More

    ಫಸಲ್ ಬಿಮಾ ಯೋಜನೆ ಜಾರಿ

    ಬಾಗಲಕೋಟೆ: ಪ್ರಸಕ್ತ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಅಽಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.


    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಈ ಕುರಿತು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ವಿಮೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಬೆಳೆ ಸಾಲ ಪಡೆದ ರೈತರು ವಿಮಾ ಯೋಜನೆಯಡಿ ಭಾಗವಹಿಸಲು ಇಚ್ಚೆಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ ೭ ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಬೆಳೆಸಾಲ ಪಡೆಯದ ರೈತರಿಗೆ ಇದು ಐಚ್ಛಿಕವಾಗಿದೆ ಎಂದರು.


    ಪ್ರಸಕ್ತ ಸಾಲಿಗೆ ಜಿಲ್ಲೆಗೆ ಬಜಾಜ ಅಲಿಯಾಂಜ ಜಿ.ಐ.ಸಿ ವಿಮಾ ಕಂಪನಿ ಆಯ್ಕೆಯಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಆಹಾರ ಬೆಳೆಗಳಿಗೆ ಬೆಳೆ ವಿಸ್ತೀರ್ಣಕ್ಕೆ ತಕ್ಕಂತೆ ಬೆಳೆ ವಿಮಾ ಕಂತಿನ ಶೇ.೧.೫ ರಷ್ಟು ಹಾಗೂ ವಾಣಿಜ್ಯ ಬೆಳೆಗಳಿಗೆ ಬೆಳೆ ವಿಮಾ ಕಂತಿನ ಶೇ.೫ ರಷ್ಟು ರೈತರು ಪಾವತಿಸಬೇಕಾಗುತ್ತದೆ. ಆಸಕ್ತ ರೈತರು ಕೊನೆ ದಿನಾಂಕದವರೆಗೆ ಕಾಯದೆ ಅಧಿಸೂಚಿತ ಬೆಳೆಗಳಿಗೆ ವಿಮೆಗೆ ಒಳಪಡಿಸಬೇಕು. ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಟೋಟ ಮತ್ತು ಗುಡುಗು ಮಿಂಚುಗಳಿಂದ ಆಗುವ ಬೆಂಕಿ ಅವಗಢಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸಲು ಈ ಯೋಜನೆಯಡಿ ಅವಕಾಶ ನೀಡಲಾಗಿದೆ ಎಂದರು.


    ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಸ್ಥಳೀಯ ಗಂಡಾಂತರಗಳ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಸಂಬಂಧಪಟ್ಟ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿ, ಹಣಕಾಸು ಸಂಸ್ಥೆ, ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ಸೂಚನೆ ನೀಡತಕ್ಕದ್ದು. ಇಂತಹ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ, ಹಾನಿಗೆ ಕಾರಣಗಳನ್ನು ೭೨ ಗಂಟೆಗಳೊಳಗಾಗಿ ತಿಳಿಸತಕ್ಕದ್ದು ಎಂದು ಹೇಳಿದರು.


    ಈ ಯೋಜನೆಯಡಿ ೨೦೨೨ ರ ಹಿಂಗಾರು, ಬೇಸಿಗೆ ಹಂಗಾಮಿನಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರಗಳೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ ಎಂದರು.


    ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತೋಟಗಾರಿಕೆ ಉಪನಿರ್ದೇಶಕ ರಾಹುಲಕುಮಾರ ಬಾವಿದಡ್ಡಿ, ಕೃಷಿ ಇಲಾಖೆಯ ಉಪನಿರ್ದೇಶಕ ಎಚ್.ಡಿ.ಕೋಳಿಕರ, ಕೆ.ಎಸ್.ಅಗಸನಾಳ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಮೌನೇಶ್ವರ ಕಮ್ಮಾರ, ಸಹಾಯಕ ಕೃಷಿ ನಿರ್ದೇಶಕ ಪಾಂಡಪ್ಪ ಲಮಾಣಿ, ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts