More

    ಬಹಿಷ್ಕಾರಕ್ಕೆ ಕಾಡುಗೊಲ್ಲರ ಸಂಘ ಖಂಡನೆ

    ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿಯಲ್ಲಿ ದಲಿತ ಯುವಕನ ಮೇಲೆ ಬಹಿಷ್ಕಾರ ಹಾಕಿರುವ ಘಟನೆಯನ್ನು ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ತೀವ್ರವಾಗಿ ಖಂಡಿಸಿದೆ.

    ಇತ್ತೀಚೆಗೆ ಇಂತಹ ಘಟನೆ ರಾಜ್ಯದ ಯಾವ ಗೊಲ್ಲರ ಹಟ್ಟಿಗಳಲ್ಲೂ ನಡೆದಿಲ್ಲ. ಸರ್ಕಾರ, ನಮ್ಮ ಸಂಘಟನೆ ಕಾರ್ಯಕರ್ತರು ಗೊಲ್ಲರ ಹಟ್ಟಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

    ಶ್ರೀಕೃಷ್ಣ, ಜಾಂಬವಂತನ ಮಗಳು ಜಾಂಬವತಿಯನ್ನು ವಿವಾಹ ಆಗಿರುವುದರಿಂದ ಗೊಲ್ಲರು, ಆದಿಕರ್ನಾಟಕ ಜನಾಂಗದವರು ನೆಂಟರಾಗಿದ್ದೇವೆ. ಹೀಗಿರುವಾಗ ಅವರನ್ನು ನಮ್ಮ ಮನೆ, ಹಟ್ಟಿಗಳಿಂದ ಹೊರಗೆ ಇಡುವ ಪ್ರವೃತ್ತಿ ಸರಿಯಲ್ಲ. ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು. ಬಹಿಷ್ಕಾರ ಹಾಕಿದರೆ ಅಪರಾಧವಾಗುತ್ತದೆ ಎಂದು ಸಂಘದ ಅಧ್ಯಕ್ಷ ಶಿವುಯಾದವ್ ಎಚ್ಚರಿಸಿದ್ದಾರೆ.

    ಗೊಲ್ಲರ ಹಟ್ಟಿಗಳಲ್ಲಿ ಸಮುದಾಯದವರಿಗೆ ದೇವರ ಕುರಿತು ಇರುವ ಅಪಾರ ನಂಬಿಕೆಯೇ ಇಂತಹ ಮೌಢ್ಯಕ್ಕೆ ಕಾರಣವಾಗಿದೆ. ಅಂಟು-ಮುಂಟು, ಸೂತಕ ಆಗಬಾರದೆಂಬ ದೃಷ್ಟಿಯಿಂದ ಕೆಲವೆಡೆ ಸಂವಿಧಾನ ಬಾಹಿರ ಕೃತ್ಯಗಳು ನಡೆಯುತ್ತ್ತಿವೆ. ಯಾರೋ ಮಾಡಿದ ತಪ್ಪಿಗೆ ಇಡೀ ಸಮಾಜ ತಲೆ ತಗ್ಗಿಸಬೇಕಾಗುತ್ತದೆ. ಆದ್ದರಿಂದ ಕಾಡುಗೊಲ್ಲರು ಕಾನೂನನ್ನು ಅರ್ಥೈಸಿಕೊಂಡು ಎಲ್ಲರೊಟ್ಟಿಗೆ ಸಮನಾಗಿ ಬದುಕುವುದನ್ನು ಕಲಿಯಬೇಕು ಎಂದು ಮನವಿ ಮಾಡಿದ್ದಾರೆ.

    ಜಿಲ್ಲಾಡಳಿತ ಕೂಡಲೇ ಎರಡೂ ಕೋಮುಗಳ ಮಧ್ಯೆ ಶಾಂತಿ ಸಭೆ ನಡೆಸಿ ಸೌಹಾರ್ದತೆ ಕಾಪಾಡಬೇಕು. ಪೊಲೀಸ್ ಇಲಾಖೆ ಕೂಡ ತನಿಖೆ ನಡೆಸಿ, ಶಾಂತಿಯುತವಾಗಿ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts