More

    ಬಂಗಾರ ಅಡ ಇಡ್ತೇವಿ ಅಂದ್ರೂ ರೊಕ್ಕ ಸಿಗವಲ್ತು!

    ಗದಗ: ಕಳೆದ ಹಿಂಗಾರಿನಲ್ಲಿ ಬೆಳೆದ ಕಡಲೆಯನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿದ ರೈತರಿಗೆ ಈವರೆಗೂ ಕಾಸು ಸಿಕ್ಕಿಲ್ಲ. ಹೀಗಾಗಿ, ಮುಂಗಾರು ಉಳುಮೆ ಖರ್ಚಿಗೆ ರೈತರು ಚಿನ್ನ ಅಡವಿಡಲು ಮುಂದಾಗಿದ್ದಾರೆ. ಆದರೆ, ಬ್ಯಾಂಕ್​ಗಳಿಗೆ ಎಷ್ಟೇ ಎಡತಾಕಿದರೂ ರೈತರಿಗೆ ಹಣ ಸಿಗುತ್ತಿಲ್ಲ.

    ಮೇ 31ರ ವರೆಗೆ ಡೆಪಾಸಿಟ್, ವಿತ್​ಡ್ರಾ ಹೊರತುಪಡಿಸಿ ಬೇರಾವ ವ್ಯವಹಾರ ಮಾಡಬಾರದೆಂದು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಿಂದ ರೈತರಿಗೆ ಚಿನ್ನದ ಮೇಲೆ ಸಾಲವೂ ದೊರೆಯುತ್ತಿಲ್ಲ. ಚಿನ್ನವನ್ನು ಪರೀಕ್ಷಿಸುವ ವ್ಯಕ್ತಿಗಳು (ಗೋಲ್ಡ್ ಅಪ್ರೋಚರ್) ಬ್ಯಾಂಕ್​ಗೆ ಬರುತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಸಬೂಬು ಹೇಳಿ ರೈತರು ಸೇರಿ ಜನರನ್ನು ಮರಳಿ ಕಳಿಸುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿವೆ.

    ಗದಗ ತಾಲೂಕಿನ ಬೆಳಗೋಡ, ಹೊಂಬಳ, ಚಿಕ್ಕಹಂದಿಗೋಳ, ಹಿರೇಹಂದಿಗೋಳ ಸೇರಿ ಹಲವಾರು ಗ್ರಾಮಗಳ ರೈತರು ಚಿನ್ನವನ್ನು ಅಡವಿಡಲು ಬ್ಯಾಂಕ್​ಗಳಿಗೆ ಎಡತಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ ಹುಲಕೋಟಿ, ಹೊಂಬಳ ಮತ್ತು ಗದಗ ನಗರದ ವಿವಿಧ ಬ್ಯಾಂಕ್​ಗೆ ಭೇಟಿ ನೀಡಿ ‘ಚಿನ್ನವನ್ನು ಅಡವಿಟ್ಟುಕೊಂಡು ರೊಕ್ಕ ಕೊಡಿ, ರೊಕ್ಕ ಕೊಟ್ಟರೆ ಜಮೀನು ಉಳುಮೆ ಮಾಡಿಕೊಳ್ಳುತ್ತೇವೆ. ಸದ್ಯ ಜಮೀನು ಉಳುಮೆ ಮಾಡಿದರೆ ಹೆಸರು, ಉಳ್ಳಾಗಡ್ಡಿ, ಮೆಕ್ಕೆಜೋಳ ಮುಂತಾದ ಬೆಳೆಗಳ ಬಿತ್ತನೆ ಮಾಡಲು ಅನುಕೂಲವಾಗುತ್ತದೆ’ ಎಂದು ರೈತರು ಪರಿಪರಿಯಾಗಿ ಬೇಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಕರೊನಾ ಸೋಂಕಿನ ಆರ್ಭಟ ಹೆಚ್ಚಾಗುತ್ತಿದ್ದು, ಹೀಗಾಗಿ ಚಿನ್ನವನ್ನು ಪರೀಕ್ಷಿಸಲು ನೇಮಕ ಮಾಡಿಕೊಂಡಿರುವ ವ್ಯಕ್ತಿ ಬ್ಯಾಂಕ್​ಗೆ ಬರುತ್ತಿಲ್ಲ. ಹೀಗಾಗಿ ‘ನಾಳೆ ಬನ್ನಿ’ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿ ಸಾಗಹಾಕುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.

    ಕರೊನಾ ಕಾರಣದಿಂದ ಬೇಸಿಕ್ ವ್ಯವಹಾರ ಮಾತ್ರ ಮಾಡಲಾಗುತ್ತದೆ. ಅಂದರೆ ಹಣವನ್ನು ಇಡುವುದು, ತೆಗೆದುಕೊಳ್ಳಲಿಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೇ 31ರ ವರೆಗೆ ಡೆಪಾಸಿಟ್, ವಿತ್​ಡ್ರಾ ಹೊರತುಪಡಿಸಿ ಚಿನ್ನ ಅಡವಿಟ್ಟುಕೊಳ್ಳುವುದು ಸೇರಿ ಬೇರೆ ಯಾವುದೇ ವ್ಯವಹಾರಕ್ಕೂ ಆಸ್ಪದವಿಲ್ಲ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಗೋಲ್ಡ್ ಅಪ್ರೋಚರ್ ಇಲ್ಲ ಎಂದು ಹೇಳಿರಬಹುದು. ಮೇ 31ರ ವರೆಗೆ ಕರೊನಾ ನಿಯಂತ್ರಣಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ, ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಬ್ಯಾಂಕ್ ವ್ಯವಹಾರ ಅವಧಿ ಸೀಮಿತಗೊಳಿಸಲಾಗಿದೆ. ಶೇ.50ರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ.

    | ಮುರಳಿ ನಾಯಕ ಮ್ಯಾನೇಜರ್, ಲೀಡ್ ಬ್ಯಾಂಕ್, ಗದಗ

    ಯಾವಾಗ ಬರುತ್ತೋ ಗೊತ್ತಿಲ್ಲ!

    ಗದಗ ತಾಲೂಕಿನ ರೈತರು ಕಡಲೆ ಬೆಂಬಲ ಬೆಲೆ ಯೋಜನೆಯಡಿ ತಮ್ಮಲ್ಲಿರುವ ಕಡಲೆ ಮಾರಾಟ ಮಾಡಿ ಒಂದು ತಿಂಗಳು ಕಳೆಯಿತು. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ 4500-4600 ರೂಪಾಯಿ ದರವಿತ್ತು. ಆದರೆ, ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್​ಗೆ 5100 ರೂ. ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದರಿಂದ ಪ್ರತಿ ಕ್ವಿಂಟಾಲ್​ಗೆ 500-600 ರೂ. ಹೆಚ್ಚು ಸಿಗಲಿದೆ ಎಂದು ನೂರಾರು ರೈತರು ಬೆಂಬಲ ಬೆಲೆಯಡಿ ಕಡಲೆ ಮಾರಾಟ ಮಾಡಿದ್ದಾರೆ. ಆದರೆ, ಬೆಂಬಲ ಬೆಲೆಯಡಿ ಖರೀದಿಸಿದ ಉತ್ಪನ್ನಗಳಿಗೆ ಸರ್ಕಾರ ತಡವಾಗಿ ಹಣ ಪಾವತಿಸುತ್ತದೆ. ಆದರೆ, ಇದೇ ಸಮಯದಲ್ಲಿ ಕರೊನಾ ಅಬ್ಬರ ಹೆಚ್ಚಾಗಿದ್ದರಿಂದ ಹಣ ಬರಲು ಎಷ್ಟು ದಿನಗಳಾಗುತ್ತದೆಯೋ ಗೊತ್ತಿಲ್ಲ. ಆದ್ದರಿಂದ ಜಮೀನು ಬದುಕು ಮಾಡಲು ಹಣ ಕೇಳಿದರೆ ಯಾರೂ ಕೊಡಲ್ಲ. ಜೀವನ ಸಾಗಿಸಲು ಅನ್ಯಮಾರ್ಗ ಕಾಣದಾಗಿದ್ದರಿಂದ ಮನೆಯಲ್ಲಿದ್ದ ಚಿನ್ನವನ್ನು ಅಡವಿಟ್ಟು ಉಳುಮೆ ಮಾಡಲು ಮುಂದಾಗಿದ್ದೇವೆ. ಚಿನ್ನ ಕೊಡುತ್ತೇವೆ ಎಂದರೂ ಹಣ ಕೊಡುತ್ತಿಲ್ಲ ಎಂದು ಅನೇಕ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಕಡಲೆ ಬೆಂಬಲ ಬೆಲೆ ಯೋಜನೆಯಡಿ 15 ಕ್ವಿಂಟಾಲ್ ಕಡಲೆ ಮಾರಾಟ ಮಾಡಿದ್ದು, ಕನಿಷ್ಠ 76 ಸಾವಿರ ರೂ.ಬರಲಿದೆ. ಆದರೆ, ಆ ಹಣ ಯಾವಾಗ ಬರುತ್ತೋ ಗೊತ್ತಿಲ್ಲ. ಅದನ್ನು ನೆಚ್ಚಿಕೊಂಡು ಕುಳಿತರೆ ಜಮೀನು ಉಳುಮೆ ನಿಂತು ಹೋಗುತ್ತದೆ. ಬೇರೆ ದಾರಿ ಕಾಣದಾಗಿದ್ದರಿಂದ ನನ್ನ ಬಳಿ ಇರುವ ಚಿನ್ನವನ್ನು ಅಡವಿಟ್ಟುಕೊಂಡು ಸಾಲ ಕೊಡಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಆದರೆ, ಬ್ಯಾಂಕ್​ನವರು ಚಿನ್ನ ಪರೀಕ್ಷಿಸುವವರು ಬಂದಿಲ್ಲ ಎಂದು ನೆಪ ಹೇಳಿ ಕಳಿಸುತ್ತಿದ್ದಾರೆ. ಚಿನ್ನವನ್ನು ಇಟ್ಟುಕೊಂಡು ಹಣ ಕೊಟ್ಟರೆ ಜಮೀನು ಉಳುಮೆ ಮಾಡಬಹುದು. ಸಂಕಷ್ಟದ ಸಮಯದಲ್ಲಿ ಅನುಕೂಲ ಮಾಡಿಕೊಟ್ಟರೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ.

    | ಲಿಂಗನಗೌಡ ಅಯ್ಯನಗೌಡರ ರೈತ, ಬೆಳಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts