More

    ಫಲಾನುಭವಿ ಆಯ್ಕೆಯಲ್ಲಿ ವಿಫಲ ಆರೋಪ

    ಧಾರವಾಡ: ಅರಣ್ಯ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾಪಂ ಸದಸ್ಯರು ಆರೋಪಿಸಿ ಅಧಿಕಾರಿ ಮೇಲೆ ವಾಗ್ದಾಳಿ ನಡೆಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ರವಿವರ್ಮ ಪಾಟೀಲ ಅಧ್ಯಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಅವರನ್ನು ಎಲ್ಲ ಸದಸ್ಯರು ತರಾಟೆಗೆ ತೆಗೆದುಕೊಂಡರು.

    2018-19ನೇ ಸಾಲಿನಲ್ಲಿ ಸರ್ಕಾರದಿಂದ ಮಂಜೂರಾದ ಸಿಲಿಂಡರ್, ಸೋಲಾರ್​ಲ್ಯಾಂಪ್, ಸೋಲಾರ್ ವಾಟರ್ ಹೀಟರ್ ಹಾಗೂ ಜೇನು ಪೆಟ್ಟಿಗೆ ವಿತರಿಸಿರುವ ಕುರಿತು ಸರಿಯಾದ ಮಾಹಿತಿ ನೀಡಿಲ್ಲ. ಮಾಹಿತಿ ಕೇಳುತ್ತಾರೆ ಎಂದೇ ಸಭೆಗೆ ಕಿರಿ ಅಧಿಕಾರಿಗಳನ್ನು ಕಳುಹಿಸುತ್ತಾರೆ. ಇಂದಿನ ಸಭೆಗೆ ಅವರೇ ಆಗಮಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಹೀಗಾಗಿ ದೂರವಾಣಿ ಕರೆ ಮಾಡಿ ಸಭೆಗೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಲಾಯಿತು.

    2018-19ನೇ ಸಾಲಿನಲ್ಲಿ ಸೋಲಾರ್ ಲ್ಯಾಂಪ್, ಸೋಲಾರ್ ವಾಟರ್ ಹೀಟರ್ ಹಾಗೂ ಜೇನು ಪೆಟ್ಟಿಗೆ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ. ಇನ್ನು ಗ್ಯಾಸ್ ರಿಫಿಲ್ಲಿಂಗ್ ಹಣವೂ ತಲುಪಿಲ್ಲ ಎಂದು ಸದಸ್ಯರಾದ ಮಹಾವೀರ ಜೈನರ್, ಮಲ್ಲಪ್ಪ ಭಾವಿಕಟ್ಟಿ , ಈರಪ್ಪ ಏಣಗಿ, ಇತರರು ಆರೋಪಿಸಿದರು.

    ಪ್ರತಿಕ್ರಿಯಿಸಿದ ಆರ್​ಎಫ್​ಒ ವಿಜಯಕುಮಾರ, ಗ್ಯಾಸ್ ರಿಫಿಲ್ಲಿಂಗ್ ಹಣವನ್ನು ಫಲಾನುಭವಿ ಖಾತೆಗೆ ಜಮೆ ಮಾಡುವಂತೆ ಈಗಾಗಲೇ ಏಜೆನ್ಸಿಗೆ ಸೂಚಿಸಲಾಗಿದೆ. ಉಳಿದಂತೆ ಅರ್ಹ ಫಲಾನುಭವಿಗಳಿಗೆ ಸೋಲಾರ್​ಲ್ಯಾಂಪ್, ಸೋಲಾರ್ ವಾಟರ್ ಹೀಟರ್ ಹಾಗೂ ಜೇನು ಪೆಟ್ಟಿಗೆ ವಿತರಿಸಿರುವ ಭಾವಚಿತ್ರ ಸಹ ಪಡೆಯಲಾಗಿದೆ ಎಂದರು.

    ಇದರಿಂದ ಮತ್ತಷ್ಟು ಕೆರಳಿದ ಸದಸ್ಯರು, ಇಲಾಖೆ ಅಧಿಕಾರಿಗಳು ನೀಡಿದ ಫಲಾನುಭವಿಗಳ ಮಾಹಿತಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸದಸ್ಯರು ನೀಡಿದ ಫಲಾನುಭವಿಗಳ ಪಟ್ಟಿ ಬಿಟ್ಟು ಇತರರಿಗೆ ನೀಡಲಾಗಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ವಿಜಯಕುಮಾರ, ಪಟ್ಟಿಯಲ್ಲಿರುವ ಫಲಾನುಭವಿಗಳು ಯೋಜನೆ ಲಾಭ ಪಡೆದಿದ್ದಾರೆ. ಒಂದು ವೇಳೆ ಅವರು ಪಡೆದಿಲ್ಲವಾದರೆ, ನಾನೇ ಸ್ವತಃ ಹಣ ಖರ್ಚು ಮಾಡಿ, ಸದಸ್ಯರ ಸಮ್ಮುಖದಲ್ಲಿ ನೀಡುವುದಾಗಿ ಭರವಸೆ ನೀಡಿದರು.

    ಅಧ್ಯಕ್ಷ ರವಿವರ್ಮ ಪಾಟೀಲ ಮಾತನಾಡಿ, ಮಂಗಳವಾರ ಪಿಡಿಒ, ತಾಪಂ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಯಲಿದೆ. ಸರಿಯಾದ ದಾಖಲೆಯೊಂದಿಗೆ ಸಭೆಗೆ ಹಾಜರಾಗಿ ಸಮಗ್ರ ಮಾಹಿತಿ ನೀಡಬೇಕು ಎಂದರು.

    ಇದಕ್ಕೂ ಪೂರ್ವದಲ್ಲಿ ಕೃಷಿ ಇಲಾಖೆ, ಪಶು ವೈದ್ಯಕೀಯ, ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆ ಪ್ರಗತಿ ಮಾಹಿತಿ ನೀಡಿದರು.

    ಉಪಾಧ್ಯಕ್ಷೆ ಫಕೀರವ್ವ ನಾಯ್ಕರ, ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ ಬುಡ್ಡಿಕಾಯಿ, ತಾಪಂ ಇಒ ಎಸ್.ಎಸ್. ಖಾದ್ರೊಳ್ಳಿ, ಇತರರು ಇದ್ದರು.

    ಹೆಸರೊಬ್ಬರದು, ಕೊಟ್ಟಿದ್ದು ಇನ್ನೊಬ್ಬರಿಗೆ

    ಅರಣ್ಯ ಇಲಾಖೆ ಜೇನು ಪಟ್ಟಿಗೆ ನೀಡಿರುವ ಮಾಹಿತಿ ಪರಿಶೀಲಿಸಿದ ಹಾರೋಬೆಳವಡಿ ಕ್ಷೇತ್ರದ ಸದಸ್ಯ ಈರಪ್ಪ ಏಣಗಿ, ಅಧಿಕಾರಿಗಳು ಸ್ವೀಕೃತಿ ಪತ್ರದಲ್ಲಿ ನಮೂದಿಸಿರುವ ಹೆಸರೇ ಬೇರೆ. ಪಟ್ಟಿಗೆ ನೀಡಿದ್ದು ಬೇರೆಯವರಿಗೆ ಎಂಬ ಮಾಹಿತಿ ಬಹಿರಂಗಪಡಿಸಿದರು. ಇದರ ಜತೆಗೆ ಅಧ್ಯಕ್ಷರೂ ಪರಿಶೀಲಿಸಿ ಇಂತಹ ಮತ್ತೊಂದು ಮಾಹಿತಿ ನೀಡಿದರು. ಸದಸ್ಯರು ನೀಡಿದ ಪಟ್ಟಿ ಬಿಟ್ಟು ತಮಗೆ ತಿಳಿದವರಿಗೆ ಯೋಜನೆ ಲಾಭ ನೀಡಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕಕ್ಕಾಬಿಕ್ಕಿಯಾದ ವಿಜಯಕುಮಾರ, ಈ ರೀತಿ ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ಬೇರೆಯವರಿಗೆ ಯೋಜನೆ ಲಾಭ ತಲುಪಿದ್ದರೆ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

    ಕ್ರಿಯಾ ಯೋಜನೆಗೆ ಅನುಮೋದನೆ

    ತಾಲೂಕು ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ಧಪಡಿಸಿರುವ 2020-21ನೇ ಸಾಲಿನ 1.50 ಕೋಟಿ ರೂ. ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ರಸ್ತೆ, ಶಾಲೆ, ಅಂಗನವಾಡಿ ದುರಸ್ತಿ, ಹೈಮಾಸ್ಟ್ ದೀಪ ಅಳವಡಿಕೆ ಸೇರಿ ಇತರ ಅಭಿವೃದ್ಧಿ ಕಾಮಗಾರಿಗಳ ಅ ನಿರ್ಬಂಧಿತ ಅನುದಾನದ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಿ ಠರಾವು ಪಾಸ್ ಮಾಡಿ, ಜಿ.ಪಂ. ಅನುಮೋದನೆಗೆ ಕಳುಹಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts