More

    ಬರುವ ವರ್ಷ 500 ವಿಕಲಾಂಗರಿಗೆ ಉದ್ಯೋಗ  -ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾಹಿತಿ – ವಿಶ್ವ ಅಂಗವಿಕಲರ ದಿನಾಚರಣೆ

    ದಾವಣಗೆರೆ: ಗ್ರಾಪಂ, ತಾಪಂಗಳಲ್ಲಿನ ಶೇ.5ರ ಅನುದಾನ ಬಳಸಿ, ಮುಂದಿನ ವರ್ಷದಲ್ಲಿ 500 ಮಂದಿ ವಿಕಲಾಂಗರಿಗೆ ಉದ್ಯೋಗ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಜಿಪಂ ಸಿಇಒ ಸುರೇಶ್ ಬಿ ಇಟ್ನಾಳ್ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕೆಲವು ಪಂಚಾಯ್ತಿಗಳು ಶೇ.5ರ ಮೀಸಲು ಅನುದಾನ 1ರಿಂದ 1.5 ಲಕ್ಷ ರೂ. ಬಳಸಿಲ್ಲ. ಕೇವಲ ಶೌಚಗೃಹ, ರ‌್ಯಾಂಪ್ ನಿರ್ಮಾಣಕ್ಕೆ ಬಳಸದಂತೆಯೂ ನಿರ್ಬಂಧಿಸಲಾಗಿತ್ತು. ಸೆಲ್ಕೋ ಫೌಂಡೇಷನ್ ಸಹಕಾರದೊಂದಿಗೆ ವಿಕಲಾಂಗರಿಗೆ ಸ್ವ ಉದ್ಯೋಗ ಕಲ್ಪಿಸಲಾಗುವುದು ಎಂದರು.
    3 ತಿಂಗಳಲ್ಲಿ ಯೋಜನೆ ಕಾರ್ಯಗತಗೊಳಿಸುತ್ತಿದ್ದು, ಜಿಲ್ಲಾ ವಿಕಲಚೇತನರ ಇಲಾಖಾಧಿಕಾರಿಗಳು ನೀಡಿದ 62 ಮಂದಿ ಅಂಗವಿಕಲರಿಗೆ ಪ್ರಾಥಮಿಕ ಹಂತದಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ತಿಳಿಸಿದರು.
    ನರೇಗಾ ಯೋಜನೆಯಡಿ, ಕೃಷಿ ಜಮೀನು ಹೊಂದಿರುವ ವಿಕಲಾಂಗ ಅಭ್ಯರ್ಥಿಗಳು ಲಾಭ ಪಡೆಯಲು ಅವಕಾಶವಿದೆ. ಅಡಕೆ, ಬಾಳೆ ಇನ್ನಿತರೆ ತೋಟ ಮಾಡಿಕೊಳ್ಳಲು ಸಹಾಯಧನ ಕಲ್ಪಿಸಲಾಗುವುದು. ಅಗತ್ಯವಿದ್ದವರು ಈ ವರ್ಷದ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಆಗಬಹುದು ಎಂದರು.
    ಅಂಗವಿಕಲರು ಸ್ವಸಹಾಯ ಸಂಘ ರಚಿಸಿಕೊಳ್ಳಲು ಅವಕಾಶವಿದೆ. ಪ್ರತಿ ಗ್ರಾಪಂಗೆ ಒಂದರಂತೆ ರಚಿಸಿಕೊಂಡಲ್ಲಿ ರಾಷ್ಟ್ರೀಯ ಜೀವನೋಪಾಯ ಯೋಜನೆಯಡಿ ಅನುದಾನ ನೀಡಲಾಗುವುದು. ಸಂಘ ರಚನೆಯಾದ ಆರು ತಿಂಗಳ ಬಳಿಕವೇ ಇದು ಅನ್ವಯವಾಗಲಿದೆ ಎಂದು ಹೇಳಿದರು.
    ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಅಂಗವಿಕಲರು ರಾಜ್ಯದಲ್ಲೇ ಅತಿ ಹೆಚ್ಚು ಮತದಾನ ಮಾಡಿ ಗಮನ ಸೆಳೆದಿದ್ದಾರೆ. ಜಿಲ್ಲೆಯ 2 ಸಾವಿರ ವಿಶೇಷ ಮಕ್ಕಳಿಗೆ ಬಿಆರ್‌ಸಿ ಕೇಂದ್ರಗಳ ಮೂಲಕ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಂಗವಿಕಲರ ಕಾಯ್ದೆಗಳು ಸಮರ್ಪಕ ಅನುಷ್ಠಾನದಲ್ಲಿ ಕೆಲ ನ್ಯೂನತೆಗಳಿದ್ದು ಎಲ್ಲರ ಸಹಕಾರದಲ್ಲಿ ಸರಿಪಡಿಸಲಾಗುವುದು ಎಂದೂ ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲೂ ಅಂಗವಿಕಲರು ಚಟುವಟಿಕೆಯಿಂದ ಭಾಗವಹಿಸಿದ್ದನ್ನು ಕಂಡಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲ ಅಂಗವಿಕಲರಲ್ಲೂ ಉತ್ಸಾಹ ಹೆಚ್ಚಿದೆ. ಇದು ನಿಮ್ಮ ಜೀವನದುದ್ದಕ್ಕೂ ಇರಲಿ ಎಂದು ಹಾರೈಸಿದರು.
    ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಡಾ.ಕೆ.ಕೆ.ಪ್ರಕಾಶ್ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 29,421 ಅಂಗವಿಕಲರು ಮಾಸಾಶನ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ವೇತನ, ದ್ವಿಚಕ್ರ ವಾಹನ, ವಿವಾಹ ಪ್ರೋತ್ಸಾಹ ಧನ, ಟಾಕಿಂಗ್ ಲ್ಯಾಪ್‌ಟಾಪ್ ಇನ್ನಿತರೆ ಸೌಲಭ್ಯ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
    ಮಹಾಂತೇಶ್ ಬ್ರಹ್ಮ ರಚಿಸಿದ ವಿಕಲಚೇತನರ ಹಕ್ಕುಗಳು ಮತ್ತು ಸರ್ಕಾರಿ ಸೌಲಭ್ಯಗಳು ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು. ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಸುಮಂತ್, ಸಿದ್ದಪ್ಪ, ಲತಾ, ಕಾತ್ಯಾಯಿನಿ, ದುರ್ಗೇಶ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ಡಿಡಿಪಿಐ ಜಿ. ಕೊಟ್ರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಆರ್. ಜಯಲಕ್ಷ್ಮೀಬಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts