More

    ಬಬಲೇಶ್ವರ ಕ್ಷೇತ್ರದಲ್ಲಿ ಮಳೆಗೆ ಬೆಳೆ ಹಾನಿ, ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತ, ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ

    ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಸತತ ಮಳೆಯಿಂದಾಗಿ ಬೆಳೆ ಸಂಪೂರ್ಣ ಹಾನಿಯಾಗಿದ್ದು ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

    ಮೆಕ್ಕೆಜೋಳ, ಹತ್ತಿ ಮುಂತಾದ ಬೆಳೆಗಳು ಜಲಾವೃತಗೊಂಡಿವೆ. ಈವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹೊನವಾಡ ನೇತೃತ್ವದಲ್ಲಿ ಪರಿಹಾರಕ್ಕೆ ಒತ್ತಾಯಿಸಿದರು.

    ಶುಕ್ರವಾರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಬಸವರಾಜ ಹೊನವಾಡ, ರೈತರ ಸಮಸ್ಯೆ ಆಲಿಸಿದರು. ಸುಮಾರು 500 ಎಕರೆಗಿಂತಲೂ ಹೆಚ್ಚಿಗೆ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಸಮೀಕ್ಷೆ ನಡೆಸಿ ಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ಬಸವರಾಜ ಹೊನವಾಡ ಒತ್ತಾಯಿಸಿದರು.

    ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ಅತಿವೃಷ್ಟಿಯಿಂದ ರೈತರ ಬೆಳೆಗಳು ಹಾಳಾಗುತ್ತಿವೆ. ಬಬಲೇಶ್ವರ ಕ್ಷೇತ್ರದ ಕಾಖಂಡಕಿ, ಧನ್ಯಾಳ, ಕೋಟ್ಯಾಳ, ದಾಶ್ಯಾಳ, ಹರನಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಟಾವಿಗೆ ಬಂದಿದ್ದ ಮೆಕ್ಕೆಜೋಳ, ತೊಗರಿ, ಬಾಳೆ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿದ್ದರಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ. ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.

    ಸರ್ಕಾರ ಜನರ ಪರವಾಗಿದೆ ಎಂದು ಹೇಳಿದರೆ ಸಾಲದು. ಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು. ರೈತರು ಸಾಕಷ್ಟು ಖರ್ಚು ಮಾಡಿ ಗೊಬ್ಬರ, ಬೀಜ ಹಾಕಿ ಕಷ್ಟ ಪಟ್ಟು ಬೆಳೆದ ಬೆಳೆಗಳು ನೀರಲ್ಲಿ ನಿಂತು ಹಾಳಾಗುತ್ತಿವೆ. ರೈತರು ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ. ಅಧಿಕಾರಿಗಳು ಮಾತ್ರ ಇತ್ತ ಕಣ್ಣು ಹಾಯಿಸಿಲ್ಲ. ಈಗಲಾದರೂ ಅಧಿಕಾರಿಗಳು, ಜನಪ್ರತಿನಿದಿಗಳು ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಕನಿಷ್ಠ ಎಕರೆಗೆ 25,000 ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ಮುಖಂಡರಾದ ನಾಗಪ್ಪ ಹಳ್ಳಿ, ಹಣಮಂತ ಶಿವಗೊಂಡ, ಶ್ರೀಕಾಂತ ಹಳ್ಳಿ, ಹಣಮಂತ ಸಿಗೊಂಡ, ಸೋಮು ಇಂಡಿ, ಶ್ರೀಕಾಂತ ಕಡತಗಾರ, ಮಾದಪ್ಪ ಹಳ್ಳಿ, ಪರಸಪ್ಪ ಕಡತಗಾರ, ಮಾಳಪ್ಪ ಮದಗುಣಕಿ, ಗೊಲ್ಲಾಳಪ್ಪ ಜೋಗುರ, ಮಾಳಪ್ಪ ಸಿದ್ನಾತ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts