More

    ಬಾಲೆಯರ  ರಾಜ್ಯ ಫುಟ್ಬಾಲ್ ಪಂದ್ಯಾವಳಿ -ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಮುನ್ನಡೆ – ಪ್ರಭಾ ಮಲ್ಲಿಕಾರ್ಜುನ್ ಚಾಲನೆ 

    ದಾವಣಗೆರೆ: ಆತಿಥೇಯರು ಸೇರಿ ಹಾವೇರಿ, ಚಿಕ್ಕಮಗಳೂರು ತಂಡಗಳು ಇಲ್ಲಿನ ನಗರದ ಲೂರ್ಡ್ಸ್ ಬಾಲಕರ ಶಾಲೆ ಆವರಣದಲ್ಲಿ ಖೇಲೋ ಇಂಡಿಯಾ ಅಡಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಬಾಲಕಿಯರ ಫುಟ್‌ಬಾಲ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿವೆ.
    ಶನಿವಾರ ಆರಂಭವಾದ ಟೂರ್ನಿಯಲ್ಲಿ, 13 ವರ್ಷದೊಳಗಿನವರ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಹಾವೇರಿಯ ಡಿ ಯುನೈಟೆಡ್ ಫುಟ್‌ಬಾಲ್ ಅಕಾಡೆಮಿ ತಂಡವು ಏಕಮುಖಿ ಆಟದ ಪ್ರದರ್ಶನದೊಂದಿಗೆ ಚಿಕ್ಕಮಗಳೂರು ಫುಟ್‌ಬಾಲ್ ಕ್ಲಬ್ ತಂಡದ ಬಾಲಕಿಯರನ್ನು (6-0 ಅಂಕ) ಮಣಿಸಿತು.
    ಎರಡನೇ ಲೀಗ್ ಪಂದ್ಯದಲ್ಲಿ ದಾವಣಗೆರೆ ಕರುನಾಡು ಫುಟ್‌ಬಾಲ್ ಕ್ಲಬ್ ತಂಡವು ಶಿವಮೊಗ್ಗದ ಲಿಬರ್ಟಿ ಫುಟ್‌ಬಾಲ್ ಕ್ಲಬ್‌ನ ಬಾಲಕಿಯರನ್ನು 1-0 ಅಂಕದ ಅಂತರದಲ್ಲಿ ಸೋಲಿಸಿ ಮುನ್ನಡೆ ಸಾಧಿಸಿತು.
    15 ವರ್ಷದೊಳಗಿನವರ ವಿಭಾಗದ ಮೊದಲ ಪಂದ್ಯ ಹೊನಲು-ಬೆಳಕಿನ ನಡುವೆ ನಡೆಯಿತು. ಚಿಕ್ಕಮಗಳೂರು ಫುಟ್‌ಬಾಲ್ ಅಕಾಡೆಮಿ ತಂಡದ ಬಾಲಕಿಯರು ಶಿವಮೊಗ್ಗದ ನೋವಾ ಫುಟ್‌ಬಾಲ್ ಕ್ಲಬ್ ಅನ್ನು 1-0 ಅಂಕದಿಂದ ಪರಾಭವಗೊಳಿಸಿದರು.
    ಹೆಣ್ಣುಮಕ್ಕಳ ಕ್ರೀಡಾ ಉತ್ತೇಜನಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರವು ಅಸ್ಮಿತಾ ಹೆಸರಿನಡಿ ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಈ ಟೂರ್ನಿಯ ಪಂದ್ಯಾವಳಿಗಳು ಫೆ. 10ರ ವರೆಗೆ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ನಡೆಯಲಿದೆ.
    ಕರ್ನಾಟಕ ಫುಟ್‌ಬಾಲ್ ಅಸೋಸಿಯೇಷನ್, ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ವಿವಿಧ ಜಿಲ್ಲೆಗಳ 10 ತಂಡಗಳ ಸುಮಾರು 200 ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ವಿವರಿಸಿದರು.
    ಕ್ರೀಡೆಗೂ ಗಮನ ಕೊಡಿ
    ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡದೆ ಕ್ರೀಡೆಗಳಲ್ಲೂ ಪ್ರತಿಶತ ನೂರರಷ್ಟು ಗಮನ ನೀಡಬೇಕು ಎಂದು ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
    ಫುಟ್‌ಬಾಲ್ ಒದೆಯುವ ಮೂಲಕ ಟೂರ್ನಿ ಉದ್ಘಾಟಿಸಿ ಮಾತನಾಡಿ, ಕ್ರೀಡಾಭ್ಯಾಸದೊಂದಿಗೆ ನಿಮ್ಮ ಜೀವನದಲ್ಲಿ ಉತ್ತಮ ವರ್ತನೆ ಬೆಳೆಸಿಕೊಳ್ಳಿ. ಇತರೆ ಜಿಲ್ಲೆಗಳ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಉತ್ತಮ ಆಟವಾಡಿ ಎಂದು ಶುಭ ಕೋರಿದರು.
    ಎರಡು ದಿನದ ಟೂರ್ನಿಯಲ್ಲಿ ಎಲ್ಲ ಕ್ರೀಡಾಪಟುಗಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಂಘಟಕರಿಗೆ ಸೂಚಿಸಿದ ಅವರು, ಮಕ್ಕಳು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
    ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಮಾತನಾಡಿ ಮಹಿಳೆಯರಿಗೆ ಕೇವಲ ಒಳಾಂಗಣ ಕ್ರೀಡೆಗಳು ಎಂಬ ಮನಸ್ಥಿತಿ ಇತ್ತುಲ. ಆದರೆ ಬಾಲಕಿಯರಿಗೆ ಕಾಲ್ಚೆಂಡಿನಾಟ ಆಯೋಜಿಸುವುದು ಉತ್ತಮ ಬೆಳವಣಿಗೆ ಎಂದರು.
    ಪಾಲಿಕೆ ಆಯುಕ್ತೆ ಎನ್. ರೇಣುಕಾ, ಬಿಇಒ ಪುಷ್ಪಲತಾ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಲ್ಲಾವಲಿ ಮುಜಾಹಿದ್ ಖಾನ್, ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಸದಸ್ಯ ಮಹ್ಮದ್ ರಫಿಕ್, ತರಬೇತುದಾರ ಅಹ್ಮದ್ ಮುಸ್ತಾಫಾ, ಡೇವಿಡ್ ಪ್ರಸನ್ನ, ರಂಗನಾಥ, ನವಜೀತ್ ಬಂಗಾರ್, ಅಶೋಕ್, ಸೈಯದ್ ಖಾಲಿದ್, ಜಾನ್ ಫರ್ನಾಂಡೀಸ್, ಮೈನುದ್ದೀನ್, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ್, ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ್, ಸುಷ್ಮಾ ಪಾಟೀಲ್, ದಾಕ್ಷಾಯಣಮ್ಮ, ಲತಿಕಾ ದಿನೇಶ್ ಕೆ ಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts