರ್ತು ಮತ್ತು ತೀರಾ ಅನಿವಾರ್ಯ ಸಂದರ್ಭ ಇದ್ದರೆ ಬೇರೆಡೆಯಿಂದ ರೋಗಿಗಳಿಗೆ ಬೇಡಿಕೆ ಇರುವ ರಕ್ತ ತರಿಸಿಕೊಡಲಾಗುತ್ತಿದೆ.

    | ಡಾ. ದಿನೇಶ್ ಶಿವಮೊಗ್ಗ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ

    ಬಿಸಿಲಿನ ತಾಪ ಮತ್ತು ಕಾಲೇಜು ರಜೆ ಇರುವ ಕಾರಣ ನಮ್ಮ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಅಭಾವ ಕಂಡುಬರುತ್ತಿದೆ. ಜನರಿಗೆ ರಕ್ತದಾನದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ರಕ್ತ ನೀಡಲು ಬರುವವರು ಕಡಿಮೆ ಆಗಿದ್ದಾರೆ. ರಕ್ತದ ಕೊರತೆಗೆ ಇದು ಪ್ರಮುಖ ಕಾರಣ.

    | ಧರಣೇಂದ್ರ ದಿನಕರ್ ರೆಡ್​ಕ್ರಾಸ್ ಸಂಜೀವಿನಿ ರಕ್ತನಿಧಿ ಹಿರಿಯ ಸಹಾಯಕ

    ಪಂಜಾಬ್​: 48 ಕೆ.ಜಿ ಮಾದಕ ವಸ್ತು ವಶ, ಮೂವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts