More

    ಬಂಪರ್ ಬೆಳೆಯ ನಿರೀಕ್ಷೆ ಹುಸಿ

    ನರೇಗಲ್ಲ: ಪಟ್ಟಣ ಸೇರಿ ಹೋಬಳಿಯಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆ ಹೆಚ್ಚಾಗಿದ್ದು, ರೈತರು ತೊಂದರೆ ಅನುಭವಿಸುವಂತಾಗಿದೆ.

    ಕಳೆದ ವರ್ಷ ಉಳ್ಳಾಗಡ್ಡಿ ಬೆಳೆಗೆ ಬಂಪರ್ ಬೆಲೆ ಬಂದಿದ್ದರಿಂದ ಈ ಬಾರಿಯೂ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಹೋಬಳಿಯಾದ್ಯಂತ ದಾಖಲೆ ಪ್ರಮಾಣದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದಾರೆ. ಹೋಬಳಿ ವ್ಯಾಪ್ತಿಯ ಕೋಡಿಕೊಪ್ಪ, ಕೋಚಲಾಪೂರ, ಮಲ್ಲಾಪೂರ, ದ್ಯಾಂಪೂರ, ತೋಟಗಂಟಿ, ಹಾಲಕೆರೆ, ನಿಡಗುಂದಿಕೊಪ್ಪ, ನಿಡಗುಂದಿ, ಹೊಸಳ್ಳಿ, ಕಳಕಾಪೂರ ಮೊದಲಾದ ಗ್ರಾಮಗಳ 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಲಾಗಿದೆ. ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆಗೆ ಸುಳಿ ರೋಗ ಕಾಣಿಸಿಕೊಂಡಿದ್ದು, ರೈತರು ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

    ಬಿತ್ತನೆ ಬೀಜ, ಗೊಬ್ಬರ, ಕಳೆ ತೆಗೆಯಲು ಸೇರಿ ಒಂದು ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆಯಲು 40 ರಿಂದ 50 ಸಾವಿರ ರೂ. ಖರ್ಚಾಗುತ್ತದೆ. ಬೆಳೆಗೆ ರೋಗ ಕಾಣಿಸಿಕೊಂಡಿದ್ದರಿಂದ ಮಾಡಿದ ಖರ್ಚು ಕೂಡ ವಾಪಸ್ ಬರುವುದು ಕಷ್ಟವಾಗಿದೆ. ಉಳ್ಳಾಗಡ್ಡಿಯೊಂದಿಗೆ ಮಿಶ್ರ ಬೆಳೆಯಾಗಿ ಮೆಣಸಿಕಾಯಿ ಬೆಳೆಯಲಾಗಿದ್ದು, ಅದಕ್ಕೆ ಎಲೆ ಮುಟುರು ರೋಗ ಕಾಣಿಸಿಕೊಂಡಿದೆ. ತೇವಾಂಶ ಹೆಚ್ಚಳದಿಂದಾಗಿ ಮೆಣಸಿನಕಾಯಿ ಗಿಡಗಳು ಕೊಳೆಯುವ ಹಂತ ತಲುಪಿವೆ.

    ಈಗಾಗಲೇ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಔಷಧ ಸಿಂಪಡಣೆ ಮಾಡಿದ್ದು, ಮಳೆ ನಿಲ್ಲದ ಕಾರಣ ಔಷಧಿ ಪ್ರಭಾವವು ಬೆಳೆಗಳಿಗೆ ಆಗದೇ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬೀಜ, ಗೊಬ್ಬರ, ಕೂಲಿ ಸೇರಿ ಸಾಕಷ್ಟು ಹಣ ವ್ಯಯ ಮಾಡಿರುವ ರೈತರಿಗೆ ಔಷಧ ಸಿಂಪಡಣೆಯ ಖರ್ಚು ಮತ್ತಷ್ಟು ಭಾರವಾಗುತ್ತಿದೆ.

    ಹತೋಟಿಗೆ ಕ್ರಮಗಳು: ಉಳ್ಳಾಗಡ್ಡಿ ಮತ್ತು ಮೆಣಸಿನಕಾಯಿಗೆ ಅಂಟಿಕೊಂಡಿರುವ ರೋಗ ನಿಯಂತ್ರಣಕ್ಕೆ 2.5 ಮಿ.ಲೀ. ಇಮಿಡಾಕ್ಲೋಪೈಡ್, 10 ಗ್ರಾಂ ಕಾರ್ಬನ್​ಡೈಜಲ್, 30 ಮಿ.ಲೀ. ಬೇವಿನ ಎಣ್ಣೆಯ ಮಿಶ್ರಣವನ್ನು 10 ಲೀಟರ್ ನೀರಿನಲ್ಲಿ ಬೆರೆಸಿ, ಒಂದು ವಾರ ಬಿಟ್ಟು ಒಂದು ವಾರದಂತೆ 2 ಬಾರಿ ಸಿಂಪಡಿಸಬೇಕು. 15 ದಿನಗಳ ನಂತರ 20 ಗ್ರಾಂ ಮಾರಕೋಜೆಬ್, 50 ಗ್ರಾಂ ಗಂಧಕ, 30 ಮಿ.ಲೀ. ಬೇವಿನ ಎಣ್ಣೆ ಮಿಶ್ರಣವನ್ನು 10 ಲೀಟರ್ ನೀರಿನಲ್ಲಿ ಬೆರೆಸಿ 2 ಸಲ 7 ದಿನಗಳ ಅಂತರದಲ್ಲಿ ಸಿಂಪಡಿಸಬೇಕು ಎಂದು ತೊಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ವರ್ಷ ಉಳ್ಳಾಗಡ್ಡಿಗೆ ಸಿಕ್ಕಾಪಟ್ಟೆ ಬೆಲೆ ಬಂದಿತ್ತು. ಈ ಬಾರಿಯೂ ಮಹಾರಾಷ್ಟ್ರ ಸೇರಿದಂತೆ ಉಳ್ಳಾಗಡ್ಡಿ ಬೆಳೆಯುವ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಬೆಳೆ ಹಾಳಾಗಿದೆ. ಉಳ್ಳಾಗಡ್ಡಿಗೆ ಈ ಬಾರಿ ಉತ್ತಮ ಬೆಲೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇವು. ಆದರೆ, ನಿರಂತರ ಮಳೆಯಿಂದ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆ ರೋಗಕ್ಕೆ ತುತ್ತಾಗಿದ್ದು, ಬೆಳೆ ನಾಶವಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ವಣವಾಗಿದೆ. ಆದ್ದರಿಂದ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಳ್ಳಾಗಡ್ಡಿ ಬೆಳೆ ಹಾನಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.
    | ಶರಣಪ್ಪ ಕಂಬಳಿ, ಹೊಸಳ್ಳಿ ಗ್ರಾಮದ ರೈತ

    ತೇವಾಂಶ ಹೆಚ್ಚಳದಿಂದಾಗಿ ಉಳ್ಳಾಗಡ್ಡಿ ಬೆಳೆಗೆ ಸುಳಿ ರೋಗ ಕಾಣಿಸಿಕೊಂಡಿದೆ. ಮೆಣಸಿನಕಾಯಿ ಬೆಳೆಗೆ ಎಲೆ ಮುಟುರು ರೋಗ ಕಾಣಿಸಿಕೊಂಡಿದ್ದು, ಇವುಗಳಿಗೆ ಸೂಕ್ತ ಔಷಧ ಸಿಂಪಡಣೆ ಮಾಡುವ ಮೂಲಕ ರೋಗವನ್ನು ನಿಯಂತ್ರಣ ಮಾಡಬಹುದು. ನಮ್ಮ ಇಲಾಖೆಯ ಸಿಬ್ಬಂದಿ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಸೂಕ್ತ ಸಲಹೆ ಸೂಚನೆ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂರ್ಪಸಬಹುದು. ಪರಿಹಾರ ನೀಡುವುದರ ಕುರಿತು ಮೇಲಧಿಕಾರಿಗಳೊಂದಿಗೆ ರ್ಚಚಿಸಲಾಗುತ್ತದೆ.
    | ಎಂ.ಎಂ. ತಾಂಬೋಟಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts