More

    ಬಾಲ್ಯ ವಿವಾಹಕ್ಕೆ ‘ಲಾಕ್​ಡೌನ್’

    ಹುಬ್ಬಳ್ಳಿ: ಬಹಳಷ್ಟು ಜನರಿಗೆ ಲಾಕ್​ಡೌನ್ ಜಾರಿ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದರೆ, ಕೆಲವರಿಗೆ ಮಕ್ಕಳ ಮದುವೆ ಮಾಡಿಬಿಡುವ ಗಡಿಬಿಡಿ. ಧಾರವಾಡ ಜಿಲ್ಲೆಯಲ್ಲಿ ಜಾರಿಯಾದ ಕರೊನಾ ಲಾಕ್​ಡೌನ್ ಸಂದರ್ಭದಲ್ಲಿಯೇ 18 ಬಾಲ್ಯ ಮದುವೆ ನಡೆದುಹೋಗಿಬಿಡುತ್ತಿದ್ದವು. ಆದರೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಈ ಮದುವೆಗಳಿಗೆ ತಡೆಬಿದ್ದಿದೆ.

    ಕಳೆದ ವರ್ಷದ ಲಾಕ್​ಡೌನ್ ಸಂದರ್ಭದಲ್ಲಿ 26 ಬಾಲ್ಯ ಮದುವೆಯನ್ನು ತಡೆಯಲಾಗಿತ್ತು. ಈ ವರ್ಷವೂ ಅಧಿಕಾರಿಗಳ ತಂಡ ಕಣ್ಗಾವಲಿರಿಸಿತ್ತು. ಬ್ಯಾಹಟ್ಟಿ, ಅಂಚಟಗೇರಿ, ಮಡಕಿಹೊನ್ನಳ್ಳಿ ಹಾಗೂ ಇತರ ಗ್ರಾಮಗಳಿಂದ ಉಚಿತ ಮಕ್ಕಳ ಸಹಾಯವಾಣಿಗೆ (1098) ಬಂದ ಕರೆಗಳನ್ನು ಆಧರಿಸಿ, ಪಾಲಕರ ಮತ್ತು ಪೋಷಕರ ಮನವೊಲಿಸಿ ಬಾಲ್ಯ ಮದುವೆಗಳನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಇದೇ ಸಮಯವೇಕೆ?:

    ಲಾಕ್​ಡೌನ್ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನಸಂಪರ್ಕ ಬಹಳಷ್ಟು ಇರುವುದಿಲ್ಲ. ಇಂಥ ದಿನಗಳಿಗಾಗಿಯೇ ಕೆಲವರು ಕಾಯುತ್ತಿರುತ್ತಾರೆ. ಎರಡೂ ಕಡೆಯ ಕುಟುಂಬದವರನ್ನು ಒಗ್ಗೂಡಿಸಿ, ಮದುವೆ ನಿಶ್ಚಯ ಮಾಡಿಬಿಟ್ಟು ಮದುವೆ ದಿನಾಂಕವನ್ನು ನಿಗದಿಪಡಿಸುತ್ತಾರೆ. ಗ್ರಾಮಗಳಿಗೆ ಯಾರೂ ಬರುವುದಿಲ್ಲವೆಂದು ಅರಿತಾದ ಮೇಲೆ ವಧು ಇಲ್ಲವೇ ವರನ ಮನೆಯಲ್ಲಿ ತಾಳಿ ಕಟ್ಟಿಸಿ ಬಿಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಕ್ಕಳಿಂದಲೇ ಫೋನ್ ಕರೆ: ಗ್ರಾಮಗಳಲ್ಲಿ ಯಾವುದೇ ಮದುವೆ ನಡೆಯಲಿ, ಅದಕ್ಕೆ ಎಲ್ಲರ ಒಪ್ಪಿಗೆಯೂ ಇದ್ದೇ ಇರುತ್ತದೆ. ಅಧಿಕಾರಿಗಳು ದಾಳಿ ಮಾಡಿಬಿಡುತ್ತಾರೆ ಎಂಬುದು ಗೊತ್ತಾದ ತಕ್ಷಣ, ಊರಿನ ಹಿರಿಯರು ಹಾಗೂ ಜನಪ್ರತಿನಿಧಿಗಳು ಒತ್ತಡ ಹೇರಿ ಅಧಿಕಾರಿಗಳನ್ನು ಗ್ರಾಮಗಳಿಂದ ವಾಪಸ್ ಕಳಿಸಿಬಿಡುತ್ತಾರೆ. ಇದನ್ನು ಅರಿತಿದ್ದ ಹಳ್ಳಿಗಳ ಮಕ್ಕಳು, ಉಚಿತ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ, ಮದುವೆ ಆಗುತ್ತಿರುವ ಮಾಹಿತಿ ನೀಡಿದ್ದಾರೆ. ಇದೇ ಮಾಹಿತಿ ಆಧರಿಸಿ ಅಧಿಕಾರಿಗಳು, ಮಕ್ಕಳ ಬಾಲ್ಯ ಮದುವೆಗಳನ್ನು ತಡೆದಿದ್ದಾರೆ ಎಂಬುದು ಅಚ್ಚರಿಯ ವಿಷಯ.

    ಸುರಕ್ಷೆಗೆ ಆದ್ಯತೆ

    ಮೊದಲು ಬಾಲ್ಯ ಮದುವೆಗೆ ಒಳಗಾಗುತ್ತಿದ್ದ ಮಕ್ಕಳನ್ನು ಬಾಲ ಮಂದಿರದಲ್ಲಿ ಇರಿಸಲಾಗುತ್ತಿತ್ತು. ಈಗ ಕರೊನಾ ತೀವ್ರತೆ ಜಾಸ್ತಿ ಇರುವುದರಿಂದ ಮಕ್ಕಳಿಗೆ ಸೋಂಕು ತಾಗಬಾರದು ಎಂಬ ಉದ್ದೇಶವನ್ನು ಹೊಂದಲಾಗಿದೆ. ಆಯಾ ಗ್ರಾಮಗಳಲ್ಲಿ ಅಂಗನವಾಡಿ, ಪಿಡಿಒ ಕಣ್ಗಾವಲಿನಲ್ಲಿ ಮಕ್ಕಳಿಗೆ ರಕ್ಷಣೆ ಒದಗಿಸಲಾಗಿದೆ.

    ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಬಾಲ್ಯ ಮದುವೆ ನಡೆಯುತ್ತಿರುವ ಮಾಹಿತಿ ಬಂದಿದ್ದವು. ಈ ಮಾಹಿತಿ ಆಧರಿಸಿ, ಅವುಗಳನ್ನು ತಡೆಯಲಾಗಿದೆ. ಜನರಿಗೆ ತಿಳಿಯುವುದಿಲ್ಲವೆಂದು ಲಾಕ್​ಡೌನ್​ನಲ್ಲಿ ಮದುವೆ ಮಾಡಲು ಆಯಾ ಕುಟುಂಬಗಳು ನಿರ್ಧರಿಸಿದ್ದವು.

    | ಮೊಹಮ್ಮದ್ ಅಲಿ ತಹಸೀಲ್ದಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts