More

    ಬಗೆದಷ್ಟು ಪತ್ತೆಯಾಗುತ್ತಿದೆ ಗಾಂಜಾ

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಸ್ಯಾಂಡಲ್ವುಡ್ ಸೇರಿ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಗಾಂಜಾ ದಂಧೆ ಜಿಲ್ಲೆಯಲ್ಲೂ ಬೇರೂರಿದೆ. ವಿಶೇಷವಾಗಿ ಕಾಳಗಿ ಮತ್ತು ಚಿಂಚೋಳಿ ತಾಲೂಕುಗಳಲ್ಲಿ ಗಾಂಜಾ ಬೆಳೆಯುತ್ತಿರುವುದನ್ನು ಪೊಲೀಸರು ನಿರಂತರ ದಾಳಿ ಮೂಲಕ ಬಯಲಿಗೆಳೆದಿದ್ದಾರೆ.
    ಈಗಾಗಲೇ ಬೆಂಗಳೂರು ಪೊಲೀಸರು ಅನೇಕ ಗಾಂಜಾ ಬೆಳೆಗಾರರು ಮತ್ತು ಪೆಡ್ಲರ್ಗಳನ್ನು ವಶಕ್ಕೆ ಪಡೆದಿದ್ದು, ರಾಜ್ಯಾದ್ಯಂತ ಗಾಂಜಾ ಪತ್ತೆ ಮಾಡುವಂತೆ ಡಿಜಿಪಿ ಪ್ರವೀಣ ಸೂದ್ ಐಜಿಪಿ ಮತ್ತು ಎಸ್ಪಿಗಳಿಗೆ ಆದೇಶಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಹಸಿ ಮತ್ತು ಒಣ ಗಾಂಜಾ ಪತ್ತೆ ಹಚ್ಚಿದ್ದಾರೆ.
    ಕಾಳಗಿ ತಾಲೂಕಿನ ಲಚ್ಚು(ಲಕ್ಷ್ಮಣ) ನಾಯಕ ತಾಂಡಾದಲ್ಲಿ ಬೇಟೆಯಾಡಿದ ಬೆಂಗಳೂರು ಪೊಲೀಸರು 6 ಕೋಟಿ ರೂ. ಮೌಲ್ಯದ 1350 ಕೆಜಿ ಗಾಂಜಾ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಆದರೆ ಈ ಬಗ್ಗೆ ಜಿಲ್ಲಾ ಪೊಲೀಸರ ಗಮನಕ್ಕೆ ಬರದೆ ಟೀಕೆಗೆ ಒಳಗಾಗಿದ್ದಲ್ಲದೆ ಕಾಳಗಿ ಸಿಪಿಐ, ಪಿಎಸ್ಐ, ಎಸ್ಐ ಮತ್ತು ಇಬ್ಬರು ಪೇದೆಗಳು ಸಸ್ಪೆಂಡ್ ಆಗಿದ್ದಾರೆ.
    ಗಾಂಜಾ ವಶಪಡಿಸಿಕೊಳ್ಳುವ ವಿಷಯದಲ್ಲಿ ಕಲಬುರಗಿ ಪೊಲೀಸರು ಸುಮ್ಮನೆ ಕುಳಿತಿಲ್ಲ. ಇವರು ಮಾಡುತ್ತಿರುವ ದಾಳಿ ಪ್ರಮಾಣ ಚಿಕ್ಕದಿರಬಹುದು. ಆದರೆ ಜಿಲ್ಲೆಯಲ್ಲಿ ಗಾಂಜಾ ಬೇರುಸಮೇತ ಕಿತ್ತೊಗೆಯಲು ನಿರ್ಧರಿಸಿರುವುದನ್ನು ಅಲ್ಲಗಳೆಯಲಾಗದು.
    ಚಿಂಚೋಳಿ ತಾಲೂಕಿನ ಧರಿ ತಾಂಡಾದ ಧನಸಿಂಗ್ ರಾಠೋಡ್ ಅವರ ತೊಗರಿ ಹೊಲದಲ್ಲಿ ಬೆಳೆದಿದ್ದ 10.50 ಲಕ್ಷ ರೂ. ಮೌಲ್ಯದ 223 ಕೆಜಿ, ಸಂಗಾಪುರದ ಕಬ್ಬಿನ ಗದ್ದೆಯಲ್ಲಿ 88 ಕೆಜಿ ಹಸಿ ಮತ್ತು ಒಣ ಗಾಂಜಾ, ಕಲಬುರಗಿ ಎಂಬಿ ನಗರ ಠಾಣೆ ವ್ಯಾಪ್ತಿಯಲ್ಲಿ 500 ಗ್ರಾಂ ಗಾಂಜಾ, ಜೇವರ್ಗಿ ತಾಲೂಕಿನ ಕೋಣಸಿರಸಗಿಯಲ್ಲಿ ತೊಗರಿ ನಡುವೆ ಬೆಳೆದಿದ್ದ ಗಾಂಜಾ ವಶಪಡಿಸಿಕೊಳ್ಳುವ ಮೂಲಕ ಜಿಲ್ಲಾ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.
    ತೊಗರಿ, ಹೆಸರು, ಉದ್ದು, ಸಜ್ಜೆ ಹೀಗೆ ನಾನಾ ಬೆಳೆಗಳ ಮಧ್ಯೆ ಒಂದೊಂದು ಸಾಲು ಹಣ ಗಳಿಕೆ ಗಾಂಜಾ ಬೆಳೆಯುತ್ತ ಕೆಲವರು ಜಾಣ್ಮೆ ಪ್ರದಶರ್ಿಸುತ್ತಿದ್ದಾರೆ. ಇದನ್ನು ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೀರಭದ್ರಯ್ಯ ಸಿಪಿಐ ಮಹಾಂತೇಶ ಪಾಟೀಲ್, ಪಿಎಸ್ಐ ರಾಜಶೇಖರ ರಾಠೋಡ ಮತ್ತು ಸಿಬ್ಬಂದಿ ಧರಿ ತಾಂಡಾದಲ್ಲಿ ನಡೆಸಿದ ದಾಳಿ ಸಾಬೀತುಪಡಿಸಿದೆ.
    ಅನ್ಯ ಬೆಳೆಗಳ ಮಧ್ಯೆ ಗಾಂಜಾ ಬೆಳೆಯುತ್ತಿರುವುದರಿಂದ ಬಹುತೇಕವಾಗಿ ಇದು ಹೊರಬರುವುದು ಕಷ್ಟ. ಇನ್ನು ಕಲಬುರಗಿ ಜಿಲ್ಲೆ ಒಂದೆಡೆ ಮಹಾರಾಷ್ಟ್ರ, ಇನ್ನೊಂದೆಡೆ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಗೆ ಹೊಂದಿಕೊಂಡಿದ್ದರಿಂದ ಆ ರಾಜ್ಯಗಳಿಗೆ ಸರಬರಾಜು ಮಾಡುವ ಸಾಧ್ಯತೆ ಹೆಚ್ಚಿದೆ.
    ಈ ಬೆಳೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದರೆ ಕೇವಲ ಪೊಲೀಸರಿಂದ ಸಾಧ್ಯವಾಗದು. ಕೃಷಿ, ತೊಟಗಾರಿಕೆ ಹೀಗೆ ಸಂಬಂಧಿತ ಇಲಾಖೆಗಳು ಕೈ ಜೋಡಿಸುವ ಅಗತ್ಯವೆನಿಸಿದೆ.

    ಚಿಂಚೋಳಿ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಂಜಾ ಬೆಳೆದಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿ ಅಪಾರ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಠಾಣಾಧಿಕಾರಿಗಳಿಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ವಿಶೇಷ ತಂಡ ರಚನೆ ಮಾಡಿಲ್ಲ. ಗಾಂಜಾ ಮಾರಾಟ, ಬೆಳೆದಿರುವ ಬಗ್ಗೆ ಮಾಹಿತಿಯಿದ್ದರೆ ಸಾರ್ವಜನಿಕರು ಮಾಹಿತಿ ನೀಡಿದರೆ ಪತ್ತೆ ಮಾಡಲು ಸಹಕಾರಿಯಾಗಲಿದೆ.
    | ಡಾ.ಸಿಮಿ ಮರಿಯಮ್ ಜಾರ್ಜ ಎಸ್ಪಿ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts