More

    ಬಸವತತ್ತ್ವದ ಪ್ರತಿಪಾದಕ ಲಿಂ. ಸಿದ್ಧಲಿಂಗ ಶ್ರೀಗಳು

    ಡಂಬಳ: ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಬಸವತತ್ತ್ವದ ಪ್ರತಿಪಾದಕರಾಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

    ಡಂಬಳ ಗ್ರಾಮದ ತೋಂಟದಾರ್ಯಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜಾತ್ರೆಯ ಆಚರಣೆಗಳು ಉದಾತ್ತ ಸಂದೇಶ ಸಾರುವಂತಾಗಬೇಕು ಎಂದರು.

    ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಪರಿಸರ ಪ್ರೇಮಿ. ಕಪ್ಪತಗುಡ್ಡದ ಉಳಿವಿಗಾಗಿ ಅಹೋರಾತ್ರಿ ಹೋರಾಟ ಮಾಡಿದ್ದರ ಫಲದಿಂದ ಇಂದು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ ಎಂದರು.

    ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಡಂಬಳದ ರೊಟ್ಟಿ ಜಾತ್ರೆ ಸಾಮರಸ್ಯ ಸಾರುವ ಜಾತ್ರೆಯಾಗಿದೆ ಎಂದರು.

    ಗ್ರಾ.ಪಂ. ಸದಸ್ಯ ಗೋಣಿಬಸಪ್ಪ ಕೊರ್ಲಹಳ್ಳಿ, ಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ ಮಾತನಾಡಿದರು. ವಿ.ಎಸ್. ಯರಾಶಿ, ಬಸವಂತೆಪ್ಪ ಪಟ್ಟಣಶೆಟ್ಟರ್, ಡಾ. ಪ್ಯಾಟಿ, ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ, ತಾ.ಪಂ. ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ, ಅಶೋಕ ಹಡಪದ, ಕುಮಾರರಡ್ಡಿ ಪ್ಯಾಟಿ, ಮಲ್ಲಪ್ಪ ಅಳಗಿ, ಈಶಣ್ಣ ಶೆಟ್ಟರ್, ರೇವಣಸಿದ್ದಪ್ಪ ಕರಿಗಾರ, ಅಶೋಕ ಮಾನೆ, ಬಸಪ್ಪ ಕೊತಂಬ್ರಿ, ಇತರರು ಇದ್ದರು.

    ರೊಟ್ಟಿ ಸವಿದ ಭಕ್ತರು: ಗ್ರಾಮದ ತೋಂಟದಾರ್ಯ ಮಠದಲ್ಲಿ ಮಂಗಳವಾರ ರೊಟ್ಟಿ ಜಾತ್ರೆ ಸಂಭ್ರಮದಿಂದ ಜರುಗಿತು. ಸಾವಿರಾರು ಭಕ್ತರು ಖಡಕ್ ರೊಟ್ಟಿ, ಕರಿಂಡಿ, ಮೆಂತ್ಯೆ ಪಲ್ಲೆ, ಅಗಸಿ ಚಟ್ನಿ, ಮೊಸರು ಬಾನ, ಪುಂಡಿಪಲ್ಲೆ, ಗೋಧಿ ಹುಗ್ಗಿ ಸವಿದರು.

    ಡಾ. ತೋಂಟದ ಸಿದ್ಧರಾಮ ಶ್ರೀಗಳು ಭಕ್ತರಿಗೆ ರೊಟ್ಟಿ ಪ್ರಸಾದ ವಿತರಿಸಿ ಮಾತನಾಡಿ, ರೊಟ್ಟಿ ಜಾತ್ರೆ ಮೊದಲು ಡಂಬಳ ಮೂಲ ಮಠದಿಂದ ಆರಂಭವಾಗಿ ಶಿರೋಳ ಮಠದಲ್ಲೂ ನಡೆಯುತ್ತಿದೆ ಎಂದರು.

    ಜಾತ್ರೆ ನಿಮಿತ್ತ 1 ಲಕ್ಷಕ್ಕೂ ಅಧಿಕ ರೊಟ್ಟಿಗಳನ್ನು ಸಂಗ್ರಹಿಸಲಾಗಿತ್ತು. ಗ್ರಾಮದ ಸುತ್ತಲಿನ ಗ್ರಾಮಸ್ಥರು ಹಾಗೂ ವಿವಿಧ ಜಿಲ್ಲೆಗಳ ಹಾಗೂ ನೆರೆಯ ರಾಜ್ಯಗಳ ಜನರು ಪಾಲ್ಗೊಂಡು ಜೋಳದ ರೊಟ್ಟಿ ಸವಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts