More

    ಫಾಸ್ಟ್ಯಾಗ್​ನಿಂದ ಹಣ ಕಡಿತ ಹೆಚ್ಚು!

    ಹುಬ್ಬಳ್ಳಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಹಕಾರಿಯಾಗಬೇಕಿದ್ದ ಫಾಸ್ಟ್ಯಾಗ್ ವ್ಯವಸ್ಥೆಯು ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೆದ್ದಾರಿಗಳ ಟೋಲ್ ಗೇಟ್​ನಲ್ಲಿ ಶೀಘ್ರ ಶುಲ್ಕ ಪಾವತಿಗಾಗಿ ಜಾರಿಗೆ ತಂದಿರುವ ಫಾಸ್ಟ್ಯಾಗ್ ಅವ್ಯವಸ್ಥೆಯ ಆಗರವಾಗಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

    ಜ. 9ರಂದು ಹುಬ್ಬಳ್ಳಿಯಿಂದ ಶಿರಡಿಗೆ ಕಾರಿನಲ್ಲಿ ಕುಟುಂಬ ಸಮೇತ ಪ್ರಯಾಣಿಸಿದ್ದ ಕಿಮ್್ಸ ಪ್ರೊಫೆಸರ್ ಡಾ. ವಿಜಯ ಕಾಮತ ಅವರ ಫಾಸ್ಟ್ಯಾಗ್ ಖಾತೆಯ ಮೂಲಕ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣವು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗೇಟ್​ಗಳಲ್ಲಿ ಕಡಿತಗೊಂಡಿದೆ.

    ಜ. 9ರಂದು ಸಂಜೆ 7.02 ಗಂಟೆಗೆ ಹಿರೇಬಾಗೆವಾಡಿಯ ಟೋಲ್ ಗೇಟ್​ನಲ್ಲಿ ಇವರ ಫಾಸ್ಟ್ಯಾಗ್​ನಿಂದ 485 ರೂ. ಕಡಿತಗೊಂಡಿದೆ. ಆದರೆ, ಕಾರಿಗೆ ಇಲ್ಲಿ ಕಡಿತಗೊಳ್ಳಬೇಕಿರುವ ಶುಲ್ಕ 90 ರೂಪಾಯಿ ಮಾತ್ರ.

    ಬೆಳಗಾವಿ ನಂತರ ಬರುವ ಕಿಣಿ ಟೋಲ್​ಗೇಟ್​ನಲ್ಲಿ 265 ರೂ. ಶುಲ್ಕ ಕಡಿತಗೊಂಡಿದೆ. ಇಲ್ಲಿ ಕಡಿತಗೊಳ್ಳಬೇಕಾದ ನಿಗದಿತ ಶುಲ್ಕ ಕೇವಲ 65 ರೂಪಾಯಿ.

    ತಮ್ಮ ಕಾರಿನ ಫಾಸ್ಟ್ಯಾಗ್​ನಿಂದ ನಿಗದಿಗಿಂತ ಹೆಚ್ಚು ಶುಲ್ಕ ಕಡಿತಗೊಂಡಿರುವುದು ಡಾ. ವಿಜಯ ಕಾಮತ ಅವರ ಗಮನಕ್ಕೆ ಇರಲೇ ಇಲ್ಲ. ಕಾರು ಇನ್ನೊಂದು ಟೋಲ್ ಗೇಟ್ ದಾಟುವಾಗ ಫಾಸ್ಟ್ಯಾಗ್ ಖಾತೆಯಲ್ಲಿನ ಹಣ ಖಾಲಿಯಾಗಿತ್ತು. ಹುಬ್ಬಳ್ಳಿಯಿಂದ ಹೊರಡುವಾಗ ಡಾ. ವಿಜಯ ಅವರು ಸಿಂಡಿಕೇಟ್ ಬ್ಯಾಂಕ್​ನಿಂದ 1,455 ರೂ. ಮೊತ್ತದ ಫಾಸ್ಟ್ಯಾಗ್ ಪಡೆದಿದ್ದರು. ಇದರಲ್ಲಿ 1 ಸಾವಿರ ರೂ. ಬ್ಯಾಲೆನ್ಸ್ ಉಳಿದಿತ್ತು. ಹುಬ್ಬಳ್ಳಿಯಿಂದ ಶಿರಡಿಗೆ ಹೋಗಿಬರುವವರೆಗೆ ಈ ಮೊತ್ತ ಸಾಕಾಗುತ್ತದೆಂದು ಅವರು ಭಾವಿಸಿದ್ದರು. ಆದರೆ, ನಿಗದಿಗಿಂತ ಹೆಚ್ಚಿನ ಹಣ ಟೋಲ್​ಗೇಟ್​ಗಳಲ್ಲಿ ಕಡಿತಗೊಂಡಿರುವುದು ಆತಂಕಕ್ಕೀಡು ಮಾಡಿದೆ. ಶಿರಡಿಯಿಂದ ಮರಳಿ ಬರುವಾಗ ಡಾ. ವಿಜಯ ಅವರು ಪ್ರತಿ ಟೋಲ್​ಗೇಟ್​ನಲ್ಲೂ ನಿಂತು, ತಮ್ಮ ಫಾಸ್ಟ್ಯಾಗ್ ಖಾತೆಯಿಂದ ಕಡಿತವಾದ ಮೊತ್ತದ ಕುರಿತು ಮಾಹಿತಿ ಕೇಳಿದರು. ಇದಕ್ಕೆ ಪ್ರತಿ ಗೇಟ್​ನಲ್ಲೂ ಗಂಟೆಗಟ್ಟಲೇ ಕಾಯಬೇಕಾಗಿ ಬಂತು.

    ಈ ಸಂದರ್ಭದಲ್ಲಿ ಹಿರೇಬಾಗೆವಾಡಿಯ ಟೋಲ್​ಗೇಟ್​ನಲ್ಲಿ ಅವರ ಕಾರು ದಾಖಲೆಯಲ್ಲಿ ಟ್ರಕ್ ಎಂದು ನಮೂದಾಗಿ, ಟೋಲ್​ಗೇಟ್ ಖಾತೆಯಲ್ಲಿ 90 ರೂ. ಮಾತ್ರ ಕಡಿತಗೊಂಡಿದ್ದು, ಫಾಸ್ಟ್ಯಾಗ್​ನಲ್ಲಿ 485 ರೂ. ಕಡಿತವಾಗಿರುವ ದಾಖಲೆ ಸಿಕ್ಕಿತು.

    ಈ ಬಗ್ಗೆ ಡಾ. ವಿಜಯ ಕಾಮತ ಅವರು ಬ್ಯಾಂಕಿನವರನ್ನು ಸಂರ್ಪಸಿದಾಗ, ಟೋಲ್ ಗೇಟ್​ನವರನ್ನು ಸಂರ್ಪಸುವಂತೆ ಸೂಚಿಸಿದರು. ಟೋಲ್ ಗೇಟ್​ನವರು ಫಾಸ್ಟ್​ಟ್ಯಾಗ್ ಟೋಲ್​ಫ್ರೀ ಸಂಖ್ಯೆ 1033 ಗೆ ಕರೆ ಮಾಡಿ, ದೂರು ನೀಡುವಂತೆ ಸಲಹೆ ನೀಡಿದ್ದಾರೆ.

    ಟ್ರೋಲ್​ಫ್ರೀ ಸಂಖ್ಯೆಗೆ ಹಲವಾರು ಬಾರಿ ಕರೆ ಮಾಡಿದರೂ, ಪ್ರತಿಕ್ರಿಯೆ ಬರಲಿಲ್ಲ. ಅಲ್ಲದೆ, ಟೋಲ್ ಗೇಟ್​ನಲ್ಲಿ ಹಣ ಕಡಿತವಾದ ತಕ್ಷಣ ಫಾಸ್ಟ್​ಟ್ಯಾಗ್​ನಿಂದ ಮೊಬೈಲ್​ಫೋನ್​ಗೆ ಸಂದೇಶ ಬರುತ್ತಿಲ್ಲ. ಹೀಗಾಗಿ, ಹೆಚ್ಚುವರಿ ಹಣ ಕಡಿತವಾಗಿರುವ ಬಗೆಗೆ ತಕ್ಷಣವೇ ಗೊತ್ತಾಗುತ್ತಿಲ್ಲ ಎಂದು ಡಾ. ಕಾಮತ ದೂರಿದ್ದಾರೆ.

    ಈ ರೀತಿಯ ಪ್ರಕರಣ ಹಿರೇಬಾಗೆವಾಡಿಯ ಟೋಲ್ ಗೇಟ್​ನಲ್ಲಿ ಮೊದಲನೇಯದ್ದೆಂದು ಹೇಳಲಾಗಿದ್ದು, ಕಿಣಿ ಟೋಲ್​ಗೇಟ್​ನಲ್ಲಿ ಈ ಮೊದಲು ಇಂತಹದ್ದೇ ಪ್ರಕರಣ ನಡೆದಿತ್ತೆಂದು ಮೂಲಗಳು ತಿಳಿಸಿವೆ.

    ಫಾಸ್ಟ್ಯಾಗ್​ನ ಇಂತಹ ದೋಷಗಳು ವಾಹನದವರಿಗೆ ಆರ್ಥಿಕ ನಷ್ಟ ಹಾಗೂ ಕಿರಿಕಿರಿ ಉಂಟು ಮಾಡುತ್ತಿವೆ. ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕಿದ್ದ ಕಂಪನಿಯವರು ಸ್ಪಂದನೆ ನೀಡದಿರುವುದು ವಾಹನ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts