More

    ಬನ್ನೇರುಘಟ್ಟ ಕಾಡಂಚಿನಲ್ಲಿ ಅಕ್ರಮ ದಂಧೆ; ಸೀಸಕ್ಕಾಗಿ ಬ್ಯಾಟರಿ ಸುಡುತ್ತಿರುವ ದುಷ್ಕರ್ಮಿಗಳು ಪರಿಸರ ಪ್ರಾಣಿ ಸಂಕುಲಕ್ಕೆ ಮಾರಕ

    ನವೀನ್‌ಚಂದ್ರಶೆಟ್ಟಿ ಆನೇಕಲ್: ಬನ್ನೇರುಘಟ್ಟ ಕಾಡಂಚಿನ ಗ್ರಾಮಗಳಲ್ಲಿ ಸೀಸಕ್ಕಾಗಿ ನಿಷೇಧಿತ ಬ್ಯಾಟರಿಗಳನ್ನು ಸುಡುತ್ತಿದ್ದು ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ತರುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ.

    ಕೇಂದ್ರ ಸರ್ಕಾರ ಬ್ಯಾಟರಿಯಲ್ಲಿನ ಸೀಸ ಸುಡಲು ನಿಷೇಧ ಹೇರಿದೆ. ಆದರೆ ಬನ್ನೇರುಘಟ್ಟ ಕಾಡಂಚಿನಲ್ಲಿ ಇದು ದಂಧೆಯಾಗಿ ಬೆಳೆಯುತ್ತಿದೆ.

    ಹೊರಗಿನವರ ಕೃತ್ಯ: ಉತ್ತರಪ್ರದೇಶದ ಮೂಲದವರು ಎನ್ನಲಾದ ದುಷ್ಕರ್ಮಿಗಳು ದಂಧೆ ನಡೆಸುತ್ತಿದ್ದು, ಸ್ಥಳೀಯರು ಹಣದಾಸೆಗಾಗಿ ಜಮೀನು ಬಾಡಿಗೆ ನೀಡಿ ಕೃತ್ಯಕ್ಕೆ ಕೈಜೋಡಿಸುತ್ತಿರುವುದು ಬೆಳಕಿಗೆ ಬಂದಿದೆ.
    ಆನೇಕಲ್ ತಾಲೂಕಿನ ಆದೂರಲ್ಲಿ ಗ್ರಾಮದ ನಡುವೆ ಈ ಕೃತ್ಯ ನಡೆಯುತ್ತಿದ್ದರೂ ಗ್ರಾಪಂ ಜಾಣಕುರುಡು ಪ್ರದರ್ಶಿಸುತ್ತಿದೆ. ಇಂಡ್ಲವಾಡಿ ಗ್ರಾಮದ ಬಗ್ಗನದೊಡ್ಡಿ ಸೇರಿ ಬನ್ನೇರುಘಟ್ಟ ಕಾಡಂಚಿನ ಹಲವು ಕಡೆ ರಾತ್ರಿ ವೇಳೆ ಬ್ಯಾಟರಿ ಸುಟ್ಟು ಅದರಲ್ಲಿನ ಸೀಸಗಳನ್ನು ಹೊರತೆಗೆಯುವ ಕೃತ್ಯ ಅವ್ಯಾಹತವಾಗಿ ನಡೆಯುತ್ತಿದೆ.  ಅರಣ್ಯಾಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಮೌನವಹಿಸಿದ್ದು, ಪ್ರಾಣಿ ಸಂಕುಲದ ನಾಶಕ್ಕೆ ನೇರ ಕಾರಣವಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಹಳೆಯ ಬ್ಯಾಟರಿಗಳನ್ನು ಕೆಲವು ಖಾಸಗಿ ಕಂಪನಿ ಕೊಂಡುಕೊಂಡು ಈ ದಂಧೆ ಮಾಡುವವ ಜತೆ ಕೈಜೋಡಿಸುವ ಆರೋಪವೂ ಇದೆ. ಬ್ಯಾಟರಿಯಿಂದ ತೆಗೆಯುವ ಒಂದು ಕೆಜಿ ಸಿಸ 140 ರಿಂದ 200 ರೂ.ವರೆಗೆ ಅಕ್ರಮವಾಗಿ ಮಾರಾಟವಾಗುತ್ತದೆ ಎಂಬ ಮಾಹಿತಿ ಇದೆ.

    ನಾವೇನ್ ಮಾಡೋಣ: ಗ್ರಾಮ ಪಂಚಾಯಿತಿ ಹಾಗೂ ಕೆಲವು ಅಧಿಕಾರಿಗಳಿಗೆ ತಿಂಗಳ ಮಾಮೂಲಿ ನೀಡುತ್ತೇವೆ, ಬ್ಯಾಟರಿ ಸುಡುವುದರಿಂದ ಪ್ರಾಣಿಗಳಿಗೆ ತೊಂದರೆ ಆದರೆ ನಾವೇನು ಮಾಡಲು ಸಾಧ್ಯ ಎನ್ನುವುದು ಈ ದಂಧೆಕೋರರ ದರ್ಪವಾಗಿದೆ. ಬನ್ನೇರುಘಟ್ಟ ಕಾಡಿನಂಚಿನಲ್ಲಿ ಆನೆ, ಚಿರತೆ ಸೇರಿ 50ಕ್ಕೂ ಹೆಚ್ಚು ಪ್ರಭೇದದ ಪ್ರಾಣಿಗಳು ರಾತ್ರಿ ಸಮಯದಲ್ಲಿ ಸಂಚಾರ ಮಾಡುತ್ತದೆ. ಆದರೆ ಈ ಬ್ಯಾಟರಿ ಸುಡುವುದರಿಂದ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯ ರಘುರಾಮ ಆತಂಕ ವ್ಯಕ್ತಪಡಿಸಿದ್ದಾರೆ.

    ಪರಿಸರಕ್ಕೆ ಮಾರಕ: ಈ ಹಿಂದೆ ಬ್ಯಾಟರಿ ಕಂಪನಿಗಳಲ್ಲಿ ಹಳೆಯ ಬ್ಯಾಟರಿಗಳನ್ನು ಒಡೆದು ಸುಟ್ಟು ಸೀಸ ಬೇರ್ಪಡಿಸಲಾಗುತ್ತಿತ್ತು. ಇದು ಪರಿಸರಕ್ಕೆ ಮಾರಕ ಎಂಬ ಕಾರಣದಿಂದ ಇದನ್ನು ನಿರ್ಬಂಧಿಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ವಿಷಯುಕ್ತ ಹೊಗೆ ಪರಿಸರಕ್ಕೆ ಸೇರುತ್ತಿದೆ. ಪರಿಸರದೊಂದಿಗೆ ಪ್ರಾಣಿಪಕ್ಷಗಳ ಜೀವನಕ್ಕೂ ಕುತ್ತ್ತು ತರುತ್ತಿದೆ.

    ಬ್ಯಾಟರಿ ಸುಡುವುದು ನಿಷೇಧ. ಅದರಲ್ಲೂ ಕಾಡಿನಲ್ಲಿ ಈ ರೀತಿ ಅಕ್ರಮ ದಂಧೆ ನಡೆಸುತ್ತಿರುವುದು ಅಪರಾಧ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಲಾಗುವುದು.
    ಮಹದೇವಯ್ಯ, ತಹಸೀಲ್ದಾರ್

    ಆನೆಗಳು ಹೆಚ್ಚಾಗಿ ಕಾಡಂಚಿನ ಗ್ರಾಮಗಳತ್ತ ಬರುತ್ತವೆ. ಇಂತಹ ಪ್ರಾಣಿಗಳಿಗೆ ಬ್ಯಾಟರಿಗಳಿಂದ ಬರುವ ವಿಷಯುಕ್ತ ಅನಿಲ ಮಾರಕವಾಗಲಿದೆ. ಈ ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
    ನಳಿನಿಗೌಡ, ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ

    ಅಕ್ರಮ ದಂಧೆಯ ಹಿಂದೆ ಸ್ಥಳೀಯ ಜನಪ್ರತಿನಿಧಿಗಳ ಕೈವಾಡವಿದೆ. ತಮ್ಮ ಜಮೀನುಗಳಲ್ಲಿ ಬಾಡಿಗೆಗೆ ಪಡೆದು ರಾತ್ರಿ ಸಮಯದಲ್ಲಿ ಬ್ಯಾಟರಿ ಸುಡಲು ಅವಕಾಶ ಮಾಡಿಕೊಡುತ್ತಿದ್ದಾರೆ.
    ಮನೋಜ್ ಕುಮಾರ್, ಸ್ಥಳೀಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts