More

    ಬಾಲ್ಯವಿವಾಹ ವಿರುದ್ಧ ಕೇಸ್ ದಾಖಲಿಸಿ

    ಬೆಳಗಾವಿ: ಬಾಲ್ಯವಿವಾಹ ಪ್ರಕರಣ ಕಂಡುಬಂದಾಗ ತಕ್ಷಣವೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಪ್ರಕರಣಗಳು ನ್ಯಾಯಾಲಯ ಹಂತಗಳಲ್ಲಿ ಬಾಕಿ ಇವೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ತಾಲೂಕು ಮಟ್ಟದಲ್ಲಿ ವಕೀಲರನ್ನು ನೇಮಕ ಮಾಡಲಾಗಿದ್ದು, ಕೂಡಲೇ ನ್ಯಾಯಾಲಯ ನಡೆಸುವ ಲೋಕ್ ಅದಾಲತ್‌ಗಳಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು ಎಂದರು.

    ನಿಪ್ಪಾಣಿಯಲ್ಲಿ 13 ಪ್ರಕರಣಗಳು ಬಾಕಿಯಿದ್ದು, ಲೋಕ್ ಅದಾಲತ್ ಮೂಲಕ ಬಾಕಿ ಪ್ರಕರಣ ಇತ್ಯರ್ಥ ಮಾಡಬೇಕು. ಅದೇ ರೀತಿ ಅಥಣಿ, ಬೆಳಗಾವಿ ಗ್ರಾಮೀಣ ಭಾಗದಲ್ಲಿರುವ ಪ್ರಕರಣಗಳ ವಕಾಲತ್ತು ವಹಿಸಲು ಸರ್ಕಾರಿ ವಕೀಲರ ನೇಮಕ ಮಾಡಬೇಕು ಎಂದು ಸೂಚನೆ ನೀಡಿದರು.

    ಜಿಲ್ಲೆಯಲ್ಲಿರುವ ಸಾಂತ್ವನ ಕೇಂದ್ರಗಳ ಮಾಹಿತಿ ಜನರಿಗೆ ತಲುಪುವಂತೆ ಹೆಚ್ಚು ಪ್ರಚಾರ ಕೊಡಬೇಕು. ಅಂಗನವಾಡಿ ಕೇಂದ್ರಗಳಿಗೆ ಬಾಣಂತಿಯರು, ಮಹಿಳೆಯರು, ಮಕ್ಕಳು ಬರುವುದರಿಂದ ಅವರಿಗೆ ಈ ಮಾಹಿತಿ ಅನುಕೂಲವಾಗಲಿದೆ. ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

    ಮಹಿಳೆಯರು ತೊಂದರೆಯಲ್ಲಿದ್ದಾಗ ಅವರು ತಕ್ಷಣ ಸಂಪರ್ಕಿಸಲು ಮಹಿಳಾ ಸಹಾಯವಾಣಿಗಳು ಚಾಲನೆಯಲ್ಲಿ ಇರಬೇಕು. ಸಹಾಯವಾಣಿಗಳ ನಿರ್ವಹಣೆಗಳ ಕುರಿತು ನಿಯೋಜಿತ ಸಿಬ್ಬಂದಿಗೆ ಸರಿಯಾದ ಮಾಹಿತಿ ಇರಬೇಕು. ಕೆಲವು ಸಹಾಯವಾಣಿಗಳನ್ನು ಸಂಪರ್ಕಿಸಲು ಆಗುತ್ತಿಲ್ಲ. ತಕ್ಷಣ ಮಹಿಳಾ ಸಹಾಯವಾಣಿಗಳನ್ನು ಚಾಲನೆಗೊಳಿಸಬೇಕು.ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಗಟ್ಟುವ ಕುರಿತು ಮಾಹಿತಿ ನೀಡಲು ಪ್ರತಿ ಶಾಲೆಗಳಲ್ಲಿ ತರಬೇತಿ ಪಡೆದ ಮಹಿಳಾ ಶಿಕ್ಷಕಿಯರನ್ನು ನೇಮಕ ಮಾಡಬೇಕು ಎಂದು ತಿಳಿಸಿದರು.

    ಎಸ್‌ಪಿ ಡಾ.ಸಂಜೀವ ಪಾಟೀಲ, ಜಿಲ್ಲಾ ನಿರೂಪಣಾಧಿಕಾರಿ ಯಲ್ಲಪ್ಪ ಗಡಾದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ ಸುಖಸಾರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎಂ.ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts