More

    ಬಸ್ ನಿಲ್ದಾಣವೇ ಆಶ್ರಯ ತಾಣ!

    ಹುಬ್ಬಳ್ಳಿ: ಕಳೆದ ಆಗಸ್ಟ್​ನಲ್ಲಿ ಉಂಟಾದ ಅತಿವೃಷ್ಟಿಗೆ ಇವರ ಮನೆ ಬಿದ್ದಿದೆ. ಆಗಲೇ ಇವರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಅಂದು ಸೂರು ಕಳೆದುಕೊಂಡ ಈ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವಾಗಲಿ, ಶಾಶ್ವತ ಸೂರಾಗಲಿ ಸಿಗಲೇ ಇಲ್ಲ. ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಕೂಡ ಇವರ ಗೋಳು ಕೇಳಲಿಲ್ಲ. ಹಾಗಾಗಿ ಇವರಿಗೆ ಗ್ರಾಮದ ಬಸ್ ನಿಲ್ದಾಣವೇ ‘ಆಸರೆ’ಯಾಗಿದೆ.

    ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ವೀರಪ್ಪ ಬಡಿಗೇರ ಅವರ ಕುಟುಂಬ ಇದೀಗ ಬಸ್ ನಿಲ್ದಾಣದ ಕಟ್ಟಡವನ್ನೇ ಮನೆ ಮಾಡಿಕೊಂಡಿದೆ.

    ನಿತ್ಯ ಕೂಲಿ ಮಾಡಿಕೊಂಡು ತುತ್ತಿನ ಚೀಲ ತುಂಬಿಕೊಳ್ಳುವ ವೀರಪ್ಪ ಹಾಗೂ ನೀಲವ್ವ ದಂಪತಿಯ ಮಗಳು ಕೂಡ ಈಗ ಹೆರಿಗೆಗಾಗಿ ತವರಿಗೆ ಬಂದಿದ್ದಾಳೆ. ಅವಳಿಗೂ ತಂದೆ-ತಾಯಿ ಜೊತೆ ಬಸ್ ನಿಲ್ದಾಣವೇ ವಾಸದ ಮನೆಯಾಗಿದೆ. 2020ರ ಜುಲೈ- ಆಗಸ್ಟ್​ನಲ್ಲಿ ರಣಭೀಕರ ಮಳೆ ಸುರಿದಾಗ ಇವರ ಮಣ್ಣಿನ ಮನೆ ಕುಸಿದು ಹೋಯಿತು. ಇದ್ದ ಒಂದು ಸೂರು ಪ್ರಕೃತಿಯ ಮುನಿಸಿಗೆ ಬಲಿಯಾದಾಗ ವೀರಪ್ಪ ಹಾಗೂ ನೀಲವ್ವ ಗತಿ ಕಾಣದೇ ಬಸ್ ನಿಲ್ದಾಣದಲ್ಲಿ ಉಳಿದುಕೊಂಡರು. ಅಲ್ಲಿಂದಲೇ ನಿತ್ಯ ಕೂಲಿ ಮಾಡಲು ಹೋಗುತ್ತಾರೆ. ಒಂದೊಮ್ಮೆ ಗ್ರಾಮ ಪಂಚಾಯಿತಿಯವರಿಗೆ ಮೌಖಿಕವಾಗಿ ಮನೆ ಕಳೆದುಕೊಂಡ ಬಗ್ಗೆ ಹೇಳಿ ಬಂದಿದ್ದಾರೆ. ಆದರೆ, ಮತ್ತೆ ಪರಿಹಾರ ಕೇಳುವ ಗೋಜಿಗೆ ಹೋಗಿಲ್ಲ.

    ಬಮ್ಮಿಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೆಲ್ಲಿಹರವಿಯಲ್ಲಿ ಸಮೀಕ್ಷೆ ಮಾಡುವಾಗ ಇವರನ್ನು ಪರಿಹಾರಕ್ಕೆ ಪರಿಗಣಿಸಿದಂತೆ ಕಾಣುತ್ತಿಲ್ಲ. ಇದೇ ರೀತಿ ಗ್ರಾಮದಲ್ಲಿ ಕೆಲ ಮನೆಗಳು ಬಿದ್ದಿದ್ದು, ಉಳ್ಳವರು ಬೇರೆ ಮನೆ ಕಟ್ಟಿಕೊಂಡಿದ್ದಾರೆ. ಆರ್ಥಿಕವಾಗಿ ಸಬಲರಲ್ಲದ ವೀರಪ್ಪ ಬಡಿಗೇರ ಕುಟುಂಬದವರು ಮಾತ್ರ ಯಾವುದೇ ಪರಿಹಾರ ಕಂಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಮನೆ ಬಿದ್ದ ಮೇಲೆ ಯಾರೊಬ್ಬರೂ ನಮ್ಮ ಗೋಳು ಕೇಳಿಲ್ಲ, ಸರ್ಕಾರದ ಪರಿಹಾರ ಸಿಕ್ಕಿಲ್ಲ. ನಮಗೆ ಎಲ್ಲಿಯೂ ಆಸರೆ ಸಿಗದೇ ಬಸ್ ನಿಲ್ದಾಣಕ್ಕೆ ಬಂದು ಜೀವನ ನಡೆಸುತ್ತಿದ್ದೇವೆ ಎಂದು ನೀಲವ್ವ ಬಡಿಗೇರ ಅಳಲು ತೋಡಿಕೊಳ್ಳುತ್ತಾರೆ.

    ಸರ್ಕಾರ ಇನ್ನಾದರೂ ಇವರಿಗೆ ಸೂಕ್ತ ಪರಿಹಾರ ನೀಡಬೇಕು, ವಾಸಕ್ಕೆ ಮನೆ ನಿರ್ವಿುಸಿಕೊಡಬೇಕು ಎಂದು ಗ್ರಾಮದ ಮುಖಂಡ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.

    ಗಾಪಂ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಇನ್ನಷ್ಟೇ ನಡೆಯಲಿದೆ. ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಆದ್ಯತೆ ಮೇರೆಗೆ ಬಡಿಗೇರ ಕುಟುಂಬದವರಿಗೆ ಸೂರು ಒದಗಿಸಲು ಪ್ರಯತ್ನಿಸಲಾಗುವುದು. ಇದೇ ರೀತಿ ಸೂರು ಕಳೆದುಕೊಂಡವರಿಗೆ ನೆರವಾಗುತ್ತೇವೆ. |ಬಸವರಾಜ ಕರ್ಲಟಿ ್ಟ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts