More

    ಬಸವಣ್ಣ ವಿಶ್ವಕಂಡ ಅದ್ಭುತ ವಿಭೂತಿ ಪುರುಷ

    ಕಲಬುರಗಿ: ಬಸವಣ್ಣ ಈ ವಿಶ್ವಕಂಡ ಅದ್ಭುತ ವಿಭೂತಿ ಪುರುಷ ಎಂದು ಕಡಗಂಚಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
    ಬೆಂಗಳೂರಿನ ಬಸವ ಸಮಿತಿ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಡಾ.ಬಸವರಾಜ ಡೋಣೂರ್ ಅವರ ದಿ ಪೊಯಟ್ರಿ ಆಫ್ ಜಿ.ಎಂ.ಹಾಪ್‌ಕಿನ್ಸ್ ಮತ್ತು ಬಸವಣ್ಣ: ಎ ಕಂಪ್ಯಾರೆಟಿವ್ ಸ್ಟಡಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
    ಬಸವರಾಜ ಡೋಣೂರರ ಈ ಕೃತಿ ಭಾರತೀಯ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು. ಒಳ್ಳೆಯ ಲೇಖಕ ಒಳ್ಳೆಯ ಶಿಕ್ಷಕ ಆಗಲಾರ, ಒಳ್ಳೆಯ ಶಿಕ್ಷಕ ಒಳ್ಳೆಯ ಆಡಳಿತ ಆಗಲಾರ. ಆದರೆ ಬಸವರಾಜ ಡೋಣೂರ ಒಳ್ಳೆಯ ಶಿಕ್ಷಕ, ಒಳ್ಳೆಯ ಲೇಖಕ ಮತ್ತು ಒಳ್ಳೆಯ ಆಡಳಿತಗಾರ ಆಗಿದ್ದಾರೆ. ಬಸವಣ್ಣನ ಕುರಿತ ಈ ಕೃತಿ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.
    ಲೇಖಕ ಡಾ.ಬಸವರಾಜ ಡೋಣೂರು ಮಾತನಾಡಿ, ಹಾಪ್‌ಕಿನ್ಸ್ ಮತ್ತು ಬಸವಣ್ಣ ಅವರ ಕಾವ್ಯ, ಬದುಕಿನ ನಡುವೆ ಅನೇಕ ಸಾಮ್ಯತೆಗಳಿರುವಂತೆ ಭಿನ್ನತೆಗಳೂ ಇವೆ. ೧೨ನೇ ಶತಮಾನದ ಬಸವಣ್ಣ ಮತ್ತು ೧೯ನೇ ಶತಮಾನದ ಹಾಪ್ಕಿನ್ಸ್ ಸಾಹಿತ್ಯ, ಸಮಾಜ, ಸಂಸ್ಕೃತಿ, ಆಧ್ಯಾತ್ಮ ಮತ್ತು ಧರ್ಮದ ಬಗ್ಗೆ ಒಂದೇ ರೀತಿಯಲ್ಲಿ ಚಿಂತನೆ ಮಾಡುತ್ತಿದ್ದರು ಎಂಬ ಸಂಗತಿ ನನ್ನನ್ನು ಆಕರ್ಷಿಸಿತು. ಬಸವಣ್ಣ ಕೂಡಲ ಸಂಗಮದೇವನ ಮುಂದೆ ತನ್ನ ವಿಚಾರ, ಆಚಾರ, ಸಮಸ್ಯೆಗಳನ್ನು ನಿವೇದನೆ ಮಾಡಿಕೊಳ್ಳುವಂತೆ ಹಾಪ್ಕಿನ್ಸ್ ಕೂಡ ಕ್ರೆÊಸ್ತನ ಎದುರು ತನ್ನ ಮಾನಸಿಕ ತುಮುಲ, ಆಧ್ಯಾತ್ಮಿಕ ಪ್ರಯಾಣದಲ್ಲಿ ಎದುರಿಸುತ್ತಿದ್ದ ಸಮಸ್ಯೆ ನಿವೇದನೆ ಮಾಡಿಕೊಳ್ಳುತ್ತಾನೆ. ಭಾಷಿಕ, ತಾತ್ವಿಕ, ಆಧ್ಯಾತ್ಮಿಕ ಮತ್ತು ನೈತಿಕ ಸಾಮ್ಯತೆಗಳು ನನ್ನಲ್ಲಿ ಆಸಕ್ತಿ ಹುಟ್ಟಿಸಿದವು. ಇದೊಂದು ತೌಲನಿಕ ಅಧ್ಯಯನ. ವಿಶ್ವ ಸಾಹಿತ್ಯದ ಅಧ್ಯಯನಕ್ಕೆ ಇದು ಸಹಕಾರಿ ಎಂದು ಹೇಳಿದರು.
    ನಾಡೋಜ ಡಾ.ಮ.ನು.ಬಳಿಗಾರ ಮಾತನಾಡಿದರು. ಲೇಖಕ ಡಾ.ವಿಕ್ರಮ ವಿಸಾಜಿ ಮತ್ತು ಎಚ್.ಎಸ್.ಪ್ರಕಾಶ ಕೃತಿ ಕುರಿತು ಮಾತನಾಡಿದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಡಾ ಗಣಪತಿ ಸಿನ್ನೂರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts