More

    ಬರಪೀಡಿತ ಜಿಲ್ಲೆ ಘೋಷಿಸಲಿ

    ಬೈಲಹೊಂಗಲ: ಮುಂಗಾರು ಮಳೆ ತಡವಾಗಿ ಪ್ರಾರಂಭವಾಗಿದ್ದು, ಬಿತ್ತಿದ ಬೀಜಗಳು ಮೊಳಕೆಯಲ್ಲೇ ಕಮರಿವೆ ಇದರಿಂದ ಸಾಲ ಮಾಡಿದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸರ್ಕಾರವನ್ನು ಆಗ್ರಹಿಸಿದರು.

    ಪಟ್ಟಣದಲ್ಲಿ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ‌್ಯಾಲಿಯಲ್ಲಿ ಭಾಗವಹಿಸಿ ಉಪವಿಭಾಗಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ಕೆಲ ಭಾಗಗಳಲ್ಲಿ ಸಕಾಲಕ್ಕೆ ಮಳೆ ಬಾರದ್ದರಿಂದ ಬಿತ್ತನೆ ಮಾಡಲಾಗಿಲ್ಲ. ಕೆಲವೆಡೆ ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆಯದೆ ಭೂಮಿಯಲ್ಲಿಯೇ ಕಮರಿವೆ. ಜಿಲ್ಲೆಯಾದ್ಯಂತ ಮುಂಗಾರು ಫಸಲು ಕನಸಿನ ಮಾತಾಗಿದೆ. ಆದ್ದರಿಂದ ಬೆಳಗಾವಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಠರಾವು ಮಾಡಿ, ಪ್ರತಿ ಎಕರೆಗೆ 50,000 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ, ಶಂಕರ ಮಾಡಲಗಿ, ರೈತ ಮುಖಂಡ ಮಲ್ಲಿಕಾರ್ಜುನ ಹುಂಬಿ ಮಾತನಾಡಿ, ರೈತರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಬಿತ್ತನೆ ಮಾಡಿ, ಸಕಾಲಕ್ಕೆ ಮಳೆಯಾಗದಿರುವ ಹಿನ್ನೆಲೆ ಕೈ ಸುಟ್ಟುಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಸರ್ಕಾರ ತಕ್ಷಣ ರೈತರಿಗೆ ನೋಟಿಸ್ ನೀಡದಂತೆ ಬ್ಯಾಂಕ್‌ಗಳಿಗೆ ಆದೇಶ ಹೊರಡಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ಹತ್ತು ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

    ರೈತ ಮುಖಂಡರಾದ ಮಲ್ಲಿಕಾರ್ಜುನ ವಾಲಿ, ಶಿವನಸಿಂಗ ಮೋಕಾಶಿ, ಸುರೇಶ ಸಂಪಗಾವಿ, ಮಹಾಂತೇಶ ಕಮತ, ಬಸವರಾಜ ಬಿಜ್ಜೂರ ಮಾತನಾಡಿದರು. ಬಸವರಾಜ ಹಣ್ಣಿಕೇರಿ, ಬೀರಪ್ಪ ದೇಶನೂರ, ಮಹಾಂತೇಶ ಹಿರೇಮಠ, ಮಡಿವಾಳಪ್ಪ ಹೋಟಿ, ವೈ.ಎಸ್.ಪಾಟೀಲ, ಬಸವರಾಜ ಹಿತ್ತಲಮನಿ, ಶಿವಪುತ್ರಪ್ಪ ತಟವಟಿ, ಅಣ್ಣಪ್ಪ ಗುಮತಿ, ಉಳವಪ್ಪ ಶೆಟಗಾರ, ಬಸಪ್ಪ ಬೆಳಗಾವಿ, ಗುರುಸಿದ್ದಪ್ಪ
    ಕೊಟಗಿ, ನಾಗಪ್ಪ ಆರೇರ, ಮಲ್ಲೇಶಪ್ಪ ಬುಡಶೆಟ್ಟಿ, ವೀರೇಶ ಚಳಕೊಪ್ಪ, ವೀರಪ್ಪ ಹುಂಬಿ, ಸೋಮಪ್ಪ ಹುಂಬಿ, ಹುಸೇನಸಾಬ್ ಯಕ್ಕುಂಡಿ, ಮಹೇಶ ಕಾದ್ರೋಳ್ಳಿ, ಬಸವರಾಜ ಅಂಬಡಶೆಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts