More

    ಬಸ್ ನಿಲ್ದಾಣಗಳು ಖಾಲಿ ಖಾಲಿ!

    ಹುಬ್ಬಳ್ಳಿ: ಲಾಕ್​ಡೌನ್ ತೆರವಾಗಿ ಎರಡು ದಿನ ಕಳೆದರೂ ಪ್ರಯಾಣಿಕರು ಬಸ್ ಹತ್ತಲು ಹಿಂದೇಟು ಹಾಕುತ್ತಿರುವ ಕಾರಣ ನಗರದ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿರುವ ದೃಶ್ಯ ಗುರುವಾರ ಕಂಡು ಬಂತು.

    ಬುಧವಾರದಿಂದ ಬಸ್ ಸಂಚಾರ ಪುನಾರಂಭ ಮಾಡಲಾಗಿದೆಯಾದರೂ ಕರೊನಾ ಭೀತಿಯಿಂದ ಜನ ಸಾರಿಗೆ ಬಸ್ ಏರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹಾಗಾಗಿ, ಇಲ್ಲಿನ ಹಳೇ ಬಸ್ ನಿಲ್ದಾಣ, ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಬಸ್​ಗಳು ಸಾಲುಗಟ್ಟಿ ನಿಂತಿದ್ದವು. ನಗರ ಸಾರಿಗೆ ಬಸ್​ಗಳಲ್ಲಿ ಕೆಲ ಪ್ರಯಾಣಿಕರನ್ನು ಹೊರತುಪಡಿಸಿದರೆ, ಗ್ರಾಮೀಣ ಮತ್ತು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

    ಸರ್ಕಾರಿ ಕಚೇರಿಗಳು ಸಕ್ರಿಯ: ಲಾಕ್​ಡೌನ್ ತೆರವಾಗುತ್ತಿದ್ದಂತೆ ನಗರದ ಸರ್ಕಾರಿ ಕಚೇರಿಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಇಲ್ಲಿನ ಮಿನಿ ವಿಧಾನಸೌಧಕ್ಕೆ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚಳವಾಗಿದೆ. ಪಿಂಚಣಿ ಪತ್ರಗಳ ಪರಿಶೀಲನೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಉತಾರ, ಪಹಣಿ ಪತ್ರ ಮತ್ತಿತರ ದಾಖಲೆ ಪಡೆಯಲು ಮುಂದಾಗುತ್ತಿದ್ದಾರೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ಜನದಟ್ಟಣೆ ಉಂಟಾಗಿತ್ತು. ಇತ್ತೀಚೆಗೆ ಮಿನಿ ವಿಧಾನಸೌಧದ ಕೆಲ ಸಿಬ್ಬಂದಿಗೆ ಸೋಂಕು ದೃಢಪಟ್ಟ ಬಳಿಕ ಥರ್ಮಲ್ ಸ್ಕ್ರೀನಿಂಗ್ ಆರಂಭಿಸಲಾಗಿತ್ತು. ಇದೀಗ ಮತ್ತೆ ತಪಾಸಣೆ ಕೈಬಿಡಲಾಗಿದ್ದು, ಜನ ಮಾಸ್ಕ್ ಇಲ್ಲದೆ ಗುಂಪು ಗುಂಪಾಗಿ ಓಡಾಡುತ್ತಿರುವುದು ಸಾಮಾನ್ಯವಾಗಿದೆ.

    ಕೇವಲ 93 ಸಾವಿರ ರೂಪಾಯಿ ಆದಾಯ!: ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ವಿಭಾಗ ಬುಧವಾರದಂದು ಬಸ್​ಗಳ ಸಂಚಾರದಿಂದ ಕೇವಲ 93 ಸಾವಿರ ರೂ. ಆದಾಯ ಗಳಿಸಿದೆ. ಕರೊನಾ ಹಾವಳಿಗಿಂತ ಮೊದಲು ನಿತ್ಯ 55ರಿಂದ 56 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿತ್ತು. ಮೊದಲ ಸುದೀರ್ಘ ಲಾಕ್​ಡೌನ್ ತೆರವಾದ ಬಳಿಕ ನಿತ್ಯ ಸರಾಸರಿ 12ರಿಂದ 13 ಲಕ್ಷ ರೂ. ಆದಾಯವಿತ್ತು. ಜು.22ರಂದು ಲಾಕ್​ಡೌನ್ ತೆರವಾದ ಬಳಿಕ ಬುಧವಾರ ಅತಿ ಕಡಿಮೆ ಗಳಿಕೆ ದಾಖಲಾಗಿದೆ. ಬುಧವಾರ ಕೇವಲ 80 ಬಸ್​ಗಳು ಸಂಚರಿಸಿದ್ದು, ಗುರುವಾರ 205 ಬಸ್​ಗಳು ಸಂಚರಿಸಿವೆ ಎಂದು ಹುಬ್ಬಳ್ಳಿ ಗ್ರಾಮೀಣ ವಿಭಾಗದ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts