More

    ಬಾರ್ ತೆರೆಯುವುದಕ್ಕೆ ವಿರೋಧ

    ಮೈಸೂರು: ತಾಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನಾಗನಹಳ್ಳಿ ಗ್ರಾಮದಲ್ಲಿರುವ ಕೃಷಿ ವಿಶ್ವವಿದ್ಯಾಲಯ (ರೈತ ತರಬೇತಿ ಕೇಂದ್ರ)ದ ಪಕ್ಕದಲ್ಲಿ ಬಾರ್ ತೆರೆಯಲು ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
    ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು ಬಾರ್ ತೆರೆಯುವುದನ್ನು ವಿರೋಧಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರವು ಕೃಷಿ ವಿವಿಯ ಒಂದು ಅಂಗಸಂಸ್ಥೆಯಾಗಿದ್ದು, 1917ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಫಲವಾಗಿ ಸ್ಥಾಪನೆಗೊಂಡು 2017ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿದೆ. ಇಂತಹ ಐತಿಹಾಸಿಕ ಕೃಷಿ ವಿವಿಯ ಎದುರು 10 ಮೀ. ದೂರದಲ್ಲಿ ಬಾರ್ ತೆರೆಯಲು ಮುಂದಾಗಿರುವುದು ಸರಿಯಲ್ಲ ಎಂದರು.
    ಸಾವಯವ ಕೃಷಿ ಸಂಶೋಧನಾ ಕೇಂದ್ರವು ಮೈಸೂರು ಬೆಂಗಳೂರು ಹೆದ್ದಾರಿಯಿಂದ ಸುಮಾರು 150 ಮೀ ದೂರದಲ್ಲಿದ್ದು 60ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಸಂಸ್ಥೆಗೆ ದೇಶದ ವಿವಿಧ ಭಾಗಗಳಿಂದ ರೈತರು, ರೈತ ಮಹಿಳೆಯರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿದೇಶಿ ವಿಜ್ಞಾನಿಗಳು ಪ್ರಾತ್ಯಕ್ಷಿಕೆ ಪ್ರಯೋಗಗಳ ವೀಕ್ಷಣೆಗಾಗಿ ಆಗಮಿಸುತ್ತಾರೆ ಎಂಬುದನ್ನು ಅರಿಯಬೇಕಿದೆ ಎಂದರು.
    ಈ ಕೇಂದ್ರದ ಸುತ್ತಳತೆ ಸುಮಾರು 2.5 ಕಿ.ಮೀ. ಇದೆ. ಮುಂದಿನ ದಿನಗಳಲ್ಲಿ ಸಾವಯವ ಕೃಷಿ ಸಂಶೋಧನಾ ಕೇಂದ್ರವನ್ನು ಕೃಷಿ ಪರಿಸರ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಲು ಮುಂದಾಗಿದೆ. ಸದರಿ ಕೃಷಿ ವಿವಿಯ ಎದುರು ಬಾರ್ ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್,ಪದಾಧಿಕಾರಿಗಳಾದ ಗಾಯತ್ರಿ ವಿಜೇಂದ್ರ, ಜಿ. ಲೋಕೇಶ್ ಕುಮಾರ್, ಹೇಮಂತ್ ಗೌಡ, ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts