More

    ಫಲಿಸಿದ ‘ಐ ಸ್ಟಾೃಂಡ್ ವಿತ್ ಮಲ್ಲಮ್ಮ’ ಅಭಿಯಾನ

    ಬೆಳಗಾವಿ: ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಳೆ ಶಾವಿಗೆ ಒಣ ಹಾಕಿದ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನಾಕ್ರೋಶ ವ್ಯಕ್ತವಾಗಿ,‘ಐ ಸ್ಟಾೃಂಡ್ ವಿತ್ ಮಲ್ಲಮ್ಮ’ ಹ್ಯಾಶ್‌ಟ್ಯಾಗ್‌ನಡಿ ನೆಟ್ಟಿಗರು ಶುರು ಮಾಡಿದ್ದ ಅಭಿಯಾನ ಫಲಿಸಿದೆ. ಸುವರ್ಣ ವಿಧಾನಸೌಧದ ಮೆಟ್ಟಿಲು ಮೇಲೆ ಶಾವಿಗೆ ಒಣಗಿಸಲು ಹಾಕಿ, ಕೆಲಸ ಕಳೆದುಕೊಂಡಿದ್ದ ಮಲ್ಲಮ್ಮ ಹಾಗೂ ಸಾಂವಕ್ಕ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ.

    ಇಬ್ಬರೂ ಮಹಿಳೆಯರು ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ದಿನಗೂಲಿ ಆಧಾರದಲ್ಲಿ ನಿಯೋಜನೆಯಾಗಿದ್ದರು. ಕಳೆದ ಮಂಗಳವಾರ ಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಿಸಲು ಹಾಕಿದ್ದರು. ಅದರ ಚಿತ್ರ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ, ಅಧಿಕಾರಿಗಳು ಇಬ್ಬರನ್ನೂ ಕೆಲಸದಿಂದ ತೆಗೆದಿದ್ದರು. ಇದು ಜನಾಕ್ರೋಶಕ್ಕೆ ಕಾರಣವಾಗಿತ್ತು. ನೆಟ್ಟಿಗರು, ಶಾವಿಗೆ ಒಣ ಹಾಕಿದ್ದಕ್ಕೆ ಕೆಲಸದಿಂದ ತೆಗೆದು ಹಾಕುವುದು ಯಾವ ನ್ಯಾಯ? ಆ ಮಹಿಳೆಗೆ ತಿಳಿ ಹೇಳಿದ್ದರೆ ಮತ್ತೆ ಹಾಗೆ ಮಾಡುತ್ತಿರಲಿಲ್ಲ. ಮಲ್ಲಮ್ಮನ ಶಾವಿಗೆ ಒಣ ಹಾಕಲು ನೆರವಾಗದ ಸುವರ್ಣವಿಧಾನಸೌಧ ನಾಡಿನ ಜನರ ಸಮಸ್ಯೆಗೆ ನೆರವಾಗುತ್ತದೆ ಎಂಬುದರಲ್ಲಿ ನಂಬಿಕೆ ಇಲ್ಲ’ ಎಂಬಿತ್ಯಾದಿ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದರು. ಎಚ್ಚೆತ್ತುಕೊಂಡ ಅಧಿಕಾರಿಗಳು ಇಬ್ಬರನ್ನೂ ಶುಕ್ರವಾರದಿಂದ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಮಲ್ಲಮ್ಮ ಹಾಗೂ ಸಾಂವಕ್ಕ ತಿಳಿಯದೇ ತಪ್ಪು ಮಾಡಿದ್ದಾರೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಲು ತಿಳಿಸಿ, ಮತ್ತೆ ಕೆಲಸ ಕೊಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

    ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಶಾವಿಗೆ ಒಣ ಹಾಕಿರುವ ಅಚಾತುರ್ಯ ಘಟನೆ ನಡೆದು ಹೋಗಿದೆ. ಆದರೆ, ಅಂದು ಕಾವಲು ಇದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪೊಲೀಸ್ ಬಿಗಿ ಭದ್ರತೆ ನಡುವೆಯೂ ಇಂತಹ ಘಟನೆ ನಡೆದಿದೆ. ಆ ಮಹಿಳೆ ಒಳಗೆ ಹೋಗಲು ಕಾರಣ ಯಾರು? ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts