More

    ಬಡವರ ನಿವೇಶನಕ್ಕೆ 8 ಎಕರೆ ಜಮೀನು, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮಾಹಿತಿ, ಸೂಲಿಬೆಲೆಯಲ್ಲಿ ಡಿಸಿ ನಡೆ ಹಳ್ಳಿಯ ಕಡೆ

    ಬೆಂ.ಗ್ರಾಮಾಂತರ/ಸೂಲಿಬೆಲೆ: ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ಒದಗಿಸಲು ಸೂಲಿಬೆಲೆ ಗ್ರಾಮದ ಸರ್ವೇ ನಂಬರ್ 10 ರಲ್ಲಿ 8 ಎಕರೆ ಭೂಮಿ ಮಂಜೂರು ಮಾಡಲಾಗಿದ್ದು, ಅರ್ಹರಿಗೆ ಕೂಡಲೇ ನಿವೇಶನ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

    ಸೂಲಿಬೆಲೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಸಕೋಟೆ ತಾಲೂಕಿನ 28 ಗ್ರಾಪಂಗಳಲ್ಲಿ ತಲಾ 100 ಆಶ್ರಯ ಮನೆಗಳನ್ನು ನಿರ್ಮಿಸಲು ಸರ್ಕಾರಿ ಭೂಮಿ ಮಂಜೂರು ಮಾಡಲಾಗುವುದು, 2800 ಮನೆ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸರ್ಕಾರಿ ನಿವೇಶನ, ಮನೆ ಹಕ್ಕುಪತ್ರ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಗಾಪಂಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಆಯ್ಕೆ ಮಾಡುವ ಮೂಲಕ ಅರ್ಹರಿಗೆ ಸವಲತ್ತುಗಳನ್ನು ತಲುಪಿಸಬೇಕು ಎಂದು ಹೇಳಿದರು.

    ನಿಜವಾದ ಬಡವರಿಗೆ ಸೂರು: ಜಿಲ್ಲೆಯಲ್ಲಿರುವ ನಿಜವಾದ ಬಡವರಿಗೆ ಸೂರು ನೀಡಲು ನಾವು ಸಿದ್ಧರಿದ್ದು, ಲಾನುಭವಿಗಳನ್ನು ಗುರುತಿಸಿದರೆ ಮತ್ತಷ್ಟು ಭೂಮಿ ಮಂಜೂರು ಮಾಡಿಸುತ್ತೇನೆ ಎಂದು ಎಂಟಿಬಿ ಭರವಸೆ ನೀಡಿದರು.

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಅನುಷ್ಠಾನಗೊಂಡು 6 ತಿಂಗಳು ಕಳೆದಿದೆ. ಈ ವರೆಗೆ ಪ್ರತಿ ತಾಲೂಕಿನ 6 ಗ್ರಾಪಂಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದ್ದು, ಜಿಲ್ಲಾಧಿಕಾರಿ ಹಾಗೂ ಆಯಾ ಭಾಗದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಾವಿರಾರು ಜನರ ಸಂಕಷ್ಟ ಬಗೆಹರಿಸಲಾಗಿದೆ ಎಂದು ತಿಳಿಸಿದರು.

    ಆಯುಷ್ಮಾನ್ ಸದ್ಬಳಕೆಯಾಗಬೇಕು: ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಎಬಿಎಆರ್‌ಕೆ ಕಾರ್ಯಕ್ರಮ ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ಆಯುಷ್ಮಾನ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು. ಇದರ ಮೂಲಕ ಆರೋಗ್ಯ ಸೌಲಭ್ಯವನ್ನು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳ ಮೂಲಕ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.

    ಗ್ರಾಮಸಭೆಗಳಲ್ಲಿ ಅರಿವು ಮೂಡಿಸಬೇಕು: ಸಾರ್ವಜನಿಕರಿಗೆ ವಿವಿಧ ಯೋಜನೆಗಳ ಮಾಹಿತಿ ಕೊರತೆಯಿದ್ದು ಗ್ರಾಮಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು. ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ ಕಾರ್ಯಕ್ರಮ ಆರಂಭವಾದಾಗಿನಿಂದ ಇಲ್ಲಿಯವರೆಗೆ 30 ಸಾವಿರ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯ ಒದಗಿಸಲಾಗಿದೆ. ಸಾರ್ವಜನಿಕರು ಮುಕ್ತವಾಗಿ ಅಹವಾಲುಗಳನ್ನು ಸಲ್ಲಿಸುವ ಮೂಲಕ ಸಮಸ್ಯೆ ಬಗೆಹರಿಸಲು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಹಕ್ಕು ಪತ್ರ ವಿತರಣೆ: ಸೂಲಿಬೆಲೆಯಲ್ಲಿ ಮಂಜೂರು ಮಾಡಲಾದ 8 ಎಕರೆ ಭೂಮಿಯ ಹಕ್ಕುಪತ್ರವನ್ನು ಸೂಲಿಬೆಲೆ ಗ್ರಾಪಂ ಅಧ್ಯಕ್ಷರಿಗೆ ಸಚಿವ ಎಂಟಿಬಿ ಹಸ್ತಾಂತರಿಸಿದರು. ನಂತರ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

    ಎತ್ತಿನಬಂಡಿಯಲ್ಲಿ ಸ್ವಾಗತ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಸೂಲಿಬೆಲೆ ಗ್ರಾಮದ ಗ್ರಾಮಸ್ಥರು ಅಲಂಕೃತವಾದ ಎತ್ತಿನ ಬಂಡಿ ಹಾಗೂ ಪೂರ್ಣಕುಂಭದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಸಂಚರಿಸಿ, ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಸ್ವಾಗತಿಸಿದರು.
    ಸೂಲಿಬೆಲೆ ಗ್ರಾಮದ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ, ಗ್ರಾಮಸ್ಥರ ಮನೆಗಳಿಗೆ ಭೇಟಿ ನೀಡಿ, ಅವರ ಅಹವಾಲು ಸ್ವೀಕರಿಸಿದರು. ನಂತರ ವಿವೇಕಾನಂದ ಪ್ರೌಢಶಾಲೆಯ ಆವರಣದಲ್ಲಿ ಗಿಡ ನೆಟ್ಟು, ನೀರೆರೆದರು.

    ಸೂ.ರಂ.ರಾಮಯ್ಯ ಪ್ರತಿಮೆಗೆ ಮಾಲಾರ್ಪಣೆ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಹಾಗೂ ವಿವೇಕಾನಂದ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಸೂ.ರಂ.ರಾಮಯ್ಯ ಅವರ ಪ್ರತಿಮೆಗೆ ಸಚಿವ ಎಂಟಿಬಿ ಮಾಲಾರ್ಪಣೆ ಮಾಡಿ, ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ನಂತರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts