More

    ಬಾಲ್ಯದಲ್ಲೇ ಬಿತ್ತಬೇಕು ಮೌಲ್ಯ ಶಿಕ್ಷಣ  -ಬಿಇಒ ಡಾ.ಪುಷ್ಪಲತಾ ಆಶಯ -ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 

    ದಾವಣಗೆರೆ: ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಾಲಾ ಹಂತದಿಂದಲೇ ಮೌಲ್ಯ ಬೆಳೆಸುವ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ ಎಂದು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ ಹೇಳಿದರು.
    ನಗರದ ಈಶ್ವರಮ್ಮ ಪ್ರೌಢಶಾಲೆ ಮತ್ತು ಜ್ಞಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆ ಸಹಯೋಗದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಶನಿವಾರ ಆಯೋಜಿಸಿದ್ದ ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಮಾನವ ಜೀವನದಲ್ಲಿ ಮೌಲ್ಯಗಳು ಅತಿ ಮುಖ್ಯ. ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ, ಅದು ಮೌಲ್ಯವಾಗುತ್ತದೆ. ಶಿಕ್ಷಕರು ಶಾಲೆಗಳಲ್ಲಿ ಸಣ್ಣ, ಸಣ್ಣ ಆದರ್ಶದ ಕತೆಗಳನ್ನು ಹೇಳುವುದರ ಮೂಲಕ ಮೌಲ್ಯಗಳನ್ನು ಕಲಿಸಬಹುದು. ಪಾಠಗಳ ಸಮನ್ವಯತೆ ರೂಪಿಸಬಹುದು ಎಂದು ಹೇಳಿದರು.
    ಬಾಲ್ಯದಲ್ಲಿ ಕಟ್ಟಿಕೊಡುವ ಮೌಲ್ಯಗಳು ಅವರ ಜೀವನದ ಬುನಾದಿಯಾಗಲಿವೆ. ಸಂಬಳದ ವ್ಯಾಪ್ತಿ ಮೀರಿ ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳ ಮೂಲಕ ಸಮಾಜಕ್ಕೆ ವಿಸ್ತರಿಸುವ ಜವಾಬ್ದಾರಿ ಶಿಕ್ಷಕರದು. ಇದು ಶಿಕ್ಷಕರಲ್ಲಿ ಇರಬೇಕಾದ ಮೌಲ್ಯವಾಗಿದೆ ಎಂದು ಕಿವಿಮಾತು ಹೇಳಿದರು.
    ಈಶ್ವರಮ್ಮ ಶಾಲೆ ಮುಖ್ಯ ಶಿಕ್ಷಕ ಕೆ.ಎಸ್. ಪ್ರಭುಕುಮಾರ್ ಮಾತನಾಡಿ, ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ
    ಅಂಕಗಳ ಬದಲಾಗಿ ಮೌಲ್ಯ ಗಳಿಕೆ ಬಗ್ಗೆ ಶಿಕ್ಷಣ ಚಿಂತಕರು ಹಾಗೂ ಶಿಕ್ಷಣ ಸಂಸ್ಥೆಗಳು ಚಿಂತಿಸಬೇಕಾಗಿದೆ. ಮೌಲ್ಯ ಶಿಕ್ಷಣ ಕುರಿತ ಕಾರ್ಯಾಗಾರಗಳನ್ನು ಹೆಚ್ಚು ಹೆಚ್ಚಾಗಿ ಶಿಕ್ಷಕರಿಗೆ ತಲುಪಿಸುವ ವ್ಯವಸ್ಥೆಯಾಗಬೇಕಿದೆ ಎಂದರು.
    ಈಶ್ವರಮ್ಮ ಶಾಲಾಡಳಿತ ಮಂಡಳಿಯ ಅಧ್ಯಕ್ಷೆ ಕೆ.ಆರ್. ಸುಜಾತಕೃಷ್ಣ ಮಾತನಾಡಿ ಈಶ್ವರಮ್ಮ ಶಾಲೆಯು 40 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಬಂದಿದೆ. ಶಾಲೆಯ ಸಂಸ್ಥಾಪಕಿ ಬಿ.ಆರ್. ಶಾಂತಕುಮಾರಿಯವರ ಸ್ಮರಣಾರ್ಥ ಶಿಕ್ಷಕರಿಗಾಗಿ ಪ್ರತಿವರ್ಷವೂ ಮೌಲ್ಯ ಶಿಕ್ಷಣ ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದರು.
    ನಿವೃತ್ತ ಪ್ರಾಧ್ಯಾಪಕಿ ಮಲ್ಲಮ್ಮ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎ.ಪಿ.ಸುಜಾತ, ಕೆ.ವಿ.ಸುಜಾತಾ, ಕೆ.ಎಂ.ಗಿರಿಜಾ, ಬಿ.ಶ್ರೀದೇವಿ, ಎಸ್.ಎಸ್. ಸಂಗೀತಾ, ಜ್ಞಾನಜ್ಯೋತಿ ವನಿತಾ ಶಿಕ್ಷಕಿಯರ ವೇದಿಕೆ ಅಧ್ಯಕ್ಷೆ ಜಿ.ಎಸ್. ಶಶಿರೇಖಾ, ಈಶ್ವರಮ್ಮ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್, ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್. ವಿಜಯಾನಂದ ಇತರರಿದ್ದರು. ವಿವಿಧ ಶಾಲೆಗಳ 120 ಶಿಕ್ಷಕ-ಶಿಕ್ಷಕಿಯರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts