More

    ಬಾಕಿ ಬಿಲ್​ ಪಾವತಿಗೆ ಒತ್ತಾಯಿಸಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ

    ಕೊಪ್ಪಳ: ಕುಷ್ಟಗಿ ತಾಲೂಕು ವ್ಯಾಪ್ತಿಯಲ್ಲಿ ನರೇಗಾದಡಿ ಸಾಮಗ್ರಿ ಪೂರೈಸಿದ ಬಿಲ್​ ಪಾವತಿಸುವಂತೆ ಆಗ್ರಹಿಸಿ ವೆಂಡರ್​ಗಳು ಗುರುವಾರ ಜಿಪಂ ಸಿಇಒ ಕಚೇರಿ ಮುಂಭಾಗ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.

    2019-20ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಿದ ಕಾಮಗಾರಿಗಳಲ್ಲಿ ನಾವೆಲ್ಲ ಸಾಮಗ್ರಿ ಪೂರೈಕೆ ಮಾಡಿದ್ದೇವೆ. ಬಿಲ್​ ಸಲ್ಲಿಸಿದ್ದರೂ ಪಾವತಿ ಮಾಡಿಲ್ಲ. ಬೇರೆ ತಾಲೂಕಿನಲ್ಲಿ ಅನುದಾನ ಬಿಡುಗಡೆಗೊಳಿಸಲಾಗಿದೆ. ನಮಗೆ ಮಾತ್ರ ನೀಡುತ್ತಿಲ್ಲ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಮೂವರೂ ಸಿಇಒಗಳು ಬದಲಾವಣೆ ಆಗಿದ್ದಾರೆ. ಆದರೂ ಬಿಲ್​ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

    ಬಿಲ್​ ನೀಡದಿದ್ದಲ್ಲಿ ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    200ಕ್ಕೂ ಹೆಚ್ಚು ವೆಂಡರ್​ಗಳಿಗೆ 10 ಕೋಟಿ ರೂ. ಬಾಕಿ ಬರಬೇಕಿದೆ. ನಾವು ಹಣ ಖರ್ಚು ಮಾಡಿಕೊಂಡಿದ್ದೇವೆ. ಆದರೆ, ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಕುಷ್ಟಗಿ ತಾಪಂ ಇಒ ನೀವು ಪೂರೈಸಿದ ಕಡತ ಪರಿಶೀಲನೆ ಮಾಡಿದ್ದಾರೆ. ಅವುಗಳು ಸರಿಯಾಗಿಲ್ಲವೆಂದು ವರದಿ ನೀಡಿದ್ದಾರೆ. ಸಮಸ್ಯೆ ಪರಿಹಾರವಾಗುವವರೆಗೆ ವೇತನ ಪಾವತಿ ಮಾಡಲಾಗುವುದಿಲ್ಲ. ವಾರದ ಬಳಿಕ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವೆ ಎಂದು ಭರವಸೆ ನೀಡಿದರು.

    ವೆಂಡರ್​ಗಳಾದ ಸುಕಮುನಿ ಈಳಿಗೇರ್​, ಹನುಮಂತ ಹಿರೇಮನಿ, ಹಜೀಜ್​ ಕೊಣ್ಣೂರು, ಪುಂಡಲೀಕ ಜೂಲಕಟ್ಟಿ, ಮಹಾಂತೇಶ ಮೇಟಿ, ರಾಜಾಸಾಬ್​ ಯಲಬುರ್ಗಿ, ಹನುಮಂತ ಪೂಜಾರ, ಶಿವುಗೌಡ್ರು, ಹನುಮಗೌಡ ಬಸಾಪುರ, ಯಮನೂರು ಬುದೂರು, ಪರಸಪ್ಪ ಚೌಡ್ಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts